

ಕೋಲ್ಕತ್ತಾ: 2007ರ ಹಳೆಯ ಪ್ರಕರಣಗಳಿಗೆ ಸಂಬಂಧಿಸಿದಂತೆ ತಡೆಹಿಡಿಯಲಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರ ಅರ್ಜಿಯ ವಿಚಾರಣೆ ನಡೆಸಿದ ಕೋಲ್ಕತ್ತಾ ಹೈಕೋರ್ಟ್, ನಂದಿಗ್ರಾಮ ವಿಧಾನಸಭಾ ಉಪಚುನಾವಣೆಯ ಎಣಿಕೆ ಮುಗಿಯುವವರೆಗೆ (ಅಕ್ಟೋಬರ್ 9) ಅವರ ವಿರುದ್ಧ ಯಾವುದೇ ಬಲವಂತದ ಕಠಿಣ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಕ್ಕೆ ಮಂಗಳವಾರ ನಿರ್ದೇಶನ ನೀಡಿದೆ.
ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರು ತಮ್ಮ ವಿರುದ್ಧ ಬಾಕಿ ಇರುವ ಪ್ರಕರಣಗಳಲ್ಲಿ ಬಲವಂತದ ಕ್ರಮಗಳಿಂದ ರಕ್ಷಣೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸೌಗತ ಭಟ್ಟಾಚಾರ್ಯ ನಡೆಸಿದರು. ವಿಚಾರಣೆ ವೇಳೆ ರಾಜ್ಯ ಸರ್ಕಾರವು, ಪ್ರಧಾನ್ ವಿರುದ್ಧ ಆರೋಪ ಮಾಡಲಾದ 6 ಪ್ರಕರಣಗಳ ಪೈಕಿ 5 ಪ್ರಕರಣಗಳನ್ನು ಈಗಾಗಲೇ ಮುಕ್ತಾಯಗೊಳಿಸಲಾಗಿದೆ ಹಾಗೂ ಬಾಕಿ ಉಳಿದಿರುವ ಒಂದು ಪ್ರಕರಣದಲ್ಲಿ ಅವರು ಆರೋಪಿಯಾಗಿಲ್ಲ ಎಂದು ಕೋರ್ಟ್‌ಗೆ ತಿಳಿಸಿತು. ಪ್ರಸ್ತುತ ಪ್ರಧಾನ್ ಅವರು ಇತರ 5 ಪ್ರಕರಣಗಳಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಆ ಪ್ರಕರಣಗಳಲ್ಲಿ ಪ್ರತ್ಯೇಕವಾಗಿ ಜಾಮೀನು ಕೋರಿದ್ದಾರೆ.
ವಿಚಾರಣೆ ವೇಳೆ ಪ್ರಧಾನ್ ಅವರ ಚುನಾವಣಾ ಸ್ಪರ್ಧೆಯ ವಿಷಯ ಬಂದಾಗ, ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಅವರಿಗೆ ಜಾಮೀನು ಸಿಕ್ಕರೆ ಸ್ಪರ್ಧಿಸಲು ಬಿಡಿ ಎಂದು ಹೇಳಿತು.
ಮಿಲನ್ ಪ್ರಧಾನ್ ಪರವಾಗಿ ಹಾಜರಾದ ಹಿರಿಯ ವಕೀಲ ಅಯಾನ್ ಭಟ್ಟಾಚಾರ್ಯ ಅವರು, ನಂದಿಗ್ರಾಮ ಉಪಚುನಾವಣೆ ಅಕ್ಟೋಬರ್ 6 ರಂದು ನಿಗದಿಯಾಗಿದೆ, ಅಕ್ಟೋಬರ್ 4 ರಂದು ಪ್ರಚಾರ ಅಂತ್ಯಗೊಳ್ಳಲಿದೆ ಮತ್ತು ಅಕ್ಟೋಬರ್ 9 ರಂದು ಮತ ಎಣಿಕೆ ನಡೆಯಲಿದೆ. ಇಂತಹ ಪ್ರಮುಖ ಸಮಯದಲ್ಲಿ 2007ರಷ್ಟು ಹಳೆಯ ಪ್ರಕರಣಗಳಲ್ಲಿ ವಾರಂಟ್‌ಗಳನ್ನು ಜಾರಿಗೊಳಿಸುತ್ತಿರುವ ಸಮಯವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು.
