ಭೀತಿ ಹುಟ್ಟಿಸುವ ಚೀನಾ ಚದುರಂಗ

ಭೀತಿ ಹುಟ್ಟಿಸುವ ಚೀನಾ ಚದುರಂಗ
ಭೀತಿ ಹುಟ್ಟಿಸುವ ಚೀನಾ ಚದುರಂಗ
Published on
ಜಾಗತಿಕ ರಾಜಕೀಯದಲ್ಲೀಗ ಪರಿಸ್ಥಿತಿ ಹೇಗಿದೆಯೆಂದರೆ ಯಾವ ರಾಷ್ಟ್ರವೂ ಇನ್ನೊಂದು ರಾಷ್ಟ್ರವನ್ನು ನಂಬುವಂತಿಲ್ಲ. ಅದರಲ್ಲೂ ಪರಂಪರಾಗತ ಶತ್ರುರಾಷ್ಟ್ರಗಳ ಮಧ್ಯೆ ನಂಬಿಕೆ ಎಂಬುದು ಲವಲೇಶವೂ ಉಳಿದಿಲ್ಲ. ಹಿಂದಿನ ಕಾಲದಲ್ಲಿ ಶಸ್ತ್ರಾಸ್ತ್ರಗಳನ್ನು ಬಳಸಿ ಭೌತಿಕವಾಗಿ ಯುದ್ಧ ಮಾಡಬೇಕಾಗುತ್ತಿತ್ತು. ಆದರೀಗ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಯುದ್ಧ ಮಾಡಬೇಕಾಗುತ್ತದೆ. ಬೇಹುಗಾರಿಕೆಗೂ ಅಷ್ಟೆ; ಗುಪ್ತಚರ ದಳವೇ ಬೇಕು ಎಂದೇನಿಲ್ಲ. ಗೌಪ್ಯವಾಗಿ ಕೆಲಸ ಮಾಡುವ ಗ್ಯಾಜೆಟ್‌ಗಳಿದ್ದರೆ ಸಾಕು. ಈ ವಿಷಯದಲ್ಲಿ ಯಾರು ಮುಂದಿರುತ್ತಾರೋ ಅವರೇ ಈಗ ಯುದ್ಧರಂಗದಲ್ಲಿ ಮೇಲುಗೈ ಸಾಧಿಸುತ್ತಾರೆ. ಅಂತಹ ದೇಶಗಳಿಗೆ ಉಳಿದವರೆಲ್ಲರೂ ಹೆದರುತ್ತಾರೆ. ಹಾಗೆ ಭೀತಿ ಹುಟ್ಟಿಸಿರುವ ಟೆಕ್ ಸ್ಯಾವಿ ದೇಶಗಳಲ್ಲಿ ಚೀನಾ ಕೂಡ ಒಂದು.
ತಂತ್ರಜ್ಞಾನದ ವಿಷಯದಲ್ಲಿ ಚೀನಾ ಇಂದು ಕೇವಲ ಒಂದು ಉತ್ಪಾದನಾ ಹಬ್ ಆಗಿ ಉಳಿದಿಲ್ಲ, ಜಗತ್ತಿನ ಅತ್ಯಂತ ಭಯಂಕರ ಸೈಬರ್ ಸರ್ವೆಲೆನ್ಸ್ ಸಾಮ್ರಾಜ್ಯವಾಗಿ ಮಾರ್ಪಟ್ಟಿದೆ. ಇತ್ತೀಚೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಕೋರ್ ಟೀಮ್ ಚೀನಾಕ್ಕೆ ಭೇಟಿ ನೀಡಿದಾಗ ವರದಿಯಾದ ಕೆಲವು ವಿದ್ಯಮಾನಗಳು ಇಡೀ ಜಗತ್ತನ್ನು ಬೆರಗುಗೊಳಿಸಿವೆ. ಟ್ರಂಪ್ ಟೀಮ್ ಸದಸ್ಯರು ತಮ್ಮ ಅತ್ಯಾಧುನಿಕ ಐಫೋನ್, ಐಪ್ಯಾಡ್ ಮತ್ತು ರಹಸ್ಯ ಕಮ್ಯುನಿಕೇಶನ್ ಗ್ಯಾಜೆಟ್‌ಗಳನ್ನು ಅಮೆರಿಕದಲ್ಲೇ ಬಿಟ್ಟು, ತಾತ್ಕಾಲಿಕವಾಗಿ ಒಮ್ಮೆ ಬಳಸಿ ಬಿಸಾಡಬಹುದಾದ ‘ಬರ್ನರ್ ಫೋನ್‌’ಗಳನ್ನು ಒಯ್ದಿದ್ದರು. ಯಾಕೆಂದರೆ, ಚೀನಾದ ಸರ್ಕಾರಿ ಪ್ರಾಯೋಜಿತ ಚಾಲಾಕಿ ಹ್ಯಾಕರ್‌ಗಳು ವೈಫೈ ಮೂಲಕವೇ ಗೌಪ್ಯಮಾಹಿತಿಗೆ ಗಾಳ ಹಾಕಿಬಿಡಬಹುದು ಎಂಬ ಭೀತಿ. ಚೀನಾದ ‘ಆತಿಥ್ಯ’ದಲ್ಲಿರುವಾಗ ಫೋನ್ ಚಾರ್ಜ್ ಮಾಡುವುದಕ್ಕೂ ಅಮೆರಿಕನ್ನರು ಹೆದರುವಂತಹ ಸ್ಥಿತಿ ಇತ್ತು. ಚಾರ್ಜಿಂಗ್ ಪೋರ್ಟ್‌ನಲ್ಲೇ ಏನಾದರೂ ಹ್ಯಾಕಿಂಗ್ ಡಿವೈಸ್ ಅಡಗಿಸಿ ಇಟ್ಟಿರಬಹುದಲ್ಲ ಎಂಬ ಭಯ. ಪ್ರವಾಸದ ಕೊನೇ ದಿನ ಚೀನಾ ಅಧಿಕಾರಿಗಳು ನೀಡಿದ ಬೆಲೆಬಾಳುವ ಉಡುಗೊರೆಗಳನ್ನು ಕೂಡ ತಾಯ್ನಾಡಿಗೆ ಕೊಂಡೊಯ್ಯಲು ಅಮೆರಿಕದ ನಿಯೋಗದವರಿಗೆ ಹೆದರಿಕೆ! ಅಮೆರಿಕದಂತಹ ಸೂಪರ್ ಪವರ್ ದೇಶಕ್ಕೆ ಚೀನಾ ತಂತ್ರಜ್ಞರ ಬಗ್ಗೆ ಅಷ್ಟೊಂದು ಭಯ ಏಕೆ? ಚೀನಾದಲ್ಲಿ ಸೈಬರ್ ವಾರ್‌ಫೇರ್‌ನ ಯಾವೆಲ್ಲಾ ಅಪಾಯಗಳಿವೆ? ಅವುಗಳ ವೈಜ್ಞಾನಿಕ, ತಾಂತ್ರಿಕ ಹೆಸರುಗಳೇನು? ಸವಿಸ್ತಾರವಾಗಿ ತಿಳಿಯೋಣ ಬನ್ನಿ.

