ಕೇಂದ್ರದಲ್ಲಿ ನಾನಿದ್ದೇನೆ, ರಾಜ್ಯದಲ್ಲೂ ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ; ವಿಕಸಿತ ಬಂಗಾಳಕ್ಕಾಗಿ ಪ್ರಧಾನಿ ಮೋದಿ ಮನವಿ | Narendra Modi

Narendra Modi | ಪ್ರಧಾನಿ ನರೇಂದ್ರ ಮೋದಿ
Narendra Modi | ಪ್ರಧಾನಿ ನರೇಂದ್ರ ಮೋದಿ
Published on
ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ಚುನಾವಣೆಗಳು ಕೇವಲ ರಾಜಕೀಯ ಬದಲಾವಣೆಗಾಗಿ ಅಲ್ಲ, ರಾಜ್ಯದ ಅಸ್ಮಿತೆ ಮತ್ತು ಶ್ರೀಮಂತ ಪರಂಪರೆಯನ್ನು ರಕ್ಷಿಸುವ ಹೋರಾಟವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು.
ಜಾರ್ಗ್ರಾಮ್‌ನಲ್ಲಿ ಭಾನುವಾರ (ಏಪ್ರಿಲ್ 19) ನಡೆದ ಬೃಹತ್ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಟಿಎಂಸಿ ಸರ್ಕಾರವು ಅನುಸರಿಸುತ್ತಿರುವ ಹಾದಿ ರಾಜ್ಯದ ಸಂಸ್ಕೃತಿಗೆ ಅತ್ಯಂತ ಅಪಾಯಕಾರಿಯಾಗಿದೆ ಎಂದು ಎಚ್ಚರಿಸಿದರು.
ಟಿಎಂಸಿ ಸರ್ಕಾರವು ಒಳನುಸುಳುಕೋರರಿಗಾಗಿ ಮತ್ತು ಅವರ ಹಿತಾಸಕ್ತಿಗಳಿಗಾಗಿ ಕೆಲಸ ಮಾಡಲು ಬಯಸುತ್ತಿದ್ದು, ಇಂತಹ ಆಡಳಿತವು ಒಳನುಸುಳುಕೋರರ ಧರ್ಮ, ಭಾಷೆ ಮತ್ತು ಪದ್ಧತಿಗಳ ರಕ್ಷಣೆಗೆ ಮಾತ್ರ ಒತ್ತು ನೀಡುತ್ತದೆ ಎಂದು ಆರೋಪಿಸಿದ ಮೋದಿ, ಬಂಗಾಳದ ಪ್ರತಿಯೊಂದು ವರ್ಗವೂ ಈ ಬಾರಿ ಟಿಎಂಸಿ ಸರ್ಕಾರವನ್ನು ಕಿತ್ತೊಗೆಯಲು ಸಂಕಲ್ಪ ಮಾಡಿದ್ದು, ಈ ಚುನಾವಣೆಯನ್ನು ಕೇವಲ ಬಿಜೆಪಿ ಎದುರಿಸುತ್ತಿಲ್ಲ, ಬದಲಾಗಿ ಬಂಗಾಳದ ಜನರೇ ನೇರವಾಗಿ ಟಿಎಂಸಿ ವಿರುದ್ಧ ಹೋರಾಡುತ್ತಿದ್ದಾರೆ ಎಂದರು.
ಆಡಳಿತ ಪಕ್ಷವು ಸಾರ್ವಜನಿಕ ಕಲ್ಯಾಣವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು, ಟಿಎಂಸಿಯ ಸಂಸದರು ಮತ್ತು ಶಾಸಕರು ಜನರ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸುವ ಬದಲು ತಮ್ಮ ಜೇಬು ತುಂಬಿಸಿಕೊಳ್ಳುವಲ್ಲಿ ಮತ್ತು ಸಿಂಡಿಕೇಟ್ ಸಂಸ್ಕೃತಿಯಲ್ಲಿ ಮುಳುಗಿದ್ದಾರೆ ಎಂದಿರುವ ಪ್ರಧಾನಿ, ಬುಡಕಟ್ಟು ಸಮುದಾಯದ ಸಾವಿರಾರು ಎಕರೆ ಭೂಮಿಯನ್ನು ಟಿಎಂಸಿಯ ಗೂಂಡಾಗಳು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ ಮತ್ತು ಸಾಮಾನ್ಯ ಜನರಿಗೆ ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಕರ್ಯಗಳ ಸೌಲಭ್ಯಗಳನ್ನು ನಿರಾಕರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಟಿಎಂಸಿಯಿಂದ ತಾಯಂದಿರಿಗೆ ಮೋಸ...

