ಅಂದಿನ ಸಾಂಸ್ಕೃತಿಕ ಕೇಂದ್ರ ಈಗ ಕೈಗಾರಿಕೆಗಳ ಸ್ಮಶಾನ..! ಬಂಗಾಳದ ವೈಭವ ಮರಳಲು ಡಬಲ್ ಇಂಜಿನ್ ಸರ್ಕಾರವೇ ಮದ್ದು ಎಂದ ಸಿಎಂ ಯೋಗಿ ​| Yogi Adityanath

 Yogi Adityanath |  ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
Yogi Adityanath | ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
Published on
ಕೊಲ್ಕತ್ತಾ: ಒಂದು ಕಾಲದಲ್ಲಿ ದೇಶದ ಕೈಗಾರಿಕೆ, ಶಿಕ್ಷಣ ಮತ್ತು ಸಂಸ್ಕೃತಿಯ ಮುಂಚೂಣಿಯಲ್ಲಿದ್ದ ಬಂಗಾಳವು, ಇಂದು ಮಮತಾ ಬ್ಯಾನರ್ಜಿ ದುರಾಡಳಿತದಿಂದಾಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಿಡಿಕಾರಿದ್ದಾರೆ.
ಬುಧವಾರ ಕೋಲ್ಕತ್ತಾದ ಬುರ್ರಬಜಾರ್‌ನಲ್ಲಿ ನಡೆದ ಬೃಹತ್ ಪ್ರಚಾರ ಸಭೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಿಎಂ ಯೋಗಿ, ಟಿಎಂಸಿ ಆಡಳಿತಾವಧಿಯಲ್ಲಿ ಪಶ್ಚಿಮ ಬಂಗಾಳವು ಭಾರಿ ಕೈಗಾರಿಕಾ ಕುಸಿತವನ್ನು ಅನುಭವಿಸಿದೆ ಎಂದು ಆರೋಪಿಸಿದರು.

ಟ್ಯಾಗೋರ್ ಮನೆಯಲ್ಲಿ ದೀದಿ ಪೋಸ್ಟರ್‌..!

ಸುಮಾರು 7,000 ಕ್ಕೂ ಹೆಚ್ಚು ದೊಡ್ಡ ಕೈಗಾರಿಕೆಗಳು ಮತ್ತು ಸಾವಿರಾರು ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು (MSME) ಮುಚ್ಚಲ್ಪಟ್ಟಿವೆ ಎಂದು ಅಂಕಿಅಂಶಗಳ ಸಮೇತ ವಿವರಿಸಿದ ಯುಪಿ ಸಿಎಂ, ಇದರಿಂದಾಗಿ ಸುಮಾರು 30 ಲಕ್ಷ ಯುವಕರು ಬೀದಿಪಾಲಾಗಿದ್ದಾರೆ. ಇಂದು ಬಂಗಾಳವು ಉದ್ಯೋಗ ಸೃಷ್ಟಿಸುವ ರಾಜ್ಯವಾಗುವ ಬದಲು ಕೈಗಾರಿಕೆಗಳ ಸ್ಮಶಾನವಾಗಿ ಮಾರ್ಪಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದರು. ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಅವರ ಪರಂಪರೆಗೆ ಟಿಎಂಸಿ ಸರ್ಕಾರ ಅಗೌರವ ತೋರುತ್ತಿದೆ ಎಂದು ಆರೋಪಿಸಿದ ಯೋಗಿ, ಜೋರಾಸಂಕೊದಲ್ಲಿರುವ ಟ್ಯಾಗೋರ್ ಅವರ ಪೂರ್ವಜರ ಮನೆಯೊಳಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪೋಸ್ಟರ್‌ಗಳನ್ನು ಹಾಕಿರುವುದನ್ನು ಪ್ರಸ್ತಾಪಿಸಿದರು. ಭಾರತ ಮಾತೆಯ ಪ್ರತಿಮೆಗಳು ಇರಬೇಕಾದ ಇಂತಹ ಪವಿತ್ರ ಸ್ಥಳಗಳನ್ನು ಟಿಎಂಸಿ ರಾಜಕೀಯ ಪ್ರದರ್ಶನದ ವೇದಿಕೆಯನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಟೀಕಿಸಿದರು.
ಬಂಗಾಳದಲ್ಲಿ ಕಳೆದುಹೋಗಿರುವ ವೈಭವವನ್ನು ಪುನಃಸ್ಥಾಪಿಸಲು ಸರ್ಕಾರ ಬದಲಾವಣೆಯ ಅಗತ್ಯವಿದೆ , ಅಭಿವೃದ್ಧಿಯ ವೇಗ ಹೆಚ್ಚಿಸಲು ರಾಜ್ಯಕ್ಕೆ ಡಬಲ್-ಎಂಜಿನ್ ಸರ್ಕಾರ ಅವಶ್ಯಕವಾಗಿದೆ. ಬಂಗಾಳದಲ್ಲಿ ದುರ್ಗಾ ಪೂಜೆ ಮತ್ತು ಕಾಳಿ ಪೂಜೆಯಂತಹ ಧಾರ್ಮಿಕ ಹಬ್ಬಗಳಿಗೆ ಟಿಎಂಸಿ ಅನಗತ್ಯ ನಿರ್ಬಂಧಗಳನ್ನು ಹೇರುತ್ತಿದೆ ಎಂದು ಆರೋಪಿಸಿದ ಯೋಗಿ ಆದಿತ್ಯಾನಾಥ್​ ಅವರು, ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದ ಟಿಎಂಸಿಯ ನಿಲುವನ್ನು ಕಟುವಾಗಿ ಪ್ರಶ್ನಿಸಿದರು.
ಈ ವರ್ಷ ವಂದೇ ಮಾತರಂನ 150ನೇ ವಾರ್ಷಿಕೋತ್ಸವ ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ಬಂಗಾಳವು ತನ್ನ ಸಂಸ್ಕೃತಿ ಮತ್ತು ಗುರುತನ್ನು ಉಳಿಸಿಕೊಳ್ಳಲು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಯೋಗಿ ಆದಿತ್ಯನಾಥ್ ಮನವಿ ಮಾಡಿದರು. 294 ಸದಸ್ಯ ಬಲದ ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ. ಸತತ ನಾಲ್ಕನೇ ಬಾರಿ ಅಧಿಕಾರ ಹಿಡಿಯಲು ಟಿಎಂಸಿ ಪ್ರಯತ್ನಿಸುತ್ತಿದ್ದರೆ, ರಾಜ್ಯದಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಲು ಬಿಜೆಪಿ ಸಜ್ಜಾಗಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net