ಕಣ್ಣಿಗೆ ಕಾಣದ ಕಣ್ಗಾವಲು

ಚೀನಾದಲ್ಲಿ ಸರ್ಕಾರದಿಂದ ಪ್ರಾಯೋಜಿತವಾದ ಹ್ಯಾಕಿಂಗ್ ಗ್ರೂಪ್‌ಗಳೇ ಇವೆ. ಎಪಿಟಿ-41, ವೋಲ್ಟ್ ಟೈಫೂನ್ ಮುಂತಾದ ಗ್ರೂಪ್‌ಗಳ ಮುಖ್ಯ ಕೆಲಸವೇ ಚೀನಾಕ್ಕೆ ಭೇಟಿ ನೀಡುವ ವಿದೇಶಿ ಗಣ್ಯರನ್ನು ಟಾರ್ಗೆಟ್ ಮಾಡುವುದು! ಕಣ್ಣಿಗೆ ಕಾಣಿಸದ ಅತ್ಯಾಧುನಿಕ ಹಾರ್ಡ್‌ವೇರ್ ಹಾಗೂ ಸಾಫ್ಟ್‌ವೇರ್ ತಂತ್ರಗಳನ್ನು ಈ ಗ್ರೂಪ್‌ಗಳು ಬಳಸುತ್ತವೆ.

ಜ್ಯೂಸ್ ಜ್ಯಾಕಿಂಗ್

ಇದು ಚೀನಾಕ್ಕೆ ಹೋದ ಪ್ರತಿಯೊಬ್ಬ ವಿದೇಶಿ ರಾಜತಾಂತ್ರಿಕನೂ ಹೆದರುವ ಮೊದಲ ತಂತ್ರಜ್ಞಾನ. ನಾವು ದಿನನಿತ್ಯ ಬಳಸುವ ಯುಎಸ್ಬಿ ಕೇಬಲ್‌ಗಳು ವಿದ್ಯುತ್ತನ್ನು ಮಾತ್ರವಲ್ಲದೆ ಡೇಟಾ ವರ್ಗಾವಣೆ ಮಾಡುವ ಸಾಮರ್ಥ್ಯವನ್ನೂ ಹೊಂದಿರುತ್ತವೆ ಎಂಬುದು ನಿಮಗೆ ಗೊತ್ತೇ ಇದೆ. ಚೀನಾದ ವಿಮಾನ ನಿಲ್ದಾಣ, ಹೋಟೆಲ್, ಸರ್ಕಾರಿ ಕಟ್ಟಡ, ಸಂಸತ್ತಿನ ಕಚೇರಿ ಮುಂತಾದೆಡೆ ಇರುವ ಫ್ರೀ ಚಾರ್ಜಿಂಗ್ ಪೋರ್ಟ್‌ಗಳ ಒಳಗೆ ಸರ್ಕಾರಿ ಹ್ಯಾಕರ್‌ಗಳು ಸಣ್ಣದೊಂದು ಮೈಕ್ರೋಚಿಪ್ ಅಳವಡಿಸಿರುತ್ತಾರೆ. ನಿಮ್ಮ ಸ್ಮಾರ್ಟ್ ಫೋನನ್ನು ಅಲ್ಲಿ ಪ್ಲಗ್ ಮಾಡಿದ ತಕ್ಷಣ, ಅದರಲ್ಲಿರುವ ಸಂಪೂರ್ಣ ಡೇಟಾ ಬ್ಯಾಕ್‌ಗ್ರೌಂಡ್‌ನಲ್ಲಿ ಹ್ಯಾಕರ್‌ಗಳ ಡೇಟಾಬೇಸ್‌ಗೆ ವರ್ಗಾವಣೆಯಾಗುತ್ತದೆ. ಇಲ್ಲವೇ, ಫೋನ್‌ನೊಳಗೆ ಮಾಲ್ವೇರ್ ಇಂಜೆಕ್ಟ್ ಆಗುತ್ತದೆ. ನಂತರ ನಿರಂತರವಾಗಿ ಫೋನ್‌ನಿಂದ ಎಲ್ಲ ಮಾಹಿತಿಯೂ ಹ್ಯಾಕರ್‌ಗಳಿಗೆ ವರ್ಗಾವಣೆ ಆಗತೊಡಗುತ್ತದೆ. ಟ್ರಂಪ್ ತಂಡ ಅಲ್ಲಿನ ಚಾರ್ಜಿಂಗ್ ಪೋರ್ಟ್‌ಗಳನ್ನು ಬಳಸಲು ಹೆದರಿದ್ದು ಇದೇ ಕಾರಣಕ್ಕೆ.

