ಮುಖವಾಡ ಕಳಚಿದೆ; ಹಣಕ್ಕಾಗಿ ರಾಜ್ಯಸಭಾ ಸ್ಥಾನಗಳನ್ನು ಶ್ರೀಮಂತರಿಗೆ ಮಾರಿದೆ; ಆಪ್ ವಿರುದ್ಧ ಕಾಂಗ್ರೆಸ್ ವಾಗ್ದಾಳಿ | Congress

ಹಿರಿಯ ಕಾಂಗ್ರೆಸ್ ನಾಯಕ ಅಜಯ್ ಮಾಕನ್
ಹಿರಿಯ ಕಾಂಗ್ರೆಸ್ ನಾಯಕ ಅಜಯ್ ಮಾಕನ್
Published on
ನವದೆಹಲಿ: ಏಳು ರಾಜ್ಯಸಭಾ ಸದಸ್ಯರು ಬಿಜೆಪಿ ಸೇರ್ಪಡೆಯಿಂದಾಗಿ ಆಪ್​ನ ಮುಖವಾಡ ಕಳಚಿದ್ದು, ಅದು ಬಿಜೆಪಿ ಬಿ ಟೀಂ ಆಗಿ ಕಾರ್ಯನಿರ್ವಹಿಸಿ, ರಾಜ್ಯಸಭಾ ಸ್ಥಾನಗಳನ್ನು ಶ್ರೀಮಂತರಿಗೆ ಮಾರಿದೆ ಎಂದು ಸೋಮವಾರ(ಏ. 27) ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಈ ಕುರಿತು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಹಿರಿಯ ಕಾಂಗ್ರೆಸ್ ನಾಯಕ ಅಜಯ್ ಮಾಕನ್, ಎಪಿ ಹಣಕ್ಕಾಗಿ ರಾಜ್ಯಸಭೆಗೆ ಶ್ರೀಮಂತ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡುತ್ತಿದೆ. ಆಮ್​ ಆದ್ಮಿ ಪಕ್ಷವೆಂದು ಕರೆದುಕೊಳ್ಳುವ ಬದಲು ಕೋಟ್ಯಾಧಿಪತಿಗಳ ಪಕ್ಷ ಎಂದು ಮರುನಾಮಕರಣ ಮಾಡಿಕೊಳ್ಳಲಿ ಎಂದು ಕಿಡಿಕಾರಿದ್ದಾರೆ.
ಎಎಪಿ ತೊರೆದು ಬಿಜೆಪಿ ಸೇರಿದ ಏಳು ಸಂಸದರ ಸರಾಸರಿ ನಿವ್ವಳ ಮೌಲ್ಯ 818 ಕೋಟಿ ರೂ.ಗಳಿಗಿಂತ ಹೆಚ್ಚಾಗಿದೆ ಎಂದು ಆರೋಪಿಸಿದ ಅವರು, ಪಂಜಾಬ್ ಮತ್ತು ಗುಜರಾತ್‌ ರಾಜ್ಯಗಳಲ್ಲಿ ಕಾಂಗ್ರೆಸ್ ಅನ್ನು ಎದುರಿಸಲು ಎಎಪಿ ಬಿಜೆಪಿಯ ಪ್ರಾಕ್ಸಿಯಾಗಿ ಕಾರ್ಯನಿರ್ವಹಿಸಿದೆ. ಈಗ ಅದರ ಮುಖವಾಡ ಸಂಪೂರ್ಣವಾಗಿ ಕಳಚಿದೆ. ಆಪ್ ನಾಯಕರು ದೇಶದ್ರೋಹಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕೇವಲ 6% ಮತಗಳನ್ನು ಪಡೆದಿತ್ತು. ಆದರೆ ಈಗ ರಾಜ್ಯದಿಂದ ಆರು ರಾಜ್ಯಸಭಾ ಸದಸ್ಯರಾಗಿದ್ದಾರೆ. ಪ್ರತ್ಯೇಕತಾವಾದಿಗಳಿಂದ ಆಪ್ ಹಣವನ್ನು ಪಡೆದಿದೆ. ದೇಶವನ್ನು ವಿಭಜಿಸಲು ಮತ್ತು ಪಂಜಾಬ್ ಅನ್ನು ಪ್ರತ್ಯೇಕಿಸಲು ಬಯಸುವ ಪ್ರತ್ಯೇಕತಾವಾದಿಗಳು ಅಲ್ಲಿ ತಲೆ ಎತ್ತಿದ್ದಾರೆ ಎಂದು ಹೇಳಿದ್ದಾರೆ.
2014ರಲ್ಲಿ ಎಎಪಿಯ 40 ದಿನಗಳ ಸರ್ಕಾರವನ್ನು ಬೆಂಬಲಿಸುವುದು ಕಾಂಗ್ರೆಸ್ ಪಕ್ಷದ ಕಡೆಯಿಂದ ಆದ ದೊಡ್ಡ ತಪ್ಪು ಎಂದು ನಾನು ಪುನರುಚ್ಚರಿಸಲು ಬಯಸುತ್ತೇನೆ. ಆ ಒಂದು ಸಣ್ಣ ಬೆಂಬಲದಿಂದಾಗಿ ಎಎಪಿ ದೆಹಲಿಯಲ್ಲಿ ಉಳಿಯಲು ಸಾಧ್ಯವಾಯಿತು ಎಂದಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net