

ನವದೆಹಲಿ: ಕಾಂಗ್ರೆಸ್ ಪಕ್ಷವು ಬಿಜೆಪಿಯ ವಿರುದ್ಧ ಮತಗಳ ಕಳ್ಳತನದ ಆರೋಪ ಮಾಡುತ್ತಿರುವ ಬೆನ್ನಲ್ಲೇ, ಬಿಜೆಪಿಯು ಕಾಂಗ್ರೆಸ್ ವಿರುದ್ಧ ಪ್ರಜಾಪ್ರಭುತ್ವದ ಕಳ್ಳತನದ ಗಂಭೀರ ಆರೋಪ ಹೊರಿಸಿ ತಿರುಗೇಟು ನೀಡಿದೆ. ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯದ ಇತ್ತೀಚಿನ ಆದೇಶವನ್ನು ಉಲ್ಲೇಖಿಸಿರುವ ಬಿಜೆಪಿ, 1980ರಲ್ಲಿ ಸೋನಿಯಾ ಗಾಂಧಿ (Sonia Gandhi) ಅವರು ಭಾರತದ ಪೌರತ್ವವನ್ನೇ ಹೊಂದಿರಲಿಲ್ಲ ಎಂದಾದರೆ, ಅವರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ ಮತ ಚಲಾಯಿಸಲು ಹೇಗೆ ಸಾಧ್ಯವಾಯಿತು ಎಂದು ನೇರವಾಗಿ ಪ್ರಶ್ನಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ, 1980ರಲ್ಲಿ ಸೋನಿಯಾ ಗಾಂಧಿ ಅವರು ಭಾರತದ ಪೌರರಾಗಿರಲಿಲ್ಲ. ಆದರೂ ಯಾವ ಆಧಾರದ ಮೇಲೆ ಅವರಿಗೆ ಮತ ಚಲಾಯಿಸಲು ಅವಕಾಶ ನೀಡಲಾಯಿತು..? ಹಾಗೂ ಅವರು ದಾಖಲೆಗಳನ್ನು ನಕಲಿ ಮಾಡಿ ವಂಚನೆಗೆ ಯತ್ನಿಸಿದ್ದರೇ..? ಎಂದು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು ಎಂದು ತಿಳಿಸಿದರು.
ಸೋನಿಯಾ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರ್ದೇಶನ ನೀಡಲು ನಿರಾಕರಿಸಿದ್ದ ಮ್ಯಾಜಿಸ್ಟ್ರೇಟ್ ಆದೇಶವನ್ನು ರೌಸ್ ಅವೆನ್ಯೂನ ಸಂಸದರು/ಶಾಸಕರ (MP/MLA) ವಿಶೇಷ ನ್ಯಾಯಾಲಯವು ವಜಾಗೊಳಿಸಿದ ಬೆನ್ನಲ್ಲೇ ಬಿಜೆಪಿ ವಕ್ತಾರರಿಂದ ಈ ಹೇಳಿಕೆ ಹೊರಬಿದ್ದಿದೆ.
ಭಾರತೀಯ ಸಂವಿಧಾನದ ಪ್ರಕಾರ ಮತ ಚಲಾಯಿಸಲು ವ್ಯಕ್ತಿಯು ಕಡ್ಡಾಯವಾಗಿ ಭಾರತದ ಪೌರನಾಗಿರಬೇಕು ಎಂದು ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಒತ್ತು ನೀಡಿದರು. ದೆಹಲಿ ನ್ಯಾಯಾಲಯದ ಆದೇಶವನ್ನು ಉಲ್ಲೇಖಿಸಿದ ಭಂಡಾರಿ, ಈ ಪ್ರಕರಣದಲ್ಲಿ ಸೂಕ್ತ ತನಿಖೆ ನಡೆಯಬೇಕು ಎಂದು ನ್ಯಾಯಾಲಯವೇ ಅಭಿಪ್ರಾಯಪಟ್ಟಿದೆ, ಈ ಹಿಂದೆ ದೂರನ್ನು ವಜಾಗೊಳಿಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸಂಜ್ಞೇಯ ಅಪರಾಧದ ಗಂಭೀರತೆಯನ್ನು ಪರಿಶೀಲಿಸುವ ತನ್ನ ಮೂಲ ಕರ್ತವ್ಯವನ್ನು ನಿರ್ವಹಿಸಿಲ್ಲ ಎಂದು ವಿಶೇಷ ನ್ಯಾಯಾಲಯವು ಗಂಭೀರವಾಗಿ ಗಮನಿಸಿದೆ ಎಂದು ಹೇಳಿದರು.
