

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಬುಧವಾರ (ನ.18) ಮುಂಜಾನೆ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಮತ್ತೆ ಭೀಕರ ಗುಂಡಿನ ಚಕಮಕಿ ಆರಂಭವಾಗಿದೆ.
ಇದೇ ಜಿಲ್ಲೆಯಲ್ಲಿ ಉಗ್ರನೊಬ್ಬನನ್ನು ಸೇನೆ ಹೊಡೆದುರುಳಿಸಿದ ಕೇವಲ ಎರಡು ದಿನಗಳ ಬೆನ್ನಲ್ಲೇ ಈ ಹೊಸ ಕಾರ್ಯಾಚರಣೆ ಶುರುವಾಗಿದ್ದು, ಇತ್ತೀಚಿನ ಸಿಆರ್‌ಪಿಎಫ್ ಮೇಲಿನ ದಾಳಿಯ ಮಾಸ್ಟರ್‌ಮೈಂಡ್, ಲಷ್ಕರ್-ಎ-ತೈಬಾ (LeT) ಕಮಾಂಡರ್ ಲತೀಫ್ ಭಟ್‌ನನ್ನು ಭದ್ರತಾ ಪಡೆಗಳು ಸುತ್ತುವರಿದಿವೆ ಎನ್ನಲಾಗಿದೆ.
ಕುಲ್ಗಾಂ ಜಿಲ್ಲೆಯ ಜಂಗಲ್‌ಪೋರಾ ಗ್ರಾಮದಲ್ಲಿ ಈ ಗುಂಡಿನ ಚಕಮಕಿ ನಡೆಯುತ್ತಿದೆ. ಇತ್ತೀಚೆಗೆ ಭಯೋತ್ಪಾದಕ ದಾಳಿ ನಡೆದ ಸ್ಥಳದಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲೇ ಉಗ್ರರು ಅಡಗಿರುವ ಸುಳಿವು ಸಿಕ್ಕಿದೆ. "ಕುಲ್ಗಾಂನಲ್ಲಿ ಭಯೋತ್ಪಾದಕರು ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ಭದ್ರತಾ ಪಡೆಗಳ ಜಂಟಿ ತಂಡದ ನಡುವೆ ಎನ್‌ಕೌಂಟರ್ ಆರಂಭವಾಗಿದೆ" ಎಂದು ಕಾಶ್ಮೀರ ವಲಯ ಪೊಲೀಸರು ಎಕ್ಸ್ನಲ್ಲಿ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ.
ಕಳೆದ ನವೆಂಬರ್ 11 ರಂದು ಕುಲ್ಗಾಂನ ಭದ್ರತಾ ತಪಾಸಣಾ ಕೇಂದ್ರವೊಂದರಲ್ಲಿದ್ದ ಸಿಆರ್‌ಪಿಎಫ್ ಸಿಬ್ಬಂದಿಯ ಮೇಲೆ ಬೈಕ್‌ನಲ್ಲಿ ಬಂದ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಮೂವರು ಯೋಧರು ಗಾಯಗೊಂಡಿದ್ದರು. ಇದಕ್ಕೆ ಪ್ರತೀಕಾರವಾಗಿ ಕಾರ್ಯಾಚರಣೆಗಿಳಿದಿದ್ದ ಭದ್ರತಾ ಪಡೆಗಳು, ಸೋಮವಾರ ಲಾರು ಬೈಪಾಸ್ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಉಮರ್ ನಿಸಾರ್ ದಾರ್ ಎಂಬ ಉಗ್ರನನ್ನು ಎನ್‌ಕೌಂಟರ್ ಮಾಡಿದ್ದವು.