ಜೀರೋ ಕ್ಲಿಕ್ ಎಕ್ಸ್‌ಪ್ಲಾಯಿಟ್ಸ್

ಸಾಮಾನ್ಯವಾಗಿ ಹ್ಯಾಕಿಂಗ್ ನಡೆಯಬೇಕಾದರೆ ನಾವು ಯಾವುದಾದರೂ ಲಿಂಕ್ ಕ್ಲಿಕ್ ಮಾಡಬೇಕು ಅಥವಾ ಆಪ್ ಡೌನ್‌ಲೋಡ್ ಮಾಡಬೇಕು. ಆದರೆ ಚೀನಾ ಸರ್ಕಾರದ ಸೈಬರ್ ಸೇನೆ ಅಭಿವೃದ್ಧಿಪಡಿಸಿರುವ ಜೀರೋ ಕ್ಲಿಕ್ ತಂತ್ರಜ್ಞಾನ ಇದಕ್ಕೆ ತದ್ವಿರುದ್ಧವಾದದ್ದು. ನೀವು ಯಾವುದೇ ಲಿಂಕ್ ಕ್ಲಿಕ್ ಮಾಡದಿದ್ದರೂ, ಆಪ್ ಡೌನ್‌ಲೋಡ್ ಮಾಡದಿದ್ದರೂ ನಿಮ್ಮ ಫೋನ್ ಹ್ಯಾಕ್ ಆಗುತ್ತದೆ. ಕೇವಲ ಒಂದು ವಾಟ್ಸ್ ಆಪ್ ಮೆಸೇಜ್ ಅಥವಾ ಫೋನ್ ಕಾಲ್ ಬಂದರೆ ಸಾಕು. ನೀವು ಕರೆ ಸ್ವೀಕರಿಸದಿದ್ದರೂ, ಫೋನಿನ ಆಪರೇಟಿಂಗ್ ಸಿಸ್ಟಂನ ಲೂಪ್‌ಹೋಲ್ ಬಳಸಿ ಇಸ್ರೇಲ್‌ನ ಪೆಗಾಸಸ್ ಮಾದರಿಯ ಗೂಢಚಾರ ಸಾಫ್ಟ್ವೇರ್ ನಿಮ್ಮ ಫೋನ್‌ನೊಳಗೆ ಸೇರಿಕೊಳ್ಳುತ್ತದೆ. ಇದಕ್ಕೆ ಜೀರೋ ಕ್ಲಿಕ್ ಎಕ್ಸ್‌ಪ್ಲಾಯಿಟ್ ಎನ್ನುತ್ತಾರೆ. ಇದರ ಮೂಲಕ ಹ್ಯಾಕರ್‌ಗಳು ತಾವು ಬಯಸಿದ ಕೆಲಸ ಪೂರೈಸಿಕೊಳ್ಳುತ್ತಾರೆ!

