ರೇಷನ್..ಉದ್ಯೋಗ ಬೇಕೆ..? ಮೊದಲು ಸ್ಕ್ಯಾನ್ ಮಾಡಿ..! ಟಿಎಂಸಿ ಸರ್ಕಾರದ ಕಾಲೆಳೆದ ಬಿಜೆಪಿ ಕ್ಯೂಆರ್ ಕೋಡ್ ಅಭಿಯಾನದ ಅಸಲಿ ಕಹಾನಿ ಇಲ್ಲಿದೆ! | Pay2TMC

Pay2TMC | ಟಿಎಂಸಿ ಸರ್ಕಾರದ ಕಾಲೆಳೆದ ಬಿಜೆಪಿ ಕ್ಯೂಆರ್ ಕೋಡ್ ಅಭಿಯಾನ
Pay2TMC | ಟಿಎಂಸಿ ಸರ್ಕಾರದ ಕಾಲೆಳೆದ ಬಿಜೆಪಿ ಕ್ಯೂಆರ್ ಕೋಡ್ ಅಭಿಯಾನ
Published on
ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿರುದ್ಧ ಬಿಜೆಪಿ ಡಿಜಿಟಲ್ ಮತ್ತು ಪೋಸ್ಟರ್ ಅಭಿಯಾನವನ್ನು ತೀವ್ರಗೊಳಿಸಿದೆ.
ನಗರದಾದ್ಯಂತ ಮಾರುಕಟ್ಟೆಗಳು, ಬಸ್ ನಿಲ್ದಾಣಗಳು ಮತ್ತು ಪ್ರಮುಖ ಸಾರಿಗೆ ಕೇಂದ್ರಗಳಲ್ಲಿ ಟಿಎಂಸಿ ಸರ್ಕಾರದ ಕಟ್-ಮನಿ ಸಂಸ್ಕೃತಿಯನ್ನು ಅಣಕಿಸುವ ವಿಶಿಷ್ಟ ಪೋಸ್ಟರ್‌ಗಳು ಕಾಣಿಸಿಕೊಂಡಿದ್ದು, ಇವುಗಳನ್ನು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಎರಡು ಹಗರಣಗಳನ್ನು ಪ್ರತಿಬಿಂಬಿಸುತ್ತೇ ಈ ಅಭಿಯಾನ!

ಈ ಪೋಸ್ಟರ್‌ಗಳಲ್ಲಿ pay2tmc ಎಂಬ ಲೇಬಲ್ ಇರುವ ದೊಡ್ಡ ಕ್ಯೂಆರ್ ಕೋಡ್ (QR Code) ಚಿತ್ರವಿದ್ದು, ಅದರ ಕೆಳಗೆ ಬಂಗಾಳಿ ಭಾಷೆಯಲ್ಲಿ ರೇಷನ್ ಹೊಕ್ ಬಾ ಚಕ್ರಿ... ಸ್ಕ್ಯಾನ್ ಕೊರುನ್ ಎಂಬ ಸಾಲನ್ನು ಬರೆಯಲಾಗಿದೆ. ಪಡಿತರವೇ ಆಗಲಿ ಅಥವಾ ಉದ್ಯೋಗವೇ ಇರಲಿ... ಕೇವಲ ಸ್ಕ್ಯಾನ್ ಮಾಡಿ ಎಂಬರ್ಥದ ಈ ಸಾಲುಗಳು ರಾಜ್ಯದ ಜನಸಾಮಾನ್ಯರಲ್ಲಿ ಟಿಎಂಸಿ ಸರ್ಕಾರದ ಮೇಲಿರುವ ಅಸಮಾಧಾನವನ್ನು ಪ್ರತಿಬಿಂಬಿಸುತ್ತಿವೆ ಎಂದು ಮಾಳವಿಯಾ ವ್ಯಾಖ್ಯಾನಿಸಿದ್ದಾರೆ. ಈ ಅಭಿಯಾನವು ಮುಖ್ಯವಾಗಿ ರಾಜ್ಯದ ಎರಡು ಪ್ರಮುಖ ಹಗರಣಗಳಾದ ಶಾಲಾ ನೇಮಕಾತಿ ಹಗರಣ ಮತ್ತು ಪಡಿತರ ವಿತರಣಾ ಹಗರಣಗಳನ್ನು ಗುರಿಯಾಗಿಸಿಕೊಂಡಿದೆ.
ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗ ನೀಡಲು ಲಂಚದ ಬೇಡಿಕೆ ಇಡಲಾಗಿದೆ ಎಂಬ ಆರೋಪದ ಮೇಲೆ ನಡೆದ ಶಾಲಾ ನೇಮಕಾತಿ ಹಗರಣ ಮತ್ತು ಬಡವರಿಗೆ ಸೇರಬೇಕಾದ ಸಬ್ಸಿಡಿ ಆಹಾರವನ್ನು ಮಧ್ಯವರ್ತಿಗಳು ಲೂಟಿ ಮಾಡುತ್ತಿರುವ ಪಡಿತರ ಹಗರಣಗಳನ್ನು ಈ ಪೋಸ್ಟರ್‌ಗಳು ಜನರಿಗೆ ನೆನಪಿಸುತ್ತಿವೆ. ಮಮತಾ ಬ್ಯಾನರ್ಜಿಯವರ ಆಡಳಿತದಲ್ಲಿ ಪ್ರತಿಯೊಂದು ಮೂಲಭೂತ ಹಕ್ಕಿಗೂ ಹಣ ನೀಡಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದು ಟೀಕಿಸಿರುವ ಅಮಿತ್ ಮಾಳವಿಯಾ, ಟಿಎಂಸಿಯ ತೋಲಾಬಾಜಿ ಸಂಸ್ಕೃತಿಗೆ ಈಗ #PAY2TMC ಎಂಬ ಡಿಜಿಟಲ್ ವಿಳಾಸ ಸಿಕ್ಕಿದೆ ಎಂದು ಲೇವಡಿ ಮಾಡಿದ್ದಾರೆ.
ಧರ್ಮತಾಳದ ಬೀದಿಗಳಲ್ಲಿ ಸಾವಿರಾರು ಯುವಕರು ಉದ್ಯೋಗಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದರೆ, ಇತ್ತ ಟಿಎಂಸಿ ಸಿಂಡಿಕೇಟ್ ಬಡವರ ಆಹಾರವನ್ನು ಕಸಿದು ತಮ್ಮ ಖಜಾನೆ ತುಂಬಿಸಿಕೊಳ್ಳುತ್ತಿದೆ ಎಂದು ಮಾಳವಿಯಾ ಗಂಭೀರವಾಗಿ ಆರೋಪಿಸಿದ್ದಾರೆ. ಬಂಗಾಳದ ಗೋಡೆಗಳ ಮೇಲೆ ಬರೆಯಲಾಗಿರುವ ಈ ಆಕ್ರೋಶದ ಬರಹಗಳು ಭ್ರಷ್ಟ ಆಡಳಿತದ ಅಂತ್ಯಕ್ಕೆ ಮುನ್ನುಡಿ ಬರೆಯಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಅವರು, ನಾಳೆ ನಡೆಯಲಿರುವ ಮೊದಲ ಹಂತದ ಮತದಾನದಲ್ಲಿ ಟಿಎಂಸಿಯನ್ನು ಅಧಿಕಾರದಿಂದ ಶಾಶ್ವತವಾಗಿ ಲಾಗ್ ಔಟ್ ಮಾಡಲು ಮತದಾರರು ಸಜ್ಜಾಗಿದ್ದಾರೆ ಎಂದು ಹೇಳಿದ್ದಾರೆ.
294 ಸದಸ್ಯ ಬಲದ ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ. ಸತತ ನಾಲ್ಕನೇ ಬಾರಿ ಅಧಿಕಾರ ಹಿಡಿಯಲು ಟಿಎಂಸಿ ಪ್ರಯತ್ನಿಸುತ್ತಿದ್ದರೆ, ರಾಜ್ಯದಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಲು ಬಿಜೆಪಿ ಸಜ್ಜಾಗಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net