

ಅಮರಾವತಿ: ಭ್ರಷ್ಟಾಚಾರವನ್ನು ಕೊನೆಗಾಣಿಸಲು 500 ಮತ್ತು 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸುವಂತೆ ಆಂಧ್ರಪ್ರದೇಶದ ಸಿಎಂ ಎನ್. ಚಂದ್ರಬಾಬು ನಾಯ್ಡು ಅವರು ಸೋಮವಾರ(ನ. 09) ಕರೆ ನೀಡಿದ್ದಾರೆ. ಮತ್ತು ಹೆಚ್ಚಿನ ಮೌಲ್ಯದ ನಗದು ವಹಿವಾಟುಗಳನ್ನು ನಿರ್ಮೂಲನೆ ಮಾಡುವುದರಿಂದ ಭ್ರಷ್ಟಾಚಾರದ ಸರಪಳಿ ಮುರಿಯಲು, ಸಂಪತ್ತು ಸೃಷ್ಟಿ ಮತ್ತು ಬಡತನ ನಿರ್ಮೂಲನೆಗೆ ಸಹಾಯವಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ವಿಶಾಖಪಟ್ಟಣಂನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಡಿಜಿಟಲ್ ಕರೆನ್ಸಿ ಮತ್ತು ತಂತ್ರಜ್ಞಾನ ಆಧಾರಿತ ಆಡಳಿತದ ಪರವಾಗಿ ವಾದಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದ ವರದಿಯೊಂದಕ್ಕಾಗಿ ತಾವು ಈ ಹಿಂದೆ ಸಲಹೆಗಳನ್ನು ಸಲ್ಲಿಸಿದ್ದಾಗಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಈ ವಿಷಯವನ್ನು ಪದೇ ಪದೇ ಪ್ರಸ್ತಾಪಿಸಿದ್ದಾಗಿ ತಿಳಿಸಿದ್ದಾರೆ.
ಡಿಜಿಟಲ್ ಕರೆನ್ಸಿ ವರದಿಗೆ ನಾನು ಸಲಹೆಗಳನ್ನು ನೀಡಿದ್ದೆ. ಈ ಬಗ್ಗೆ ಪರಿಗಣಿಸುವಂತೆ ನಾನು ಈ ಹಿಂದೆಯೇ ಪ್ರಧಾನ ಮಂತ್ರಿಯವರನ್ನು ಕೋರಿದ್ದೆ ಮತ್ತು ಈಗ ಮತ್ತೆ ಒತ್ತಾಯಿಸುತ್ತಿದ್ದೇನೆ. ನಾನು ಈ ವಿಷಯವನ್ನು ಪದೇ ಪದೇ ಪ್ರಸ್ತಾಪಿಸುತ್ತಲೇ ಇರುತ್ತೇನೆ. 500, 1,000 ಮತ್ತು 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಬೇಕು. ಕೇವಲ 100 ಮತ್ತು 200 ರೂಪಾಯಿ ನೋಟುಗಳು ಮಾತ್ರ ಚಲಾವಣೆಯಲ್ಲಿ ಉಳಿಯಬೇಕು ಎಂದು ಹೇಳಿದ್ದಾರೆ.
ನೋಟು ಅಮಾನ್ಯೀಕರಣದ 10ನೇ ವಾರ್ಷಿಕೋತ್ಸವದ ಮರುದಿನವೇ ನಾಯ್ಡು ಅವರು ಈ ಹೇಳಿಕೆ ನೀಡಿದ್ದಾರೆ. 2016ರ ನವೆಂಬರ್ 8ರಂದು ಕೇಂದ್ರ ಸರ್ಕಾರವು ಕಪ್ಪು ಹಣ, ನಕಲಿ ಕರೆನ್ಸಿ ಮತ್ತು ಭ್ರಷ್ಟಾಚಾರವನ್ನು ತಡೆಯುವ ಕ್ರಮವಾಗಿ 500 ಮತ್ತು 1,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿತ್ತು.
ಮುಂದುವರೆದು, ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದರೆ, ಸಂಪತ್ತು ಸೃಷ್ಟಿ ಕಷ್ಟವಲ್ಲ ಮತ್ತು ಬಡತನ ನಿರ್ಮೂಲನೆಯೂ ಕಷ್ಟವಲ್ಲ ಎಂದಿದ್ದಾರೆ. ವಿವಿಧ ಹಂತಗಳಲ್ಲಿನ ವ್ಯವಸ್ಥೆಗಳಲ್ಲಿನ ನ್ಯೂನತೆಗಳು ಭ್ರಷ್ಟಾಚಾರವು ಒಂದು ವಿಷವರ್ತುಲವಾಗಲು ಅವಕಾಶ ಮಾಡಿಕೊಟ್ಟಿವೆ. ಅದನ್ನು ಮುರಿಯಲು ಪ್ರಯತ್ನಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).