ತಮಿಳುನಾಡಿನಲ್ಲಿ ಆಡಳಿತ ವಿರೋಧಿ ಅಲೆ ಅನ್ನೋದೆ ಇಲ್ಲ, ಪರ ಮಾತ್ರ ಇದೆ: ಸಿಎಂ ಎಂ.ಕೆ.ಸ್ಟಾಲಿನ್ | CM M K Stalin

ಸಿಎಂ ಎಂ.ಕೆ.ಸ್ಟಾಲಿನ್
ಸಿಎಂ ಎಂ.ಕೆ.ಸ್ಟಾಲಿನ್
Published on
ಚೆನ್ನೈ: ಮುಂಬರುವ ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ದ್ರಾವಿಡ ಮುನ್ನೆತ್ರ ಕಳಗಂ(ಡಿಎಂಕೆ) ಸರ್ಕಾರದ ವಿರುದ್ಧ ಯಾವುದೇ ಆಡಳಿತ ವಿರೋಧಿ ಅಲೆ ಇಲ್ಲ, ಏನಿದ್ರೂ ಪರವಾಗಿರುವ ಅಲೆ ಇದೆ ಎಂದು ಸಿಎಂ ಎಂ.ಕೆ.ಸ್ಟಾಲಿನ್(CM M K Stalin) ಹೇಳಿದ್ದಾರೆ.
ಬುಧವಾರ(ಫೆ. 11) ನಮ್ ವಕ್ಕು ಚಾವಡಿ, ವೆಟ್ರಿ ವಕ್ಕು ಚಾವಡಿ ಎಂಬ ಚೆನ್ನೈ & ವಿಲ್ಲಪುರಂ ವಲಯದ ಬೂತ್ ಮಟ್ಟದ ಕಮಿಟಿ ಸಮಾವೇಶದಲ್ಲಿ ಮಾತನಾಡಿರುವ ಅವರು, ಚೆನ್ನೈನಿಂದ ಹಿಡಿದು ತಳಮಟ್ಟದ ಗ್ರಾಮದವರೆಗೆ ಆಡಳಿತ ಪಕ್ಷಕ್ಕೆ ಅನುಕೂಲಕರವಾದ ಅಲೆಯಿದೆ. 2021ರಕ್ಕಿಂತಲೂ ನಾವು ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದಿದ್ದಾರೆ.
2026ರ ಚುನಾವಣೆ ನಿರ್ಣಾಯಕ ರಾಜಕೀಯ ಯುದ್ಧ ಎಂದು ಕರೆದಿರುವ ಅವರು, ಚುನಾವಣೆ ಕೇವಲ ಎರಡು ಮೈತ್ರಿಕೂಟಗಳ ನಡುವೆ ಅಲ್ಲ, ಬದಲಾಗಿ ತಮಿಳುನಾಡು ಅಥವಾ ದೆಹಲಿ ನಡುವಿನ ಆಯ್ಕೆಯಾಗಿರುತ್ತದೆ. ಕಳೆದ 5 ವರ್ಷದ ದ್ರಾವಿಡ ಮಾದರಿ ಸರ್ಕಾರದ ಸಾಧನೆಗಳ ಬಗ್ಗೆ ವಿವರಿಸಿ, ವಿಭಜಕ ರಾಜಕೀಯ ಸಿದ್ದಾಂತಗಳ ಬಗ್ಗೆ ಜನರಿಗೆ ಎಚ್ಚರಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ತಮಿಳುನಾಡಿನಾದ್ಯಂತ 75,000 ಮತಗಟ್ಟೆಗಳಲ್ಲಿ ಕನಿಷ್ಠ 350 ಮತಗಳನ್ನು ಪಡೆಯುವಂತೆ ಕಾರ್ಯಕರ್ತರಿಗೆ ಹೇಳಿರುವ ಅವರು, ಆಡಳಿತ ವಿರೋಧಿ ಅಲೆ ಇಲ್ಲ. ಆಡಳಿತ ಪರವಾದ ಅಲೆ ಮಾತ್ರವಿದೆ, ಸರ್ಕಾರದ ಕಲ್ಯಾಣ ಯೋಜನೆಗಳು ಮತ್ತು ಮೂಲಸೌಕರ್ಯಗಳ ಅಭಿವೃದ್ದಿಯೂ ನಮ್ಮ ಸರ್ಕಾರದ ಕೈ ಹಿಡಿಯಲಿವೆ ಎಂದು ಹೇಳಿದ್ದಾರೆ.
ಪಕ್ಷವು ಪ್ರತಿ ಬೂತ್‌ಗೆ 350 ಮತಗಳ ಪಡೆದ್ರೆ, ಅದು ರಾಜ್ಯಾದ್ಯಂತ 2.6 ಕೋಟಿಗೂ ಹೆಚ್ಚು ಮತಗಳಾಗಿ ಪರಿವರ್ತನೆಯಾಗುತ್ತದೆ. ಪ್ರತಿ ಬೂತ್ ಮಟ್ಟದ ಕಾರ್ಯಕರ್ತರು ಕನಿಷ್ಠ 100 ನಿಯೋಜಿತ ಮತದಾರರೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಮತದಾನದ ದಿನದ ಮೊದಲು ಕನಿಷ್ಠ ಐದು ಬಾರಿ ಅವರನ್ನು ಭೇಟಿ ಮಾಡಬೇಕು. ಅವರನ್ನು ನೇರವಾಗಿ ಭೇಟಿಯಾಗುವುದು ಅತಿಮುಖ್ಯ ಮತ್ತು ಮತ ಚಲಾಯಿಸುವುದನ್ನು ಖಚಿತ ಪಡಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ಮೈತ್ರಿಕೂಟದ ಸೀಟು ಹಂಚಿಕೆ ಅಥವಾ ಅಭ್ಯರ್ಥಿ ಆಯ್ಕೆಯ ಬಗ್ಗೆ ಯಾರೂ ಚಿಂತಿಸಬೇಡಿ. ಪಕ್ಷದ ನಾಯಕತ್ವ ಅದನ್ನು ನೋಡಿಕೊಳ್ಳುತ್ತದೆ. ಎಲ್ಲಾ 234 ಕ್ಷೇತ್ರಗಳಲ್ಲಿ ನಾನೇ ಅಭ್ಯರ್ಥಿ, ಬೂತ್ ಮಟ್ಟದ ಕಾರ್ಯಕರ್ತರಾದ ನೀವೇ ಡಿಎಂಕೆ ಎಂಬ ಆಲದ ಮರದ ಬೇರುಗಳು ಎಂದು ಕರೆದಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net