ಅಶ್ಲೀಲ ಮಾತುಗಳಿಗೆ ಕ್ಷಮೆಯಿಲ್ಲ: ನಟಿ ತ್ರಿಷಾ ಕುರಿತು ಉದಯನಿಧಿ ವಿವಾದಾತ್ಮಕ ಹೇಳಿಕೆ; ಡಿಎಂಕೆ ನಾಯಕನ ವಿರುದ್ಧ ಸಿಡಿದೆದ್ದ ಕಂಗನಾ ರಣಾವತ್! Kangana Ranaut on Udhayanidhi Stalin

ಉದಯನಿಧಿ ಸ್ಟಾಲಿನ್ ಅಶ್ಲೀಲ ಹೇಳಿಕೆ ವಿರುದ್ಧ ಬಾಲಿವುಡ್ ನಟಿ ಕಂಗನಾ ರಣಾವತ್ ಗರಂ
ಉದಯನಿಧಿ ಸ್ಟಾಲಿನ್ ಅಶ್ಲೀಲ ಹೇಳಿಕೆ ವಿರುದ್ಧ ಬಾಲಿವುಡ್ ನಟಿ ಕಂಗನಾ ರಣಾವತ್ ಗರಂ
Published on

ಪ್ರಮುಖ ಮುಖ್ಯಾಂಶಗಳು

  • ನಟಿ ತ್ರಿಶಾ ಕುರಿತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ನೀಡಿದ ವಿವಾದಾತ್ಮಕ ಹೇಳಿಕೆ
  • ಉದಯನಿಧಿ ಸ್ಟಾಲಿನ್ ಅಶ್ಲೀಲ ಹೇಳಿಕೆ ವಿರುದ್ಧ ಬಾಲಿವುಡ್ ನಟಿ ಕಂಗನಾ ರಣಾವತ್ ಗರಂ
  • ಯಾರೇ ಆಗಲೀ ಸಾರ್ವಜನಿಕವಾಗಿ ಅಶ್ಲೀಲ ಪದಗಳನ್ನು ಬಳಸಕೂಡದು
ನವದೆಹಲಿ: ಸದ್ಯ ತಮಿಳುನಾಡಿನ ರಾಜಕಾರಣದಲ್ಲಿ ಈಗ ನಟಿ ತ್ರಿಷಾ ಹಾಗೂ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರ ವಿವಾದವೇ ಸದ್ದು ಮಾಡುತ್ತಿದೆ.
ಕಾವೇರಿ ನೀರಿನ ವಿಚಾರವಾಗಿ ನಡೆದ ಸಭೆಯೊಂದರಲ್ಲಿ ಉದಯನಿಧಿ ಸ್ಟಾಲಿನ್ ನಟಿ ತ್ರಿಷಾ ಹೆಸರನ್ನು ಇಟ್ಟುಕೊಂಡು ಆಡಿದ ವಿವಾದಾತ್ಮಕ ಮಾತುಗಳು ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದವು.

ಈ ವಿವಾದ ಈಗ ತಮಿಳುನಾಡನ್ನು ಮೀರಿ ರಾಷ್ಟ್ರಮಟ್ಟದಲ್ಲೂ ಸದ್ದು ಮಾಡುತ್ತಿದ್ದು, ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut on Udhayanidhi Stalin) ಈ ಬಗ್ಗೆ ಗರಂ ಆಗಿದ್ದಾರೆ.

ಅಶ್ಲೀಲ ಪದ ಬಳಕೆ ಸರಿಯಲ್ಲ!

ಉದಯನಿಧಿ ಸ್ಟಾಲಿನ್ ವಿವಾದದ ಬಗ್ಗೆ ಮಾತನಾಡಿದ ಕಂಗನಾ ರಣಾವತ್, ಸಾರ್ವಜನಿಕ ವೇದಿಕೆಗಳಲ್ಲಿ ಅಸಭ್ಯವಾಗಿ ಮಾತನಾಡುವುದನ್ನು ಬಲವಾಗಿ ಖಂಡಿಸಿದ್ದಾರೆ. ನಾಗರಿಕ ಸಮಾಜದಲ್ಲಿ, ಸಾರ್ವಜನಿಕವಾಗಿ ಅಶ್ಲೀಲ ನಿಂದನೆಗಳು ಹಾಗೂ ದ್ವಂದ್ವಾರ್ಥದ ಮಾತುಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಉದಯನಿಧಿ ಸ್ಟಾಲಿನ್ ವಿರುದ್ಧ ಕಾನೂನು ಕ್ರಮ ಜರುಗಿರುವುದನ್ನು ಉಲ್ಲೇಖಿಸಿರುವ ಕಂಗನಾ, ಅಪರಾಧಕ್ಕಾಗಿ ಸ್ಟಾಲಿನ್ ಅವರನ್ನು ಜೈಲಿಗೆ ಕಳುಹಿಸಲಾಗಿತ್ತು, ಸದ್ಯ ಅವರು ಜಾಮೀನಿನ ಮೇಲೆ ಹೊರಗಿರಬಹುದು ಆದರೆ ಇದು ಕಾನೂನಿನ ದೃಷ್ಟಿಯಲ್ಲಿ ಒಳ್ಳೆಯ ಬೆಳವಣಿಗೆಯಾಗಿದೆ ಎಂದು ನುಡಿದಿದ್ದಾರೆ.