ಈ ಇಡೀ ಸನ್ನಿವೇಶವನ್ನು ಪ್ರಜಾಪ್ರಭುತ್ವದ ಬುಡಮೇಲು ಮಾಡಲು ಅತ್ಯುತ್ತಮ ಉದಾಹರಣೆ ಕರೆದ ಪ್ರಧಾನ್ ಪರ ವಕೀಲ ಅಯಾನ್ ಭಟ್ಟಾಚಾರ್ಯ, ಪ್ರಧಾನ್ ಅವರನ್ನು ಈಗಾಗಲೇ 5 ಎಫ್‌ಐಆರ್‌ಗಳಲ್ಲಿ ಬಂಧಿಸಲಾಗಿದೆ ಮತ್ತು ಬಾಕಿ ಉಳಿದಿರುವ ಪ್ರಕರಣಗಳಲ್ಲೂ ಅವರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತಪಡಿಸಿದರು. ಪ್ರಧಾನ್ ವಿರುದ್ಧ ಬಾಕಿ ಇರುವ ಇತರ ಯಾವುದೇ ಪ್ರಕರಣಗಳಿದ್ದರೆ ಅದನ್ನು ಬಹಿರಂಗಪಡಿಸುವಂತೆ ನ್ಯಾಯಾಲಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿದರು.
ರಾಜ್ಯ ಸರ್ಕಾರದ ಪರವಾಗಿ ಹಾಜರಾದ ಹೆಚ್ಚುವರಿ ಅಡ್ವೊಕೇಟ್ ಜನರಲ್ ರಾಜ್‌ದೀಪ್ ಮಜುಂದಾರ್, ಪ್ರಧಾನ್ ವಿರುದ್ಧ ಒಟ್ಟು 11 ಪ್ರಕರಣಗಳಿದ್ದು, ಅದರಲ್ಲಿ 5 ಪ್ರಕರಣಗಳಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು. ಉಳಿದ 6 ಪ್ರಕರಣಗಳ ಪೈಕಿ 5 ಪ್ರಕರಣಗಳನ್ನು ಹಿಂದಿನ ಸರ್ಕಾರವೇ ಹಿಂಪಡೆದಿದೆ ಮತ್ತು ಆ ಪ್ರಕರಣಗಳಲ್ಲಿ ಪ್ರಧಾನ್ ಪೊಲೀಸರಿಗೆ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಚುನಾವಣೆ ಬಂದಾಗಲೆಲ್ಲಾ ಬಾಕಿ ಇರುವ ವಾರಂಟ್‌ಗಳನ್ನು ಜಾರಿಗೊಳಿಸುವುದು ಪೊಲೀಸರ ಕರ್ತವ್ಯವಾಗಿದ್ದು, ಅದೇ ಪ್ರಕ್ರಿಯೆಯಡಿ ಈ ವಾರಂಟ್‌ಗಳನ್ನು ಜಾರಿಗೊಳಿಸಲಾಗಿದೆ ಎಂದು ರಾಜ್ಯ ಸರ್ಕಾರದ ಪರ ವಕೀಲರು ಸಮರ್ಥಿಸಿಕೊಂಡರು. ಅಲ್ಲದೆ, ಪ್ರಧಾನ್ ಒಬ್ಬರನ್ನೇ ಬಂಧಿಸಿಲ್ಲ, ಅದೇ ಪ್ರಕರಣದಲ್ಲಿ ವಾರಂಟ್ ಬಾಕಿ ಇದ್ದ ಇತರ ವ್ಯಕ್ತಿಗಳನ್ನೂ ಬಂಧಿಸಲಾಗಿದೆ ಎಂದು ಕೋರ್ಟ್‌ಗೆ ತಿಳಿಸಿದರು. ಇದಕ್ಕೆ ತಿರುಗೇಟು ನೀಡಿದ ಪ್ರಧಾನ್ ಪರ ವಕೀಲರು, ತಮ್ಮ ಕಕ್ಷಿದಾರ ವಿರೋಧ ಪಕ್ಷದ ಅಭ್ಯರ್ಥಿಯಾದ ತಕ್ಷಣವೇ ಸುಮಾರು ಎರಡು ದಶಕಗಳಷ್ಟು ಹಳೆಯದಾದ ಪ್ರಕರಣಗಳಿಗೆ ವಾರಂಟ್ ಜಾರಿಗೊಳಿಸಲಾಗುತ್ತಿದೆ ಎಂದರು.