ಐಎಂಎಸ್ಐ ಕ್ಯಾಚರ್ಸ್ ಅಥವಾ ಸ್ಟಿಂಗ್ ರೇ

ಚೀನಾದ ಹೋಟೆಲ್‌ಗಳು ಮತ್ತು ಸರ್ಕಾರಿ ಕಟ್ಟಡಗಳ ಸುತ್ತಮುತ್ತ ನಕಲಿ ಮೊಬೈಲ್ ಟವರ್‌ಗಳನ್ನು ಸ್ಥಾಪಿಸಲಾಗಿರುತ್ತದೆ. ಇವುಗಳನ್ನು ತಾಂತ್ರಿಕವಾಗಿ ಐಎಂಎಸ್ಐ ಕ್ಯಾಚರ್ಸ್ ಅಥವಾ ಸ್ಟಿಂಗ್ ರೇ ಎಂದು ಕರೆಯುತ್ತಾರೆ. ಐಎಂಎಸ್ಐ ಎಂದರೆ ಇಂಟರ್‌ನ್ಯಾಶನಲ್ ಮೊಬೈಲ್ ಸಬ್‌ಸ್ಕ್ರೈಬರ್ ಐಡೆಂಟಿಟಿ. ಅಮೆರಿಕದ ಅಧಿಕಾರಿಗಳ ಫೋನ್‌ಗಳು ನೈಜ ನೆಟ್‌ವರ್ಕ್ ಎಂದುಕೊಂಡು ಈ ನಕಲಿ ಟವರ್‌ಗೆ ಕನೆಕ್ಟ್ ಆಗುತ್ತವೆ. ಒಮ್ಮೆ ಕನೆಕ್ಟ್ ಆಯಿತೆಂದರೆ, ಅವರು ಮಾಡುವ ಪ್ರತಿಯೊಂದು ಫೋನ್ ಕರೆ, ಕಳುಹಿಸುವ ಎಸ್ಎಂಎಸ್ ಮತ್ತು ಇಂಟರ್ನೆಟ್ ಚಟುವಟಿಕೆ ಚೀನಾ ಮಿಲಿಟರಿಯವರಿಗೆ ಗೊತ್ತಾಗುತ್ತದೆ. ಕರೆಗಳನ್ನು ಮಧ್ಯದಲ್ಲೇ ತಡೆದು ಆಲಿಸುವ ತಂತ್ರಜ್ಞಾನವೂ ಇದೆ. ಅದಕ್ಕೆ ‘ಮ್ಯಾನ್ ಇನ್ ದ ಮಿಡಲ್’ (ಎಂಐಟಿಎಂ) ಅಟ್ಯಾಕ್ ಎನ್ನುತ್ತಾರೆ.

ಹಾರ್ಡ್‌ವೇರ್ ಟ್ರೋಜನ್, ಇಂಪ್ಲಾಂಟ್ಸ್

ಟ್ರಂಪ್ ನಿಯೋಗದಲ್ಲಿದ್ದವರಿಗೆ ಚೀನಾದವರು ಹಲವು ಉಡುಗೊರೆ, ಸ್ಮರಣಿಕೆಗಳನ್ನು ನೀಡಿದ್ದರು. ಅದರಲ್ಲಿ ಪವರ್ ಬ್ಯಾಂಕ್, ಡಿಜಿಟಲ್ ವಾಚ್, ಇಯರ್‌ಫೋನ್ ಮುಂತಾದವುಗಳೂ ಇದ್ದವು. ಚೀನಾ ತಯಾರಿಸುವ ಸಣ್ಣ ಗ್ಯಾಜೆಟ್‌ಗಳ ಮದರ್‌ಬೋರ್ಡ್ ಒಳಗೆ ಕಣ್ಣಿಗೆ ಕಾಣದಂತಹ ಹಾರ್ಡ್‌ವೇರ್ ಟ್ರೋಜನ್ ಚಿಪ್‌ಗಳನ್ನು ಮೊದಲೇ ಅಳವಡಿಸಲಾಗಿರುತ್ತದೆ. ಗ್ಯಾಜೆಟ್‌ಗಳನ್ನು ಆನ್ ಮಾಡಿದ ತಕ್ಷಣ, ಈ ಚಿಪ್‌ಗಳು ವೈಫೈ ಅಥವಾ ಸೆಲ್ಯುಲರ್ ಸಿಗ್ನಲ್ ಮೂಲಕ ಆಸುಪಾಸಿನಲ್ಲಿರುವ ಅಮೆರಿಕದ ಪ್ರಮುಖ ಅಧಿಕಾರಿಗಳ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿ ಚೀನಾದ ಸರ್ವರ್‌ಗಳಿಗೆ ರವಾನಿಸುತ್ತವೆ. ಈ ಭೀತಿಯಿಂದಾಗಿಯೇ ಅಮೆರಿಕದ ಅಧಿಕಾರಿಗಳು ಅವುಗಳನ್ನು ಅಲ್ಲಿಯೇ ಕಸದ ಬುಟ್ಟಿಗೆ ಎಸೆದು ತಮ್ಮ ದೇಶಕ್ಕೆ ಮರಳಿದ್ದು.

