ರೈತರಿಗೆ ಮಾಡಿದ ಅನ್ಯಾಯವನ್ನೇ ಈಗ ಕಾರ್ಮಿಕರಿಗೂ ಮಾಡುತ್ತಿದ್ದಾರೆ: ನರೇಗಾ ರದ್ಧತಿ ವಿರುದ್ಧ ರಾಹುಲ್ ಗಾಂಧಿ ಕಿಡಿ | Rahul Gandhi

ರೈತರಿಗೆ ಮಾಡಿದ ಅನ್ಯಾಯವನ್ನೇ ಈಗ ಕಾರ್ಮಿಕರಿಗೂ ಮಾಡುತ್ತಿದ್ದಾರೆ: ನರೇಗಾ ರದ್ಧತಿ ವಿರುದ್ಧ ರಾಹುಲ್ ಗಾಂಧಿ ಕಿಡಿ
ರೈತರಿಗೆ ಮಾಡಿದ ಅನ್ಯಾಯವನ್ನೇ ಈಗ ಕಾರ್ಮಿಕರಿಗೂ ಮಾಡುತ್ತಿದ್ದಾರೆ: ನರೇಗಾ ರದ್ಧತಿ ವಿರುದ್ಧ ರಾಹುಲ್ ಗಾಂಧಿ ಕಿಡಿ
Published on
ನವದೆಹಲಿ: ಕೇಂದ್ರದ ಮೋದಿ ಸರ್ಕಾರವು ನರೇಗಾ ಯೋಜನೆಯನ್ನು ರದ್ದುಗೊಳಿಸಿ ಹೊಸ ವಿಬಿ ಗ್ರಾಮ್ ಜಿ (VB G RAM G) ಕಾಯ್ದೆಯನ್ನು ತರಲು ಮುಂದಾಗಿರುವುದರ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ನಡೆಯನ್ನು ಈ ಹಿಂದೆ ತಂದಿದ್ದ ಮೂರು ಕರಾಳ ಕೃಷಿ ಕಾಯ್ದೆಗಳಿಗೆ ಹೋಲಿಸಿರುವ ಅವರು, ಇದು ಬಡವರ ವಿರುದ್ಧದ ವ್ಯವಸ್ಥಿತ ದಾಳಿ ಎಂದು ಹೇಳಿದ್ದಾರೆ.
ಈ ಬಗ್ಗೆ ಗುರುವಾರ (ಜ.22) ನಡೆದ ಕಾರ್ಮಿಕರ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಸರ್ಕಾರದ ಉದ್ದೇಶಗಳು ಮತ್ತು ತಂತ್ರಗಳು ರೈತರ ಹೋರಾಟದ ಸಂದರ್ಭದಲ್ಲಿದ್ದಂತೆಯೇ ಇವೆ ಎಂದು ಆರೋಪಿಸಿದ್ದಾರೆ.

ರೈತರ ಮೇಲಿನ ದಾಳಿಯ ಪುನರಾವರ್ತನೆ

ಇಂದು ನಾನು ಇಲ್ಲಿ ನೋಡುತ್ತಿರುವುದು ಕಳೆದ ಕೆಲವು ವರ್ಷಗಳ ಹಿಂದೆ ರೈತರ ಹೋರಾಟದ ಸಮಯದಲ್ಲಿ ಕಂಡ ದೃಶ್ಯವೇ ಆಗಿದೆ. ಅಂದು ಸರ್ಕಾರವು ಮೂರು ಕರಾಳ ಕೃಷಿ ಕಾಯ್ದೆಗಳ ಮೂಲಕ ರೈತರ ಬೆನ್ನೆಲುಬನ್ನು ಮುರಿಯಲು ಪ್ರಯತ್ನಿಸಿತ್ತು. ಅದರೆ, ಇಂದು ನರೇಗಾ (MGNREGA) ರದ್ದುಗೊಳಿಸುವ ಮೂಲಕ ಗ್ರಾಮೀಣ ಕಾರ್ಮಿಕರ ಮೇಲೆ ಅದೇ ರೀತಿಯ ದಾಳಿಯನ್ನು ಮಾಡುತ್ತಿದೆ. ಅಂದು ರೈತರಿಗೆ ಏನು ಮಾಡಿದ್ದರೋ, ಇಂದು ಕಾರ್ಮಿಕರಿಗೂ ಅದನ್ನೇ ಮಾಡಲು ಹೊರಟಿದ್ದಾರೆ. ಅವರ ಉದ್ದೇಶ ಬದಲಾಗಿಲ್ಲ, ಕೇವಲ ಗುರಿ ಮಾತ್ರ ಬದಲಾಗಿದೆ ಎಂದು ಮೋದಿ ಸರ್ಕಾರದ ವಿರುದ್ಧ ಗುಡಿಗಿದ್ದಾರೆ.

