ಅಕ್ರಮ ಹಣ ವರ್ಗಾವಣೆ ಪ್ರಕರಣ; ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಪುತ್ರನಿಗೆ ಇಡಿ ಸಮನ್ಸ್ | Captain Amarinder Singh

ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್
ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್
Published on
ನವದೆಹಲಿ: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಫೆಮಾ) ಉಲ್ಲಂಘನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಮತ್ತು ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್(Captain Amarinder Singh) ಮತ್ತು ಪುತ್ರ ರಣಿಂದರ್ ಸಿಂಗ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಗೆ ಮಾಡಿದೆ ಎಂದು ವರದಿಯಾಗಿದೆ.
ಸ್ವಿಸ್ ಬ್ಯಾಂಕ್ ಖಾತೆ ಸೇರಿದಂತೆ ಕೆಲವು ವಿದೇಶಿ ಆಸ್ತಿಗಳಿಗೆ ಸಂಬಂಧಿಸಿದಂತೆ ಇಂದು(ಫೆ. 12) ಜಲಂಧರ್ ಕಚೇರಿಯಲ್ಲಿ ಅಮರಿಂದರ್ ಸಿಂಗ್​ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ. ಪುತ್ರನಿಗೆ ನಾಳೆಗೆ ವಿಚಾರಣೆಗೆ ಬರುವಂತೆ ತಿಳಿಸಲಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಅಮರಿಂದರ್ ಸಿಂಗ್ ಅನಾರೋಗ್ಯ ಪೀಡಿತರಾಗಿದ್ದು, ಮೊಹಾಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದಿನ ವಿಚಾರಣೆಗೆ ಅವರು ಗೈರು ಹಾಜರಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಇಡಿ ಅವರಿಗೆ ಇನ್ನೊಂದು ದಿನಾಂಕ ನೀಡಬಹದು ಎನ್ನಲಾಗಿದೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಪುತ್ರ ರಣಿಂದರ್ ಸಿಂಗ್, ಕಾನೂನು ಪಾಲಿಸುವ ನಾಗರಿಕರಾಗಿ, ತನಿಖಾ ಸಂಸ್ಥೆಗೆ ನಾವು ಸಹಕರಿಸುತ್ತೇವೆ. ಕಾನೂನಿನಲ್ಲಿ ನಮಗೆ ಸಂಪೂರ್ಣ ನಂಬಿಕೆ ಇದೆ. ಸತ್ಯ ಮತ್ತು ನ್ಯಾಯವು ಮೇಲುಗೈ ಸಾಧಿಸುತ್ತದೆ ಎಂಬ ವಿಶ್ವಾಸ ನಮಗಿದೆ ಎಂದು ಬರೆದುಕೊಂಡಿದ್ದಾರೆ.
ಇನ್ನೂ ಪ್ರಕರಣವು  2016ರಲ್ಲಿ ಅಮರಿಂದರ್ ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಆರಂಭವಾಗಿದೆ. ಮತ್ತು ಇದರ ಮೂಲವು 2011ರಲ್ಲಿ ಫ್ರಾನ್ಸ್ ಸರ್ಕಾರ ಭಾರತಕ್ಕೆ ನೀಡಿದ 'ಮಾಸ್ಟರ್ ಶೀಟ್' ಮತ್ತು ಕೆಲವು ವಿಶ್ವಾಸಾರ್ಹ ದಾಖಲೆಗಳಲ್ಲಿದೆ. ಈ ದಾಖಲೆಗಳ ಪ್ರಕಾರ, ಸಿಂಗ್ ಸಹೋದರರು ವಿದೇಶಿ ಟ್ರಸ್ಟ್ ಒಂದರ ಮೂಲಕ ಹಲವು ವಿದೇಶಿ ಕಂಪನಿಗಳನ್ನು ನಿಯಂತ್ರಿಸುತ್ತಿದ್ದರು ಮತ್ತು ಆಸ್ತಿಗಳನ್ನು ಹೊಂದಿದ್ದರು ಎಂಬ ಆರೋಪವನ್ನು ಮಾಡಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತೆರಿಗೆ ಇಲಾಖೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಸಿದೆ. ಅದನ್ನು ಇಡಿ ಪರಿಶೀಲಿಸದಂತೆ ತಡೆ ಕೋರಿ ಇಬ್ಬರು 2025ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿತ್ತು. ಈಗ ಇಡಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net