ವಾದ-ವಿವಾದ ಆಲಿಸಿದ ನ್ಯಾಯಾಲಯ, ಎಲ್ಲಾ ಪ್ರಕರಣಗಳು 2007ರದ್ದಾಗಿವೆ. ಹೀಗಾಗಿ ಅಕ್ಟೋಬರ್ 9 ರವರೆಗೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬೇಡಿ ಎಂದು ಆದೇಶಿಸಿತು. ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ರಾಜ್ಯ ಸರ್ಕಾರ ಕೋರಿದರೂ, ನ್ಯಾಯಾಲಯ ಅದನ್ನು ನಿರಾಕರಿಸಿ, ಮುಂದಿನ ವಿಚಾರಣೆಯನ್ನು ಅಕ್ಟೋಬರ್ 12 ಕ್ಕೆ ಮುಂದೂಡಿತು.
2007ರ ನಂದಿಗ್ರಾಮ ಭೂಸ್ವಾಧೀನ ವಿರೋಧಿ ಚಳವಳಿಯ ಕಾಲದ ಹಳೆಯ ಪ್ರಕರಣಗಳಲ್ಲಿ ಬಾಕಿ ಇದ್ದ ವಾರಂಟ್ ಆಧಾರದ ಮೇಲೆ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ಸೆಪ್ಟೆಂಬರ್ 18 ರಂದು ಬಂಧಿಸಲಾಯಿತು. ನಂತರ ಅವರನ್ನು ಇತರ 4 ಪ್ರಕರಣಗಳಲ್ಲಿ ಬಂಧಿಸಲಾಗಿದೆ ಎಂದು ತೋರಿಸಲಾಗಿದ್ದು, ಪ್ರಸ್ತುತ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಪ್ರಕರಣಗಳಲ್ಲಿ ಕೊಲೆ, ಕೊಲೆ ಯತ್ನ, ಕೊಲೆ ಮಾಡುವ ಉದ್ದೇಶದಿಂದ ಅಪಹರಣ, ಸಾಕ್ಷ್ಯ ನಾಶಪಡಿಸುವುದು, ಅಕ್ರಮ ಪ್ರವೇಶ ಮತ್ತು ಮಾರಕಾಸ್ತ್ರಗಳಿಂದ ಗಲಭೆ ಸೃಷ್ಟಿಸಿದ ಆರೋಪಗಳನ್ನು ಹೊರಿಸಲಾಗಿದೆ. ನಂದಿಗ್ರಾಮ ವಿಧಾನಸಭಾ ಉಪಚುನಾವಣೆ ಅಕ್ಟೋಬರ್ 6 ರಂದು ನಡೆಯಲಿದ್ದು, ಅಕ್ಟೋಬರ್ 9 ರಂದು ಫಲಿತಾಂಶ ಹೊರಬೀಳಲಿದೆ(ಏಜೆನ್ಸೀಸ್).