ವಿಬಿ ಗ್ರಾಮ್ ಜಿ ಎಂಬ ಹೊಸ ಮಾಯಾಜಾಲ

ಸರ್ಕಾರವು ನರೇಗಾ ಬದಲಿಗೆ ವಿಬಿ ಗ್ರಾಮ್ ಜಿ ಎಂಬ ಹೊಸ ಕಾನೂನನ್ನು ತರುತ್ತಿದೆ. ಇದರ ಹೆಸರೇ ಗೊಂದಲಮಯವಾಗಿದೆ. ಈ ಹೊಸ ಕಾಯ್ದೆಯ ಹಿಂದೆ ಕಾರ್ಮಿಕರ ಹಿತವಿಲ್ಲ, ಬದಲಿಗೆ ಬಡವರ ಹಕ್ಕುಗಳನ್ನು ಕಸಿದುಕೊಳ್ಳುವ ತಂತ್ರವಿದೆ ಎಂದಿದ್ದಾರೆ. ನರೇಗಾ ಎಂಬುದು ಬಡವರಿಗೆ ನಾವು ನೀಡಿದ್ದ ಕೆಲಸದ ಹಕ್ಕು. ಆದರೆ ಈ ಹೊಸ ಕಾನೂನು ಬಡವರನ್ನು ಕಾರ್ಪೊರೇಟ್ ಕಂಪನಿಗಳ ಮುಂದೆ ಕೈಚಾಚುವಂತೆ ಮಾಡುತ್ತದೆ. ಇದು ಕೆಲಸದ ಹಕ್ಕನ್ನು ದಾಕ್ಷಿಣ್ಯವನ್ನಾಗಿ ಬದಲಿಸುವ ಪ್ರಯತ್ನ ಎಂದು ರಾಹುಲ್​​​​​​​​ ತಿಳಿಸಿದ್ದಾರೆ.

ಎರಡು ಭಾರತಗಳ ನಡುವಿನ ಸಂಘರ್ಷ

ಈ ದೇಶದಲ್ಲಿ ಇಂದು ಎರಡು ಭಾರತಗಳಿವೆ. ಒಂದು ಬಿಲಿಯನೇರ್‌ಗಳ ಭಾರತ, ಅಲ್ಲಿ ಸಾವಿರಾರು ಕೋಟಿ ಸಾಲ ಮನ್ನಾ ಮಾಡಲಾಗುತ್ತದೆ. ಅಲ್ಲದೆ, ಇನ್ನೊಂದು ಬಡ ಕಾರ್ಮಿಕರ ಭಾರತ, ಅಲ್ಲಿ ಕೇವಲ 200-300 ರೂಪಾಯಿ ಕೂಲಿಗಾಗಿ ಜನರು ಬೆವರು ಹರಿಸುತ್ತಾರೆ. ನರೇಗಾದಂತಹ ಯೋಜನೆಗಳು ಈ ಇಬ್ಬರ ನಡುವಿನ ಕಂದಕವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುತ್ತಿದ್ದವು. ಆದರೆ ಮೋದಿ ಸರ್ಕಾರಕ್ಕೆ ಆ ಸಣ್ಣ ಆಸರೆಯೂ ಕಣ್ಣು ಕುಕ್ಕುತ್ತಿದೆ. ಶ್ರೀಮಂತರಿಗೆ ಹಣ ನೀಡಲು ಸರ್ಕಾರದ ಬಳಿ ನಿಧಿಯಿದೆ, ಆದರೆ ಬಡವರ ಕೂಲಿಗೆ ಹಣವಿಲ್ಲ ಎನ್ನುತ್ತಾರೆ ಎಂದು ವಿಪಕ್ಷ ನಾಯಕ ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಒಗ್ಗಟ್ಟಿನ ಹೋರಾಟಕ್ಕೆ ಕರೆ

