ತಮಿಳು ಮಣ್ಣಿನಲ್ಲಿ ತ್ರಿಭಾಷಾ ನೀತಿ ನಡೆಯಲ್ಲ; ಡಿಎಂಕೆ ರೀತಿಯಲ್ಲೇ ಪಿಎಂಶ್ರೀ ಯೋಜನೆ ಒಪ್ಪಲ್ಲ ಎಂದ ವಿಜಯ್ ಸರ್ಕಾರ | CM Vijay

ಪ್ರಧಾನಿ ಮೋದಿ ಮತ್ತು ಸಿಎಂ ವಿಜಯ್
ಪ್ರಧಾನಿ ಮೋದಿ ಮತ್ತು ಸಿಎಂ ವಿಜಯ್
Published on
ಚೆನ್ನೈ: ತಮಿಳುನಾಡಿನಲ್ಲಿ ಹೊಸದಾಗಿ ರಚನೆಯಾಗಿರುವ ನಟ ಸಿ.ಜೋಸೆಫ್ ವಿಜಯ್(CM Vijay) ನೇತೃತ್ವದ ಟಿವಿಕೆ ಸರ್ಕಾರ, ಡಿಎಂಕೆ ರೀತಿಯಲ್ಲೇ ರಾಜ್ಯದ ಸಾಂಪ್ರದಾಯಿಕ ದ್ವಿಭಾಷಾ ನೀತಿಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿದ್ದು, ಯಾವುದೇ ಕಾರಣಕ್ಕೂ ಸೈದ್ದಾಂತಿಕತೆಯಲ್ಲಿ ರಾಜಿಯಾಗಲ್ಲ, ಕೇಂದ್ರ ಸರ್ಕಾರದ ಪಿಎಂಶ್ರೀ ಯೋಜನೆ ಜಾರಿಗೊಳಿಸಲ್ಲ ಎಂದು ಹೇಳಿದೆ.
ಈ ಕುರಿತು ಮಾತನಾಡಿರುವ ಶಾಲಾ ಶಿಕ್ಷಣ ಸಚಿವ ರಾಜ್​ ಮೋಹನ್, ಕಳೆದ ಎರಡು ವರ್ಷಗಳಿಂದ ತಮಿಳುನಾಡಿಗೆ ಸಮಗ್ರ ಶಿಕ್ಷಾ ನಿಧಿಯನ್ನು ತಡೆದಿರುವ ಕೇಂದ್ರ ಸರ್ಕಾರದ ಕ್ರಮ ಸ್ವೀಕಾರಾರ್ಹವಲ್ಲ. ವಿದ್ಯಾರ್ಥಿಗಳಿಗಾಗಿ ಮೀಸಲಾದ ಹಣ, ಸರ್ಕಾರಿ ಅಧಿಕಾರಿಗಳಿಗೆ ಅಥವಾ ನಮಗಾಗಿ ಅಲ್ಲ. ಯಾವುದೇ ಕಾರಣಕ್ಕೂ ಅದನ್ನು ನಿಲ್ಲಿಸಬಾರದು ಎಂದು ತಿಳಿಸಿದ್ದಾರೆ.
ಇದೇ ವೇಳೆ ಪಿಎಂಶ್ರೀ ಯೋಜನೆ ಜಾರಿ ಮಾಡಲಾಗುತ್ತದೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿರುವ ಅವರು, ಮಹಿಳಾ ಹಕ್ಕುಗಳು ಮತ್ತು ಭೂ ಹಕ್ಕುಗಳು ಟಿವಿಕೆಯ ಮೂಲಭೂತ ತತ್ವಗಳಾಗಿರುವಂತೆಯೇ ದ್ವಿಭಾಷಾ ನೀತಿಯೂ ನಮ್ಮ ಘೋಷಿತ ನೀತಿಗಳಲ್ಲಿ ಒಂದಾಗಿದೆ. ತ್ರಿಭಾಷಾ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರುವ ಕೇಂದ್ರದ ಪಿಎಂಶ್ರೀ ಯೋಜನೆಯನ್ನು ಜಾರಿ ಮಾಡಲ್ಲ. ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ಸಿಂಗಾಪುರದ ಮಾಜಿ ಪ್ರಧಾನಿ ಲೀ ಕುವಾನ್ ಯೂ ಕೂಡ ರಾಷ್ಟ್ರವನ್ನು ನಿರ್ಮಿಸುವಾಗ ಜಗತ್ತಿನೊಂದಿಗೆ ಸಂಪರ್ಕ ಸಾಧಿಸಲು ಇಂಗ್ಲಿಷ್ ಭಾಷೆಯನ್ನು ಆರಿಸಿಕೊಂಡರು. ಇಂಗ್ಲಿಷ್ ಸಾಕು. ನಮ್ಮ ಸಿದ್ಧಾಂತದಲ್ಲಿ ಯಾವುದೇ ರಾಜಿ ಇಲ್ಲ ಎಂದು ಪ್ರತಿಪಾದಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net