ನರೇಗಾ ರದ್ದು; ಮಹಾತ್ಮ ಗಾಂಧಿ ಹೆಸರನ್ನು ಅಳಿಸುವ ಸಂಚು: ಕೇಂದ್ರ ಸರ್ಕಾರದ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ | Mallikarjun Kharge

ನರೇಗಾ ರದ್ದು; ಮಹಾತ್ಮ ಗಾಂಧಿ ಹೆಸರನ್ನು ಅಳಿಸುವ ಸಂಚು: ಕೇಂದ್ರ ಸರ್ಕಾರದ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ
ನರೇಗಾ ರದ್ದು; ಮಹಾತ್ಮ ಗಾಂಧಿ ಹೆಸರನ್ನು ಅಳಿಸುವ ಸಂಚು: ಕೇಂದ್ರ ಸರ್ಕಾರದ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ
Published on
ನವದೆಹಲಿ: ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯನ್ನು (MGNREGA) ರದ್ದುಗೊಳಿಸಿರುವುದನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ತೀವ್ರವಾಗಿ ಖಂಡಿಸಿದ್ದಾರೆ. ಇದು ಕೇವಲ ಒಂದು ಯೋಜನೆಯ ರದ್ದತಿಯಲ್ಲ, ಬದಲಿಗೆ ಸಾರ್ವಜನಿಕರ ಸ್ಮೃತಿಯಿಂದ ಮಹಾತ್ಮ ಗಾಂಧಿಯವರ ಹೆಸರನ್ನು ಅಳಿಸಿಹಾಕುವ ಮತ್ತು ಗ್ರಾಮ ಸ್ವರಾಜ್ಯದ ಪರಿಕಲ್ಪನೆಯನ್ನು ದುರ್ಬಲಗೊಳಿಸುವ ವ್ಯವಸ್ಥಿತ ಸಂಚು ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ರಾಚನಾತ್ಮಕ ಕಾಂಗ್ರೆಸ್ ಆಯೋಜಿಸಿದ್ದ ರಾಷ್ಟ್ರೀಯ ನರೇಗಾ ಕಾರ್ಮಿಕರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, ಮುಂಬರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಈ ವಿಷಯದ ಬಗ್ಗೆ ಸರ್ಕಾರವನ್ನು ಬಲವಾಗಿ ತರಾಟೆಗೆ ತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ.

ಮಹಾತ್ಮ ಗಾಂಧಿಯವರ ಹೆಸರನ್ನು ಅಳಿಸುವ ಸಂಚು

ಬಂಧುಗಳೇ, ಇಂದು ಕೇಂದ್ರ ಸರ್ಕಾರವು ನರೇಗಾ (MGNREGA) ಯೋಜನೆಯನ್ನು ರದ್ದುಗೊಳಿಸಲು ಮುಂದಾಗಿರುವುದು ಕೇವಲ ಆರ್ಥಿಕ ನಿರ್ಧಾರವಲ್ಲ. ಇದು ಸಾರ್ವಜನಿಕರ ಮನಸ್ಸಿನಿಂದ ಮಹಾತ್ಮ ಗಾಂಧಿಯವರ ಹೆಸರನ್ನು ಅಳಿಸಿಹಾಕುವ ಒಂದು ವ್ಯವಸ್ಥಿತ ಪಿತೂರಿಯಾಗಿದೆ. ಗಾಂಧೀಜಿಯವರ ಹೆಸರಿರುವ ಕಾರಣಕ್ಕೇ ಈ ಯೋಜನೆಯ ಮೇಲೆ ಸರ್ಕಾರಕ್ಕೆ ಇಷ್ಟೊಂದು ದ್ವೇಷವಿದೆ. ಇತಿಹಾಸವನ್ನು ಬದಲಿಸಲು ಹೊರಟಿರುವವರು ಈಗ ಬಡವರ ಬದುಕನ್ನೇ ಕಸಿದುಕೊಳ್ಳುತ್ತಿದ್ದಾರೆ ಕೇಂದ್ರದ ವಿರುದ್ಧ ಖರ್ಗೆ ಕಿಡಿಕಾರಿದ್ದಾರೆ.

ಗ್ರಾಮ ಸ್ವರಾಜ್ಯದ ಕಲ್ಪನೆಗೆ ಕೊಡಲಿ ಪೆಟ್ಟು

ನರೇಗಾ ಎಂದರೆ ಕೇವಲ 100 ದಿನಗಳ ಕೆಲಸವಲ್ಲ. ಅದು ಗ್ರಾಮೀಣ ಭಾರತದ ಶಕ್ತಿಯಾಗಿದೆ. ಬಾಪೂಜಿಯವರು ಕಂಡ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡಲು ಕಾಂಗ್ರೆಸ್ ಈ ಕಾನೂನನ್ನು ತಂದಿತ್ತು. ಹಳ್ಳಿಯ ಬಡವ ತನ್ನ ಹಕ್ಕಿನಿಂದ ಕೆಲಸ ಕೇಳುವ ಅಧಿಕಾರವನ್ನು ಇದು ನೀಡಿತ್ತು. ಈಗ ಸರ್ಕಾರವು ಗ್ರಾಮ ಪಂಚಾಯತ್‌ಗಳ ಅಧಿಕಾರವನ್ನು ಕಿತ್ತುಕೊಂಡು, ಎಲ್ಲವನ್ನೂ ಕೇಂದ್ರೀಕೃತಗೊಳಿಸಲು ಹೊರಟಿದೆ. ಇದು ಪ್ರಜಾಪ್ರಭುತ್ವದ ವಿರೋಧಿ ನಡೆ ಮೋದಿ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

