

ಶಿಮ್ಲಾ: ಇತ್ತೀಚಿನ ದಿನಗಳಲ್ಲಿ ಸಾಹಸ ಕ್ರೀಡೆಗಳ ಕ್ರೇಜ್ ಹೆಚ್ಚಾಗುತ್ತಿದೆ. ಅದರಲ್ಲೂ ಹಿಮಾಚಲ ಪ್ರದೇಶದಲ್ಲಿ, ಹಕ್ಕಿಗಳಂತೆ ಹಾರುವ ಪ್ಯಾರಾಗ್ಲೈಡಿಂಗ್ ಮಾಡುವ ಉತ್ಸಾಹಿ ಯುವ ಸಮುದಾಯಕ್ಕೆ ಜನರ ಬರವಿಲ್ಲ. ಆದರೆ, ಈ ಪ್ಯಾರಾಗ್ಲೈಡಿಂಗ್ ಹುಚ್ಚು ಒಬ್ಬ ಯುವಕನ ಪ್ರಾಣವನ್ನೇ ಬಲಿ ಪಡೆದಿದೆ. ಜಗತ್ಪ್ರಸಿದ್ಧ ಪ್ಯಾರಾಗ್ಲೈಡಿಂಗ್ ತಾಣವಾದ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ 'ಬೀರ್-ಬಿಲ್ಲಿಂಗ್' ಬೆಟ್ಟಗಳಲ್ಲಿ ಭೀಕರ ದುರಂತವೊಂದು ನಡೆದಿದ್ದು, ಪ್ಯಾರಾಗ್ಲೈಡಿಂಗ್ ಮಾಡುತ್ತಿದ್ದಾಗ ಆಕಾಶದಿಂದ ಕೆಳಗೆ ಬಿದ್ದು ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತ ದುರ್ದೈವಿಯನ್ನು ಗ್ರೇಟರ್ ನೋಯ್ಡಾದ ನಿವಾಸಿ ಶುಭಂ ಡೋಬ್ಲಿಯಾಲ್ ಎಂದು ಗುರುತಿಸಲಾಗಿದೆ. ಪ್ರತಿಷ್ಠಿತ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್ (ONGC) ಸಂಸ್ಥೆಯಲ್ಲಿ ಕೆಲಸದಲ್ಲಿದ್ದ ಶುಭಂ, ಜೀವನದ ಜಂಜಾಟದಿಂದ ರಿಲ್ಯಾಕ್ಸ್ ಮಾಡಲು ತಮ್ಮ ಸಹೋದರಿ ಮತ್ತು ಮೂವರು ಸೋದರಸಂಬಂಧಿಗಳ ಜೊತೆ ಹಿಮಾಚಲ ಪ್ರದೇಶಕ್ಕೆ ಪ್ರವಾಸಕ್ಕೆ ಬಂದಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಜರುಗಿದೆ.
ನವೆಂಬರ್ 10 ರಂದು ಶುಭಂ ಅವರು ಇಬ್ಬರು ಪ್ರಯಾಣಿಸಬಹುದಾದ 'ಟ್ಯಾಂಡೆಮ್ ಪ್ಯಾರಾಗ್ಲೈಡರ್' ಮೂಲಕ ಆಕಾಶಕ್ಕೆ ಹಾರಿದ್ದರು. ಹಾರಾಟ ಶುರುವಾದ ಕೆಲವೇ ಹೊತ್ತಿನಲ್ಲಿ ತಾಂತ್ರಿಕ ದೋಷವೋ ಅಥವಾ ಸುರಕ್ಷತಾ ಬೆಲ್ಟ್ ಸರಿಯಾಗಿ ಹಾಕದ ಕಾರಣವೋ ಗೊತ್ತಿಲ್ಲ, ಶುಭಂ ಏಕಾಏಕಿ ಪ್ಯಾರಾಗ್ಲೈಡರ್‌ನಿಂದ ಜಾರಿ ನೂರಾರು ಅಡಿ ಎತ್ತರದಿಂದ ನೆಲಕ್ಕೆ ಬಿದ್ದಿದ್ದಾರೆ. ಕಣ್ಣೆದುರೇ ತಮ್ಮವರು ಆಕಾಶದಿಂದ ಬೀಳುವುದನ್ನು ನೋಡಿದ ಕುಟುಂಬಸ್ಥರು ಮತ್ತು ಸ್ನೇಹಿತರು ಬೆಚ್ಚಿಬಿದ್ದಿದ್ದಾರೆ. ತಕ್ಷಣವೇ ಶುಭಂ ಸ್ನೇಹಿತರು ಎಮರ್ಜೆನ್ಸಿ ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಶುಭಂ ಜೊತೆ ಬಂದಿದ್ದ 24 ವರ್ಷದ ಯುವತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಪೈಲಟ್‌ನ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ನವೆಂಬರ್ 11 ರಂದು ಪ್ಯಾರಾಗ್ಲೈಡರ್ ಚಲಾಯಿಸುತ್ತಿದ್ದ ಕಾಂಗ್ರಾ ಜಿಲ್ಲೆಯ 45 ವರ್ಷದ ಪೈಲಟ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 125 ಮತ್ತು 106 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಸದ್ಯ ಪೈಲಟ್‌ನನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ತನಿಖೆ ಚುರುಕುಗೊಂಡಿದೆ.
ಬೀರ್-ಬಿಲ್ಲಿಂಗ್‌ನಲ್ಲಿ ಪ್ಯಾರಾಗ್ಲೈಡಿಂಗ್ ಅಪಘಾತಗಳು ನಡೆಯುತ್ತಿರುವುದು ಇದೇ ಮೊದಲೇನಲ್ಲ. ಕಳೆದ ತಿಂಗಳಷ್ಟೇ, ಅಂದ್ರೆ ಅಕ್ಟೋಬರ್ 25ರಂದು ಬೀರ್-ಬಿಲ್ಲಿಂಗ್‌ನಿಂದ ಹಾರಾಟ ಆರಂಭಿಸಿದ್ದ ಇಬ್ಬರು ವಿದೇಶಿ ಪ್ರವಾಸಿಗರು ಪ್ರತಿಕೂಲ ಹವಾಮಾನ ಮತ್ತು ಬಲವಾದ ಗಾಳಿಗೆ ಸಿಲುಕಿ ಧರ್ಮಶಾಲಾದ ರೈಸಿಂಗ್ ಸ್ಟಾರ್ ಪೀಕ್ ಬಳಿ ಅಪಘಾತಕ್ಕೀಡಾಗಿದ್ದರು.
ಈ ದುರಂತದಲ್ಲಿ ಬಲ್ಗೇರಿಯಾ ದೇಶದ 47 ವರ್ಷದ ಮಕ್ಸಿಮ್ ವ್ಯಾಲೆಂಟಿನೋವಿಚ್ ಗಾವ್ರಿಲಿಚೆಂಕೊ ಎಂಬುವವರು ಮೃತಪಟ್ಟಿದ್ದರು. ಅವರ ಜೊತೆಗಿದ್ದ 63 ವರ್ಷದ ಬ್ರಿಟಿಷ್ ಪ್ರಜೆ ಸ್ಟೀಫನ್ ಆಂಟನಿ ಪರ್ಡಿ ಅವರನ್ನು ಪೊಲೀಸರು ಮತ್ತು 'ಹಿಮ್ ಸಂಚಾರ್ ರೆಸ್ಕ್ಯೂ ಟೀಮ್' ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಪ್ರಾಣಾಪಾಯದಿಂದ ಪಾರು ಮಾಡಿದ್ದರು, (ಏಜೆನ್ಸೀಸ್).