ಅಕೌಸ್ಟಿಕ್ ಸೈಡ್‌ಚಾನೆಲ್ ಅಟ್ಯಾಕ್

ಇದು ತೀರಾ ಅತ್ಯಾಧುನಿಕ ವಿಜ್ಞಾನ. ಚೀನಾದ ತಂತ್ರಜ್ಞರು ಹೋಟೆಲ್ ಕೊಠಡಿಗಳಲ್ಲಿರುವ ಸ್ಮಾರ್ಟ್ ಟಿವಿ ಅಥವಾ ಎ.ಸಿ.ಗಳ ಮೈಕ್ರೊಫೋನ್ ಬಳಸಿ, ಅಧಿಕಾರಿಗಳು ತಮ್ಮ ಲ್ಯಾಪ್‌ಟಾಪ್ ಕೀಬೋರ್ಡ್ ಮೇಲೆ ಟೈಪ್ ಮಾಡುವ ಶಬ್ದವನ್ನು (ಕೀ-ಲಾಗ್ ಸೌಂಡ್) ಆಲಿಸುತ್ತಾರೆ. ಕೀಬೋರ್ಡ್‌ನ ಪ್ರತಿಯೊಂದು ಅಕ್ಷರ ಒತ್ತುವಾಗಲೂ ಬರುವ ವಿಶಿಷ್ಟ ಶಬ್ದ ತರಂಗಗಳನ್ನು ಕೃತಕ ಬುದ್ಧಿಮತ್ತೆ (ಎಐ) ಮೂಲಕ ವಿಶ್ಲೇಷಿಸಿ, ರಹಸ್ಯ ಪಾಸ್‌ವರ್ಡ್‌ಗಳನ್ನು ಪತ್ತೆ ಹಚ್ಚುವ ಕಲೆ ಚೀನಾ ತಂತ್ರಜ್ಞರಿಗೆ ಕರಗತವಾಗಿದೆ.

ಇದರಿಂದ ತಪ್ಪಿಸಿಕೊಳ್ಳುವುದು ಹೇಗೆ?