ಬಡವರ ಹಸಿವಿನೊಂದಿಗೆ ಚೆಲ್ಲಾಟ

ಮುಂದುವರೆದು ಮಾತನಾಡಿರುವ ಖರ್ಗೆ, ಕೊರೊನಾ ಸಂಕಷ್ಟದ ಸಮಯದಲ್ಲಿ ಕೋಟ್ಯಂತರ ಕುಟುಂಬಗಳನ್ನು ರಕ್ಷಿಸಿದ್ದು ಇದೇ ನರೇಗಾ ಯೋಜನೆ ಎಂದಿದ್ದಾರೆ. ಅಲ್ಲದೆ, ನಗರಗಳಿಂದ ಹಳ್ಳಿಗಳಿಗೆ ವಲಸೆ ಹೋದವರಿಗೆ ಆಸರೆಯಾಗಿದ್ದು ಇದೇ ಕೆಲಸ. ಇಂದು ಸರ್ಕಾರವು ಆರ್ಥಿಕ ಸುಧಾರಣೆಯ ಹೆಸರಿನಲ್ಲಿ ಬಡವರ ಹಸಿವಿನೊಂದಿಗೆ ಚೆಲ್ಲಾಟವಾಡುತ್ತಿದೆ. ಉದ್ಯೋಗದ ಹಕ್ಕನ್ನು ಕಿತ್ತುಕೊಳ್ಳುವ ಮೂಲಕ ನೀವು ಯಾರನ್ನು ಉದ್ದಾರ ಮಾಡಲು ಹೊರಟಿದ್ದೀರಿ? ಶ್ರೀಮಂತ ಉದ್ಯಮಿಗಳ ಸಾಲ ಮನ್ನಾ ಮಾಡುವ ಈ ಸರ್ಕಾರಕ್ಕೆ ಬಡವರಿಗೆ ಕೂಲಿ ನೀಡಲು ಹಣವಿಲ್ಲವೇ ಕೇಂದ್ರವನ್ನು ಎಐಸಿಸಿ ಅಧ್ಯಕ್ಷರು ಪ್ರಶ್ನಿಸಿದ್ದಾರೆ.

ಬಜೆಟ್ ಅಧಿವೇಶನದಲ್ಲಿ ಆರ್ಭಟದ ಎಚ್ಚರಿಕೆ

ಮುಂಬರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ನಾವು ಸುಮ್ಮನೆ ಕೂರುವುದಿಲ್ಲ. ಅಲ್ಲದೆ, ಕಾಂಗ್ರೆಸ್ ಪಕ್ಷ ಮತ್ತು ನಮ್ಮ ಮಿತ್ರ ಪಕ್ಷಗಳು ಈ ವಿಷಯವನ್ನು ಅತ್ಯಂತ ಬಲವಾಗಿ ಎತ್ತಲಿವೆ. ಬಡವರ ಧ್ವನಿಯನ್ನು ಸಂಸತ್ತಿನಲ್ಲಿ ಪ್ರತಿಧ್ವನಿಸುವಂತೆ ಮಾಡುತ್ತೇವೆ. ಸರ್ಕಾರವು ಈ ಹೊಸ ಕರಾಳ ಕಾನೂನನ್ನು ಹಿಂಪಡೆಯುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಖರ್ಗೆ ಗುಡುಗಿದ್ದಾರೆ.

ಜನತೆಗೆ ಕರೆ: ಒಂದಾಗಿ ಹೋರಾಡಿ

ಕೇವಲ ಸಂಸತ್ತಿನಲ್ಲಿ ಮಾತನಾಡುವುದರಿಂದ ಬದಲಾವಣೆ ಬರಲ್ಲ. ನೀವೆಲ್ಲರೂ ಈಗ ಬೀದಿಗೆ ಇಳಿಯಬೇಕು. ಈ ಸರ್ಕಾರಕ್ಕೆ ನಿಮ್ಮ ಶಕ್ತಿಯ ಪ್ರದರ್ಶನವಾಗಬೇಕು. ಸರ್ಕಾರದ ಹೊಸ ಉದ್ಯೋಗ ನೀತಿಯನ್ನು ಜಾರಿಗೆ ತರಲು ನಾವು ಬಿಡುವುದಿಲ್ಲ. ಇದು ಬಡವರ ಮತ್ತು ಬಂಡವಾಳಶಾಹಿಗಳ ನಡುವಿನ ಯುದ್ಧ ಎಂದು ಮೋದಿ ಸರ್ಕಾರದ ವಿರುದ್ಧ ಖರ್ಗೆ ರಣಕಹಳೆ ಮೋಳಗಿಸಿದ್ದಾರೆ.

ಬಜೆಟ್ ಅಧಿವೇಶನದಲ್ಲಿ ಸಂಘರ್ಷದ ಸೂಚನೆ

ಜನವರಿ ಕೊನೆಯ ವಾರದಲ್ಲಿ ಆರಂಭವಾಗಲಿರುವ ಬಜೆಟ್ ಅಧಿವೇಶನವು ಅತ್ಯಂತ ಕಾವೇರಿರಲಿದೆ ಎಂಬ ಸೂಚನೆಯನ್ನು ಖರ್ಗೆ ನೀಡಿದ್ದಾರೆ. ವಿರೋಧ ಪಕ್ಷಗಳ ಒಕ್ಕೂಟವಾದ ಇಂಡಿಯಾ (INDIA) ಈ ವಿಷಯದಲ್ಲಿ ಸರ್ಕಾರವನ್ನು ಜಂಟಿಯಾಗಿ ಎದುರಿಸುವ ಸಾಧ್ಯತೆಯಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net