ಮಹಿಳಾ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಟಿಎಂಸಿ ಪಕ್ಷವು ಮಾ, ಮತಿ, ಮಾನುಷ್ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ತಾಯಂದಿರಿಗೇ ದ್ರೋಹ ಬಗೆದಿದೆ ಎಂದು ಆರೋಪಿಸಿದರು. ಸಂಸತ್ತಿನಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡುವ ಬಿಜೆಪಿಯ ಪ್ರಯತ್ನಗಳನ್ನು ಟಿಎಂಸಿ ವಿರೋಧಿಸುವ ಮೂಲಕ ಹೆಣ್ಣುಮಕ್ಕಳ ರಾಜಕೀಯ ಪ್ರಗತಿಗೆ ಅಡೆತಡೆಗಳನ್ನು ಸೃಷ್ಟಿಸಿದೆ ಎಂದು ಹೇಳಿದರು.
ಅಭಿವೃದ್ದಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಪ್ರಧಾನಿ, ಈ ಹಿಂದೆ ಕಾಂಗ್ರೆಸ್ ಮತ್ತು ಟಿಎಂಸಿ ಭಾಗಿಯಾಗಿದ್ದ ಸರ್ಕಾರಗಳ ಅವಧಿಯಲ್ಲಿ ಕೇವಲ 8-10 ಸಣ್ಣ ಅರಣ್ಯ ಉತ್ಪನ್ನಗಳಿಗೆ ಎಂಎಸ್‌ಪಿ ನೀಡಲಾಗುತ್ತಿತ್ತು, ಆದರೆ ಇಂದು ಬಿಜೆಪಿ ಸರ್ಕಾರವು ಸುಮಾರು 100 ಉತ್ಪನ್ನಗಳಿಗೆ ಎಂಎಸ್‌ಪಿ ವಿಸ್ತರಿಸಿದೆ. ಒಡಿಶಾ ಮತ್ತು ಛತ್ತೀಸ್‌ಗಢದ ಬಿಜೆಪಿ ಸರ್ಕಾರಗಳಂತೆ ಬಂಗಾಳದ ಬುಡಕಟ್ಟು ಕುಟುಂಬಗಳಿಗೂ ಈ ಎಲ್ಲ ಸೌಲಭ್ಯಗಳು ತಲುಪುವಂತೆ ಮಾಡುವುದು ಮೋದಿ ಗ್ಯಾರಂಟಿ ಎಂದು ಭರವಸೆ ನೀಡಿದರು.
ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯ ಮೂಲಕ ವಿದ್ಯುತ್ ಬಿಲ್‌ಗಳನ್ನು ಕಡಿಮೆ ಮಾಡುವ ಮತ್ತು ಉತ್ತಮ ಮೂಲಸೌಕರ್ಯ ಒದಗಿಸುವ ಭರವಸೆ ನೀಡಿದ ಮೋದಿ, ದೆಹಲಿಯಲ್ಲಿ ನನ್ನನ್ನು ಪ್ರಧಾನಿಯನ್ನಾಗಿ ಮಾಡಿರುವಂತೆ, ಬಂಗಾಳದ ಅಭಿವೃದ್ಧಿಗಾಗಿ ರಾಜ್ಯದಲ್ಲಿಯೂ ಬಿಜೆಪಿ ಮುಖ್ಯಮಂತ್ರಿಯನ್ನು ಆರಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net