ವೋಟ್ ಚೋರಿ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರೇ ಪ್ರಜಾಪ್ರಭುತ್ವದ ಕಳವಿನಲ್ಲಿ ತೊಡಗಿದ್ದಾರೆ. ನ್ಯಾಯಾಲಯದ ಅಭಿಪ್ರಾಯವನ್ನು ಗಮನಿಸಿದರೆ, ಈ ಪ್ರಕರಣವನ್ನು ವಜಾಗೊಳಿಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ತನ್ನ ವಿವೇಚನೆಯನ್ನು ಬಳಸಿಲ್ಲ ಹಾಗೂ ಸಂಜ್ಞೇಯ ಅಪರಾಧವನ್ನು ಬಹಿರಂಗಪಡಿಸುವ ತನ್ನ ಮೂಲ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಅಲ್ಲದೆ, ಈ ಪ್ರಕರಣದ ಕುರಿತು ಸಂಪೂರ್ಣ ತನಿಖೆ ನಡೆಯಬೇಕೆಂದು ಕೋರ್ಟ್ ಭಾವಿಸಿದೆ ಎಂದು ಭಂಡಾರಿ ತಿಳಿಸಿದರು.
ಇದಕ್ಕೂ ಮುನ್ನ ಸೋಮವಾರ, ಕೇವಲ ಪರಿಶೀಲಿಸದ ಫೋಟೋಕಾಪಿಗಳ ಸಲ್ಲಿಕೆಯನ್ನು ಆಧಾರವಾಗಿಟ್ಟುಕೊಂಡು ದೂರನ್ನು ವಜಾಗೊಳಿಸಿದ್ದನ್ನು ವಿಮರ್ಶಿಸಿದ್ದ ನ್ಯಾಯಾಲಯ, ದೂರನ್ನು ಬರಿ ಸಾಕ್ಷ್ಯಾಧಾರವಿಲ್ಲದ ದಾಖಲೆಯ ಫೋಟೋಕಾಪಿಯ ಆಧಾರದ ಮೇಲೆ ವಜಾಗೊಳಿಸಲಾಗಿತ್ತು ಎಂದು ತಿಳಿಸಿತ್ತು. ಮತದಾರರ ಪಟ್ಟಿಯು ಕೇವಲ ಭಾರತೀಯ ಪೌರರಿಗೆ ಮಾತ್ರ ಸೀಮಿತವಾಗಿದೆ ಎಂಬುದನ್ನು ಎತ್ತಿಹಿಡಿದ ನ್ಯಾಯಾಲಯ, 1983ರ ಏಪ್ರಿಲ್‌ನಲ್ಲಿ ಭಾರತೀಯ ಪೌರತ್ವ ಪಡೆಯುವ ಮುನ್ನವೇ, ಅಂದರೆ 1980ರಲ್ಲಿ ನವದೆಹಲಿಯ ಸಫ್ದರ್‌ಜಂಗ್ ರಸ್ತೆಯ ವಿಳಾಸದೊಂದಿಗೆ ಸೋನಿಯಾ ಗಾಂಧಿ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿತ್ತು ಎಂಬ ಆರೋಪಗಳನ್ನು ಪರಿಶೀಲಿಸಿತು. ಅವರ ಹೆಸರನ್ನು 1980ರಲ್ಲಿ ಸೇರಿಸಲಾಗಿತ್ತು, ನಂತರ 1982ರಲ್ಲಿ ತೆಗೆದುಹಾಕಲಾಗಿತ್ತು ಮತ್ತು 1983ರಲ್ಲಿ ಮತ್ತೆ ಸೇರಿಸಲಾಗಿತ್ತು ಎಂಬುದನ್ನು ನ್ಯಾಯಾಲಯ ಒತ್ತಿ ಹೇಳಿದೆ.
ಪರಿಷ್ಕರಣೆ ನ್ಯಾಯಾಲಯವು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಪಾತ್ರವನ್ನು ವಹಿಸಿಕೊಳ್ಳಲು ಸಾಧ್ಯವಿಲ್ಲದ ಕಾರಣ ಪ್ರಕರಣವನ್ನು ಮರಳಿ ಕೆಳ ನ್ಯಾಯಾಲಯಕ್ಕೆ ಕಳುಹಿಸಲಾಗುತ್ತಿದ್ದು, ಅಲ್ಲಿ ಹೊಸದಾಗಿ ನಿರ್ಧಾರ ತೆಗೆದುಕೊಳ್ಳಬೇಕು. ನ್ಯಾಯಾಲಯವು ಸಂಬಂಧಪಟ್ಟ ಪೊಲೀಸ್ ಅಧಿಕಾರಿಯಿಂದ ವರದಿಯನ್ನು ತರಿಸಿಕೊಳ್ಳಬೇಕು ಮತ್ತು ಅವರ ವಾದ ಆಲಿಸಿದ ನಂತರ ಕಾರಣ ಸಹಿತ ಆದೇಶವನ್ನು ಹೊರಡಿಸಬೇಕು ಎಂದು ಸೂಚಿಸಿದರು. ಈ ಪ್ರಕರಣವು ಈಗ ಮತ್ತೆ ರೌಸ್ ಅವೆನ್ಯೂ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಮರಳಿದ್ದು, ಅದು ಪೊಲೀಸರಿಂದ ಸ್ಥಿತಿ ವರದಿಯನ್ನು ಪಡೆದುಕೊಂಡು ಸೆಪ್ಟೆಂಬರ್ 29 ರಂದು ಸೂಕ್ತ ಕಾರಣ ಸಹಿತ ಆದೇಶವನ್ನು ಹೊರಡಿಸಲಿದೆ(ಏಜೆನ್ಸೀಸ್).