ಮಹಿಳೆಯರಿಗೆ ಟಿಎಂಸಿ ದ್ರೋಹ! ಬಂಗಾಳದ ಅಖಾಡದಲ್ಲಿ ಮೋದಿ ಶಂಖನಾದ: ದೀದಿಯ ಮಹಾ ಜಂಗಲ್ ರಾಜ್ ಅಂತ್ಯಕ್ಕೆ ಕರೆ! PM Modi

ಮಹಿಳೆಯರಿಗೆ ಟಿಎಂಸಿ ದ್ರೋಹ! ಬಂಗಾಳದ ಅಖಾಡದಲ್ಲಿ ಮೋದಿ ಶಂಖನಾದ: ದೀದಿಯ ಮಹಾ ಜಂಗಲ್ ರಾಜ್ ಅಂತ್ಯಕ್ಕೆ ಕರೆ!
ಮಹಿಳೆಯರಿಗೆ ಟಿಎಂಸಿ ದ್ರೋಹ! ಬಂಗಾಳದ ಅಖಾಡದಲ್ಲಿ ಮೋದಿ ಶಂಖನಾದ: ದೀದಿಯ ಮಹಾ ಜಂಗಲ್ ರಾಜ್ ಅಂತ್ಯಕ್ಕೆ ಕರೆ!
Published on
ಬಿಷ್ಣುಪುರ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಬಿಷ್ಣುಪುರದಲ್ಲಿ ಭಾನುವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ(PM Modi), ತೃಣಮೂಲ ಕಾಂಗ್ರೆಸ್ (TMC) ಮತ್ತು ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮಹಿಳಾ ಮೀಸಲಾತಿ ಮಸೂದೆಯನ್ನು ತಡೆಯಲು ಈ ಎರಡೂ ಪಕ್ಷಗಳು ಪರಸ್ಪರ ಕೈಜೋಡಿಸಿವೆ ಎಂದು ಮೋದಿ ಗುಡುಗಿದ್ದಾರೆ.

ಮಹಿಳಾ ಮೀಸಲಾತಿ: ಟಿಎಂಸಿ-ಕಾಂಗ್ರೆಸ್ ಒಳಸಂಚು?

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಸಾಂವಿಧಾನಿಕ ತಿದ್ದುಪಡಿ ಮಸೂದೆಗೆ ಅಡ್ಡಿಪಡಿಸಿದ ವಿಚಾರವಾಗಿ ಮಾತನಾಡಿದ ಪ್ರಧಾನಿ, ಬಂಗಾಳದ ತಾಯಂದಿರು ಮತ್ತು ಸಹೋದರಿಯರಿಗೆ ಟಿಎಂಸಿ ದ್ರೋಹ ಬಗೆದಿದೆ. ಮಹಿಳೆಯರಿಗೆ ಸಿಗಬೇಕಾದ ನ್ಯಾಯವನ್ನು ತಡೆಯಲು ಟಿಎಂಸಿ ಮತ್ತು ಕಾಂಗ್ರೆಸ್ ಒಳಸಂಚು ರೂಪಿಸಿವೆ ಎಂದು ಆರೋಪಿಸಿದ್ದಾರೆ.
ಮುಂದುವರೆದು ಮಾತನಾಡಿದ ಪಿಎಂ, ಬಂಗಾಳದ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಸಿಗಬೇಕು ಎಂಬುದು ಮೋದಿಯ ಸಂಕಲ್ಪವಾಗಿತ್ತು. ಆದರೆ ಬಂಗಾಳದ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಎಂಎಲ್‌ಎ ಮತ್ತು ಎಂಪಿಗಳಾಗಿ ಆಯ್ಕೆಯಾಗುವುದು ಮಮತಾ ದೀದಿಗೆ ಇಷ್ಟವಿಲ್ಲ. ಯಾಕೆಂದರೆ ಇಲ್ಲಿನ ಹೆಣ್ಣುಮಕ್ಕಳು ಅವರ ಮಹಾ ಜಂಗಲ್ ರಾಜ್'ಗೆ ಸವಾಲಾಗುತ್ತಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನುಸುಳುಕೋರರಿಗೆ ಮಣೆ, ಕುರ್ಮಿ ಸಮುದಾಯಕ್ಕೆ ನಿರ್ಲಕ್ಷ್ಯ"

ಟಿಎಂಸಿ ಸರ್ಕಾರವು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುತ್ತಿದೆ ಮತ್ತು ನುಸುಳುಕೋರರಿಗೆ ರಾಜ್ಯದ ಬಾಗಿಲು ತೆರೆದಿದೆ ಎಂದು ಮೋದಿ ಕಿಡಿಕಾರಿದ್ದಾರೆ.
ಕುರ್ಮಿ ಸಮುದಾಯ: ಕುರ್ಮಿ ಸಮುದಾಯದ ಬೇಡಿಕೆಗಳನ್ನು ಟಿಎಂಸಿ ಸಂಪೂರ್ಣವಾಗಿ ನಿರ್ಲಕ್ಷಿಸಿದೆ.
ಬುಡಕಟ್ಟು ವಿರೋಧಿ ನೀತಿ: ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿದಾಗ ಟಿಎಂಸಿ ಮತ್ತು ಕಾಂಗ್ರೆಸ್ ಅವರನ್ನು ವಿರೋಧಿಸುವ ಮೂಲಕ ತಮ್ಮ ಬುಡಕಟ್ಟು ವಿರೋಧಿ ನಿಲುವನ್ನು ಪ್ರದರ್ಶಿಸಿವೆ ಎಂದು ಮೋದಿ ನೆನಪಿಸಿದ್ದಾರೆ.

ಮೇ 4ರ ನಂತರ ಟಿಎಂಸಿ ಗೂಂಡಾಗಳಿಗೆ ಜಾಗವಿಲ್ಲ!

ಬಂಗಾಳದಲ್ಲಿ ಭ್ರಷ್ಟಾಚಾರ ಮತ್ತು ಲೂಟಿ ಮಿತಿಮೀರಿದೆ ಎಂದು ಆರೋಪಿಸಿದ ಮೋದಿ, ಬಿಜೆಪಿ ಅಧಿಕಾರಕ್ಕೆ ಬಂದರೆ ಬಡವರಿಗೆ ಉಚಿತ ಪಡಿತರ ಸಿಗಲಿದೆ ಮತ್ತು ಪಡಿತರ ಲೂಟಿ ಮಾಡುವವರಿಗೆ ಜೈಲೇ ಗತಿ ಎಂದರು. ಟಿಎಂಸಿ ಗೂಂಡಾಗಳು ಈಗಲೇ ಪೊಲೀಸರಿಗೆ ಶರಣಾಗುವುದು ಲೇಸು. ಮೇ 4ರಂದು ಫಲಿತಾಂಶ ಬಂದ ನಂತರ ಒಬ್ಬರನ್ನೂ ಬಿಡುವುದಿಲ್ಲ ಎಂದು ಮೋದಿ ಎಚ್ಚರಿಸಿದ್ದಾರೆ.

ಪಶ್ಚಿಮ ಬಂಗಾಳ ಚುನಾವಣೆ: ಪ್ರಮುಖ ಮಾಹಿತಿ

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗಳು ಎರಡು ಹಂತಗಳಲ್ಲಿ ನಡೆಯಲಿವೆ:
ಮೊದಲ ಹಂತ: ಏಪ್ರಿಲ್ 23
ಎರಡನೇ ಹಂತ: ಏಪ್ರಿಲ್ 29
ಫಲಿತಾಂಶ: ಮೇ 4,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net