ಚೀನಾ ಮತ್ತಿತರ ಯಾವುದೇ ದೇಶಗಳಿಗೆ ಪ್ರವಾಸ ಕೈಗೊಳ್ಳುವ ಉದ್ಯಮಿಗಳು, ಅಧಿಕಾರಿಗಳು, ಸಾರ್ವಜನಿಕರು ತಮ್ಮ ಡಿಜಿಟಲ್ ಸುರಕ್ಷತೆಗಾಗಿ ಈ ಕೆಳಗಿನ ಉಪಾಯಗಳನ್ನು ಪಾಲಿಸಬಹುದು:
ಬರ್ನರ್ ಫೋನ್‌ಗಳ ಬಳಕೆ: ಸೂಕ್ಷ್ಮ ಪ್ರದೇಶಗಳಿಗೆ ಹೋಗುವಾಗ ನಿಮ್ಮ ವೈಯಕ್ತಿಕ ಮತ್ತು ಬ್ಯಾಂಕಿಂಗ್ ವಿವರಗಳಿರುವ ಪ್ರಮುಖ ಫೋನ್ ಕೊಂಡೊಯ್ಯಬೇಡಿ. ಕೇವಲ ಕರೆ ಮಾಡಲು ಮಾತ್ರ ಸೀಮಿತವಾದ, ಯಾವುದೇ ವೈಯಕ್ತಿಕ ಡೇಟಾ ಇಲ್ಲದ ತಾತ್ಕಾಲಿಕ ಫೋನ್ ಕೊಂಡೊಯ್ದು, ಪ್ರವಾಸ ಮುಗಿದ ನಂತರ ಅದನ್ನು ನಾಶಪಡಿಸಬಹುದು.
ಯುಎಸ್ಬಿ ಡೇಟಾ ಬ್ಲಾಕರ್ಸ್: ವಿದೇಶಕ್ಕೆ ಹೋದಾಗ ಸಾರ್ವಜನಿಕ ಸ್ಥಳಗಳಲ್ಲಿ ಚಾರ್ಜ್ ಮಾಡಲೇಬೇಕಾದ ಅನಿವಾರ್ಯತೆ ಬಂದರೆ ‘ಯುಎಸ್ಬಿ ಡೇಟಾ ಬ್ಲಾಕರ್’ ಎಂಬ ಸಣ್ಣ ಅಡಾಪ್ಟರ್ ಬಳಸಿ. ಇದು ಚಾರ್ಜಿಂಗ್ ಕೇಬಲ್‌ನಿಂದ ಕೇವಲ ವಿದ್ಯುತ್ ಮಾತ್ರ ಹರಿಯುವಂತೆ ಮಾಡುತ್ತದೆ; ಡೇಟಾ ಲೈನ್‌ಗಳನ್ನು ಸಂಪೂರ್ಣವಾಗಿ ಬ್ಲಾಕ್ ಮಾಡುತ್ತದೆ.
ಸ್ವಂತ ಪವರ್ ಬ್ಯಾಂಕ್, ಎಸಿ ಅಡಾಪ್ಟರ್: ಸಾರ್ವಜನಿಕ ಸ್ಥಳದಲ್ಲಿರುವ ಯುಎಸ್ಬಿ ಪೋರ್ಟ್‌ಗಳನ್ನು ಎಂದಿಗೂ ಬಳಸಬೇಡಿ. ನೇರವಾಗಿ ಗೋಡೆಯ ಎಸಿ ಸಾಕೆಟ್‌ಗೆ ನಿಮ್ಮದೇ ಅಡಾಪ್ಟರ್ ಹಾಕಿ ಚಾರ್ಜ್ ಮಾಡಿ. ವಿಶ್ವಾಸಾರ್ಹ ಕಂಪನಿಯ ಪವರ್ ಬ್ಯಾಂಕ್ ಸದಾ ಜೊತೆಯಲ್ಲಿ ಇಟ್ಟುಕೊಳ್ಳಿ.
ಉಡುಗೊರೆ ಬಗ್ಗೆ ಎಚ್ಚರ: ಅಪರಿಚಿತ ದೇಶಗಳಲ್ಲಿ ಉಡುಗೊರೆಯಾಗಿ ಕೊಡುವ ಉಚಿತ ಯುಎಸ್ಬಿ ಡ್ರೈವ್‌ಗಳು, ಪವರ್ ಬ್ಯಾಂಕ್‌ಗಳು ಅಥವಾ ಯಾವುದೇ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ನಿಮ್ಮ ಲ್ಯಾಪ್‌ಟಾಪ್ ಅಥವಾ ಫೋನ್‌ಗೆ ಕನೆಕ್ಟ್ ಮಾಡಬೇಡಿ. ಅವುಗಳಲ್ಲಿ ಸ್ಪೈವೇರ್ ಇರುವ ಸಾಧ್ಯತೆ ಶೇ. 99ರಷ್ಟಿರುತ್ತದೆ.
ವಿಪಿಎನ್, ಓಪನ್ ವೈಫೈ ಬೇಡ: ಹೋಟೆಲ್ ಅಥವಾ ಸಮ್ಮೇಳನ ಸಭಾಂಗಣಗಳ ಉಚಿತ, ಓಪನ್ ವೈಫೈ ಬಳಸಬೇಡಿ. ಅನಿವಾರ್ಯವಾದರೆ ಮಿಲಿಟರಿ ದರ್ಜೆಯ ಎನ್‌ಕ್ರಿಪ್ಷನ್ (ಗೂಢಲಿಪೀಕರಣ) ಹೊಂದಿರುವ ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್ (ವಿಪಿಎನ್) ಬಳಸಿ. ಬ್ಲೂಟೂತ್ ಮತ್ತು ಲೊಕೇಶನ್ ಸದಾ ಆಫ್ ಇಡಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net