ಭಯದ ವಾತಾವರಣ ಹರಡುವ ರಾಜಕೀಯ ನಿಲ್ಲಿಸಿ; ರಾಹುಲ್ ಗಾಂಧಿ ವಿರುದ್ಧ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಾಗ್ದಾಳಿ | Nirmala Sitharaman

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರಾಹುಲ್ ಗಾಂಧಿ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರಾಹುಲ್ ಗಾಂಧಿ
Published on
ನವದೆಹಲಿ: ದೇಶದಲ್ಲಿ ಮುಂದಿನ ದಿನಗಳು ಕಠಿಣವಾಗಿರಲಿದ್ದು, ಭೀಕರ ಆರ್ಥಿಕ ಸ್ಥಿತಿ ಎದುರಾಗಲಿದೆ ಎಂಬ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಕಿಡಿಕಾರಿರುವ ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್(Nirmala Sitharaman), ಭಯದ ವಾತಾವರಣ ಹರಡುವ ರಾಜಕೀಯ ನಿಲ್ಲಿಸಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಕಾಂಗ್ರೆಸ್ ಮತ್ತು ಅದರ ನಾಯಕರು ರಾಷ್ಟ್ರ ನಿರ್ಮಾಣಕ್ಕೆ ಸಕಾರಾತ್ಮಕವಾಗಿ ಕೊಡುಗೆ ನೀಡಲು ಸಾಧ್ಯವಾಗದಿದ್ದರೆ, ಸರ್ಕಾರದ ಕೆಲಸಕ್ಕೆ ಅಡ್ಡಿಪಡಿಸುವುದನ್ನಾದರು ನಿಲ್ಲಿಸಬೇಕು. ಜವಾಬ್ದಾರಿಯುತ ವಿಪಕ್ಷವಾಗಿ ಜನರಲ್ಲಿ ಭಯ ಹುಟ್ಟಿಸುವ ಕೆಲಸ ಮಾಡಬಾರದು ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿಯವರ ಕ್ರೋನಿ ಕ್ಯಾಪಿಟಲಿಸಂ ಆರೋಪವನ್ನು ತಳ್ಳಿ ಹಾಕಿರುವ ಅವರು, 2014ರಿಂದ ನರೇಂದ್ರ ಮೋದಿ ಸರ್ಕಾರವು ತನ್ನ ನೀತಿಗಳು ಮತ್ತು ಉಪಕ್ರಮಗಳು ಮೂಲಕ ಪ್ರತಿಯೊಂದು ವಲಯ ಮತ್ತು ಪ್ರತಿಯೊಂದು ವರ್ಗಕ್ಕೆ ಸೇವೆ ಸಲ್ಲಿಸಿದೆ. ಎಲ್ಲಾ ವರ್ಗದ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಿದೆ ಎಂದು ಪ್ರತಿಪಾದಿಸಿದ್ದಾರೆ.
ನಮ್ಮ ಯೋಜನೆಗಳು ಮತ್ತು ನೀತಿಗಳ ರೈತರು, ಬಡವರು, ಮಹಿಳೆಯರು, ಯುವಕರು ಮತ್ತು MSME ವಲಯಗಳಾಗಿವೆ. ಸರ್ಕಾರವು 58 ಕೋಟಿ ಜನ ಧನ್ ಖಾತೆಗಳು ಮತ್ತು 57 ಕೋಟಿ ಮುದ್ರಾ ಖಾತೆಗಳನ್ನು ತೆರೆಯಲು ಸಹಾಯ ಮಾಡಿದೆ. ಇದನ್ನೂ ಅದಾನಿ ಮತ್ತು ಅಂಬಾನಿಗಾಗಿ ತೆರೆದಿವೆಯೇ ಎಂದು ಪ್ರಶ್ನಿಸಿದ್ದಾರೆ.
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ, ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆ...? ಇ-ಶ್ರಮ್ ಕಾರ್ಡ್‌ಗಳು, ಸೋರಿಕೆಯಿಲ್ಲದೆ 125 ದಿನಗಳ ಉದ್ಯೋಗವನ್ನು ಒದಗಿಸುವ ಜಿ RAM ಜಿ ಕಾಯ್ದೆ, ಆಯುಷ್ಮಾನ್ ಭಾರತ್...? 9 ಕೋಟಿಗೂ ಹೆಚ್ಚು ಪಿಎಂ ಕಿಸಾನ್ ವಿತರಣೆಗಳು...? ಇವೆಲ್ಲಾ ಯಾರಿಗೆ ಎಂದು ಕಿಡಿಕಾರಿದ್ದಾರೆ. 

ರಾಹುಲ್ ಗಾಂಧಿ ಹೇಳಿದ್ದೇನು? 

ಮಂಗಳವಾರ ತಮ್ಮ ಸ್ವಕ್ಷೇತ್ರ ರಾಯ್​ಬರೇಲಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿದ್ದ ರಾಹುಲ್ ಗಾಂಧಿ, ದೇಶವು ಹಲವು ವರ್ಷಗಳಿಂದ ಕಾಣದ ದೊಡ್ಡ ಆರ್ಥಿಕ ಆಘಾತ ಎದುರಿಸಲಿದೆ. ವಿಷಾದದ ಸಂಗತಿ ಅಂದ್ರೆ, ಅದರ ಪರಿಣಾಮ ಅದಾನಿ ಮತ್ತು ಅಂಬಾನಿ ಅಥವಾ ಪ್ರಧಾನಿಯವರ ಮೇಲೆ ಬೀರುವುದಿಲ್ಲ, ಬದಲಿಗೆ ಸಾಮಾನ್ಯ ಜನರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಎಚ್ಚರಿಕೆ ನೀಡಿದ್ದರು. 
ದೇಶದಲ್ಲಿ ಹೀಗಿರುವ ಮೋದಿ ನೇತೃತ್ವದ ಸರ್ಕಾರ ಬದಲಾಗುವವರೆಗೂ ಹಣದುಬ್ಬರ ಏರಿಕೆಯಾಗುತ್ತಲೇ ಇರುತ್ತದೆ. ಬಿಜೆಪಿಯವರು ನನಗೆ ಏನೂ ಗೊತ್ತಿಲ್ಲ ಎನ್ನುತ್ತಾರೆ. ಪರಿಹಾರ ಕ್ರಮ ಕೈಗೊಳ್ಳಿ, ದೇಶದ ಜನರನ್ನು ಉಳಿಸಿ ಅಂದ್ರೆ, ವಿದೇಶಕ್ಕೆ ಹೋಗಿ ಅಂಬಾನಿ, ಅದಾನಿಗೆ ಸಹಾಯ ಮಾಡುತ್ತೇವೆ ಎನ್ನುತ್ತಾರೆ ಎಂದು ವಾಗ್ದಾಳಿ ನಡೆಸಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net