ನಾನು ಬಡವರಲ್ಲಿ ಮತ್ತು ಕಾರ್ಮಿಕರಲ್ಲಿ ವಿನಂತಿಸುತ್ತೇನೆ. ರೈತರು ಹೇಗೆ ಒಂದಾಗಿ ನಿಂತು ಸರ್ಕಾರವನ್ನು ಮಣಿಸಿದರೋ, ನೀವು ಅದೇ ರೀತಿ ಸಂಘಟಿತರಾಗಬೇಕು. ನೀವು ಒಗ್ಗಟ್ಟಾಗದಿದ್ದರೆ ನಿಮ್ಮ ಹಕ್ಕುಗಳನ್ನು ಒಂದೊಂದಾಗಿ ಕಿತ್ತುಕೊಳ್ಳಲಾಗುತ್ತದೆ. ಈ ವಿಬಿ ಗ್ರಾಮ್ ಜಿ ಕಾಯ್ದೆಯನ್ನು ಜಾರಿಗೆ ತರಲು ನಾವು ಬಿಡುವುದಿಲ್ಲ. ಇದು ನಿಮ್ಮ ಬದುಕಿನ ಪ್ರಶ್ನೆ ಎಂದು ರಾಹುಲ್ ತಿಳಿಸಿದ್ದಾರೆ.

ಸಂಸತ್ತಿನಲ್ಲಿ ಕಾಂಗ್ರೆಸ್ ಧ್ವನಿ

ನಾನು ನಿಮಗೆ ಭರವಸೆ ನೀಡುತ್ತೇನೆ, ಮುಂಬರುವ ಬಜೆಟ್ ಅಧಿವೇಶನದಲ್ಲಿ ನಾನು ಮತ್ತು ಕಾಂಗ್ರೆಸ್ ಪಕ್ಷವು ಈ ವಿಷಯವನ್ನು ಪ್ರಬಲವಾಗಿ ಎತ್ತುತ್ತೇವೆ. ಅಲ್ಲದೆ, ಸಂಸತ್ತಿನ ಪ್ರತಿ ಮೂಲೆಯಲ್ಲೂ ಬಡವರ ಧ್ವನಿ ಕೇಳಿಸುವಂತೆ ಮಾಡುತ್ತೇವೆ. ಇದು ಕೇವಲ ಕಾನೂನಿನ ಹೋರಾಟವಲ್ಲ, ಇದು ಬಡವರ ಆತ್ಮಗೌರವದ ಹೋರಾಟ ಎಂದು ರಾಹುಲ್​ ಹೇಳಿದ್ದಾರೆ.

ಸಂಸತ್ತಿನಲ್ಲಿ ಹೋರಾಟದ ಕಿಚ್ಚು

ಬಜೆಟ್ ಅಧಿವೇಶನದಲ್ಲಿ ಕಾಂಗ್ರೆಸ್ ಈ ವಿಷಯವನ್ನು ಪ್ರಮುಖವಾಗಿ ಪ್ರಸ್ತಾಪಿಸಲಿದೆ. ರೈತರ ಹೋರಾಟದ ಮಾದರಿಯಲ್ಲೇ ಈ ಬಾರಿ ಕಾರ್ಮಿಕರ ಹಿತಕ್ಕಾಗಿ ಸಂಸತ್ತಿನ ಒಳಗೂ ಮತ್ತು ಹೊರಗೂ ಬೃಹತ್ ಹೋರಾಟ ರೂಪಿಸಲು ರಾಹುಲ್ ಗಾಂಧಿ ತಯಾರಿ ನಡೆಸಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net