ಅಸಲಿ ವಿವಾದ ಶುರುವಾಗಿದ್ದು ಹೇಗೆ?

ತಂಜಾವೂರಿನಲ್ಲಿ ಕಾವೇರಿ ನೀರು ಹಂಚಿಕೆ ವಿಚಾರವಾಗಿ ಪ್ರತಿಭಟನಾ ರ‍್ಯಾಲಿ ನಡೆದಿತ್ತು. ಈ ವೇಳೆ ಮಾತನಾಡಿದ ಉದಯನಿಧಿ ಸ್ಟಾಲಿನ್, ರಾಜ್ಯ ಸರ್ಕಾರದ ವೈಫಲ್ಯ ಹಾಗೂ ಮುಖ್ಯಮಂತ್ರಿ ವಿಜಯ್​ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಒಂದು ಹನಿ ಕಾವೇರಿ ನೀರು ಬಂದಿಲ್ಲ, ಆದರೂ ಸಿಎಂ ಬಾಯಿ ಬಿಡುತ್ತಿಲ್ಲ ಎಂದು ಅವರು ಮಾತನಾಡುತ್ತಿದ್ದಾಗ, ಅಲ್ಲಿದ್ದ ಕೆಲ ಕಾರ್ಯಕರ್ತರು ಒಮ್ಮೇಲೆ ತ್ರಿಷಾ ಹೆಸರನ್ನು ಕೂಗಲು ಆರಂಭಿಸಿದರು.

ಜನರ ಈ ಮಾತಿಗೆ ಉದಯನಿಧಿ ಸ್ವಲ್ಪ ಹೊತ್ತು ಮಾತು ನಿಲ್ಲಿಸಿ ಮುಗುಳ್ನಕ್ಕರು. ಅಲ್ಲದೆ, ನಟಿ ತ್ರಿಷಾ ಅವರನ್ನು ಉಲ್ಲೇಖಿಸಿ ಕೆಲ ದ್ವಂದ್ವಾರ್ಥದ ಕಾಮೆಂಟ್‌ಗಳನ್ನು ಮಾಡಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಸಿಕ್ಕಾಪಟ್ಟೆ ಟ್ರೋಲ್ ಹಾಗೂ ವಿರೋಧಕ್ಕೆ ಗುರಿಯಾಯಿತು.


ಅರೆಸ್ಟ್, ನಗು ಬಿಡುಗಡೆ!

ಈ ವಿವಾದ ಸ್ಫೋಟಗೊಳ್ಳುತ್ತಿದ್ದಂತೆ ತಮಿಳುನಾಡು ಪೊಲೀಸರು ಎಚ್ಚೆತ್ತುಕೊಂಡು, ತಂಜಾವೂರು ಪ್ರತಿಭಟನೆಯಲ್ಲಿ ಅಸಭ್ಯ ಹೇಳಿಕೆ ನೀಡಿದ ಆರೋಪದ ಮೇಲೆ ಉದಯನಿಧಿ ಸ್ಟಾಲಿನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಪೊಲೀಸ್ ವಶದಲ್ಲಿದ್ದಾಗಲೂ ಉದಯನಿಧಿ ಕಿರುನಗುತ್ತಾ ಕಾಣಿಸಿಕೊಂಡರು. ಇದು ನನ್ನ ಬಂಧನವಲ್ಲ, ಕೇವಲ ತಮಾಷೆ ಎಂದು ಹೇಳಿದ ಅವರು, ತಾವು ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ಡಿಎಂಕೆ ನಾಯಕನನ್ನು ವಿಚಾರಣೆ ನಡೆಸಿ ಬಿಡುಗಡೆ ಮಾಡುವಂತೆ ಪೊಲೀಸರಿಗೆ ಸ್ಪಷ್ಟ ನಿರ್ದೇಶನ ನೀಡಿದ್ದು, ಸ್ಟೇಷನ್ ಜಾಮೀನು ನೀಡುವುದಾಗಿ ಸರ್ಕಾರ ಕೋರ್ಟ್‌ಗೆ ತಿಳಿಸಿದ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net