ಆದರೆ, ಸೋಮವಾರದ ಕಾರ್ಯಾಚರಣೆಯ ವೇಳೆ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಲತೀಫ್ ಭಟ್ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದನು. ಕಾಶ್ಮೀರ ಕಣಿವೆಯಲ್ಲಿ ಸಕ್ರಿಯವಾಗಿರುವ ಏಕೈಕ ಸ್ಥಳೀಯ ಭಯೋತ್ಪಾದಕ ಎನ್ನಲಾದ ಈತನನ್ನು ಸೆರೆಹಿಡಿಯಲು ಸೇನೆ ಕಳೆದೆರಡು ದಿನಗಳಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾರ್ಯಾಚರಣೆ ತೀವ್ರಗೊಳಿಸಿತ್ತು. ಬುಧವಾರ ಮುಂಜಾನೆ ಶೋಧ ನಡೆಸುತ್ತಿದ್ದ ವೇಳೆ ಅಡಗಿದ್ದ ಉಗ್ರರು ಗುಂಡು ಹಾರಿಸಿದ್ದು, ಸೇನೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ.
ಸೋಮವಾರ ಹತನಾದ ಉಮರ್ ನಿಸಾರ್ ದಾರ್ ಹಿನ್ನೆಲೆಯ ಬಗ್ಗೆ ಪೊಲೀಸರು ಮಹತ್ವದ ಮಾಹಿತಿ ಬಹಿರಂಗಪಡಿಸಿದ್ದಾರೆ. ಹಿಂದೆ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ದಾರ್ ನಾಪತ್ತೆಯಾಗಿರುವುದಾಗಿ ಆತನ ಕುಟುಂಬಸ್ಥರು ದೂರು ನೀಡಿದ್ದರು. ಆದರೆ, ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾದ ಅಂಗಸಂಸ್ಥೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ ಸೇರ್ಪಡೆಗೊಂಡ ಕೇವಲ ಒಂದು ವಾರದಲ್ಲೇ ಆತ ಸೇನೆಯ ಗುಂಡಿಗೆ ಬಲಿಯಾಗಿದ್ದಾನೆ. ದಾರ್ ಕಳೆದ ಆರು ತಿಂಗಳಿನಿಂದ ಕಮಾಂಡರ್ ಲತೀಫ್ ಭಟ್‌ಗೆ ಆಶ್ರಯ ಮತ್ತು ಅಗತ್ಯ ನೆರವು ನೀಡುತ್ತಿದ್ದ ಎಂದು ತಿಳಿದುಬಂದಿದೆ.
ನವೆಂಬರ್ 11ರ ಸಿಆರ್‌ಪಿಎಫ್ ಮೇಲಿನ ದಾಳಿಗೂ ಮುನ್ನ, ಅಂದರೆ ನವೆಂಬರ್ 10 ರಂದು ದಾರ್ ಮತ್ತು ಭಟ್ ಇಬ್ಬರೂ ಸೇರಿ ಮಿರ್ ಬಾರ್, ಅಖ್ರಾನ್, ಹಬ್ಲಿಶ್ ಮತ್ತು ಕಿಲಮ್ ಪ್ರದೇಶಗಳಲ್ಲಿ ಸಂಚರಿಸಿ ದಾಳಿಗೆ ಸಂಭಾವ್ಯ ಗುರಿಗಳನ್ನು ಗುರುತಿಸಿದ್ದರು. ಇವರಿಬ್ಬರೂ ಓಡಾಡುತ್ತಿರುವ ಹಾಗೂ ಅಖ್ರಾನ್‌ನಲ್ಲಿ ದಾಳಿ ನಡೆಸಿದ ಬಳಿಕ ಪರಾರಿಯಾಗುತ್ತಿರುವ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ. ಇದೀಗ ಜಂಗಲ್‌ಪೋರಾದಲ್ಲಿ ನಡೆಯುತ್ತಿರುವ ಎನ್‌ಕೌಂಟರ್‌ನಲ್ಲಿ ಲತೀಫ್ ಭಟ್ ಅಂತ್ಯವಾಗಲಿದ್ದಾನೆಯೇ ಎಂಬುದನ್ನು ಕಾದುನೋಡಬೇಕಿದೆ, (ಏಜೆನ್ಸೀಸ್).