

ನವದೆಹಲಿ: ವಿಶ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿ ಪರಿಷತ್ ಚುನಾವಣೆಯನ್ನು ನಡೆಸುವಂತೆ, ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸರ್ಕಾರಕ್ಕೆ ಒತ್ತಾಯಿಸುತ್ತಾ, ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಈ ಪ್ರತಿಭಟನೆಗೆ ಬೆಂಬಲ ಸೂಚಿಸುತ್ತಾ ವಿಡಿಯೋವೊಂದನ್ನು ಹಂಚಿಕೊಂಡಿದ್ದ ಹಿರಿಯ ನಟ ನಸೀರುದ್ದೀನ್ ಶಾ, ತಾವೊಬ್ಬ ಹೆಮ್ಮೆಯ ದಿಮಾಗಿ ನಕ್ಸಲ್ ಎಂದು ಹೇಳಿಕೊಂಡಿದ್ದರು.
ಈಗ, ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಕೇಂದ್ರ ಸಚಿವ ಕಿರಣ್ ರಿಜುಜು, ನನಗೆ ನಸೀರುದ್ದೀನ್ ಶಾ ಬಗ್ಗೆ ಅಪಾರ ಗೌರವವಿತ್ತು. ಆದರೆ ಈಗ ಅವರ ನೈಜ ಮುಖ ಅನಾವರಣಗೊಂಡಿದೆ ಎಂದು ಬರೆದುಕೊಂಡಿದ್ದಾರೆ.
ನನಗೆ, ನಸೀರುದ್ದೀನ್ ಶಾ ಬಗ್ಗೆ ಅಪಾರವಾದ ಅಭಿಮಾನ ಮತ್ತು ಗೌರವವಿತ್ತು. ನನಗೆ ಅವರು ದೇಶಕ್ಕೆ ಮಾರಕವಾಗುವ ಒಬ್ಬ ನಗರ ನಕ್ಸಲ್ ಎಂದು ಯಾವತ್ತು ಭಾವಿಸಿರಲಿಲ್ಲ. ನನಗೆ ಅವರು ಚಾರಿತ್ರ್ಯದ ಬಗ್ಗೆ ಬಹಳ ತಡವಾಗಿ ತಿಳಿಯಿತು. ಇಂತಹ ವ್ಯಕ್ತಿಗಳು ಭಾರತದ ಲೋಕತಾಂತ್ರಿಕ ವ್ಯವಸ್ಥೆಗೆ ಬಹಳ ಹಾನಿಕಾರಕವಾಗಿದ್ದಾರೆಂದು ಕೇಂದ್ರ ಸಚಿವರು ಹೇಳಿದ್ದಾರೆ.
ದಿಮಾಗಿ ನಕ್ಸಲ್ ಎಂಬ ಪದವನ್ನು ಪ್ರಧಾನಿ ನರೇಂದ್ರ ಮೋದಿ ಅವರು, ಯಾರು ಮಾವೋವಾದವನ್ನು ಈ ದೇಶದಲ್ಲಿ ಭಿತ್ತರಿಸುತ್ತಾರೋ ಅವರಿಗೆ ಹೇಳಿದ್ದರು. ಸಾಮಾಜಿಕ ಹಾಗೂ ಶೈಕ್ಷಣಿಕ ಹೋರಾಟಗಾರರಿಗೆ ಅಲ್ಲ ಎಂದು ಅವರು ಅರ್ಥೈಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ನಟ ಹಂಚಿಕೊಂಡಿರುವ ವಿಡಿಯೋನಲ್ಲಿ, ಸರ್ಕಾರವನ್ನು ಟೀಕಿಸುವ, ಸರ್ಕಾರದ ನೀತಿಗಳನ್ನು ತಾರ್ಕಿಕವಾಗಿ ಪ್ರಶ್ನಿಸುವವರನ್ನು ದಿಮಾಗಿ ನಕ್ಸಲ್, ಆಂಟಿ ನ್ಯಾಷನಲ್ ಮತ್ತು ತುಕ್ಡೆ-ತುಕ್ಡೆ ಗ್ಯಾಂಗ್ ಎಂದು ಹೇಳಲಾಗುತ್ತದೆ.
ನಾನು ಹೆಮ್ಮೆಯಿಂದ ಹೇಳುತ್ತೇನೆ. ನಾನೊಬ್ಬ ದಿಮಾಗಿ ನಕ್ಸಲ್. ಈ ದೇಶದ ಚೌಕಿದಾರ, ನನ್ನಂತವರಿಗೆ ದಿಮಾಗಿ ನಕ್ಸಲ್, ತುಕ್ಡೆ-ತುಕ್ಡೆ ಗ್ಯಾಂಗ್ ಎಂಬ ಹೆಸರುಗಳನ್ನು ನೀಡುತ್ತಾ ಕುಳಿತ್ತಿದ್ದಾನೆ. ಆದರೆ, ದೇಶದಲ್ಲಿ ನಿಜವಾಗಿಯೂ ಯಾವುದಾದರೂ 'ತುಕ್ಡೆ-ತುಕ್ಡೆ ಗ್ಯಾಂಗ್' ಇದ್ದರೆ, ಅದು ಈ ಅಕ್ರಮ ಸರ್ಕಾರವೇ ಆಗಿದೆ," ಎಂದು ನಸೀರುದ್ದೀನ್ ಶಾ ಆಕ್ರೋಶ ಹೊರಹಾಕಿದ್ದಾರೆ.
2006 ರಿಂದ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಪರಿಷತ್ ಚುನಾವಣೆಯನ್ನು ನಡೆಸುತ್ತಿಲ್ಲ. ಮೊದಲು, ಜವಹರಲಾಲ್ ನೆಹರು ವಿಶ್ವ ವಿದ್ಯಾಲಯ ಆಮೇಲೆ ಸತ್ಯಜೀತ್ ರೇ ಫಿಲ್ಮ್ ಇನ್ಸಿಸ್ಟಿಟ್ಯೂಟ್ ಈಗ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವ ವಿದ್ಯಾಲಯಗಳನ್ನು ಸರ್ಕಾರಿ ಗುರಿಯಾಸಿಕೊಂಡಿದೆ. ದೇಶದ ವಿಶ್ವವಿದ್ಯಾಲಯಗಳಲ್ಲಿ ಪ್ರಜಾಪ್ರಭುತ್ವವನ್ನು ನಾಶ ಪಡಿಸುವ ತಂತ್ರಗಾರಿಕೆ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಸರ್ಕಾರ ಎಲ್ಲೆಲ್ಲಿ, ಏನೇನೂ ಮಾಡುತ್ತಿದೆ ಎಂದು ದೇಶದ ಜನರು ನೋಡುತ್ತಿದ್ದಾರೆ. ಇದಕ್ಕೆಲ್ಲಾ ಉತ್ತರವನ್ನು ಮುಂದೆ ನೀಡುತ್ತಾರೆ. ಪ್ರಸ್ತುತ ಈ ಪ್ರತಿಭಟನೆಗೆ ಜನ ಬೆಂಬಲ ದೊರೆಯಬೇಕು, ಸರ್ಕಾರವನ್ನು ನಾವು ಪ್ರಶ್ನಿಸಬೇಕೆಂದು ಅವರು ವಿಡಿಯೋನಲ್ಲಿ ಹೇಳಿದ್ದರು, (ಏಜೆನ್ಸೀಸ್).