ಜಿಲ್ಲಾ ಉಪಾಧ್ಯಕ್ಷೆ ಮಾಡ್ತೀನಿ ನನ್ನ ಜೊತೆ ಸಹಕರಿಸು! ಬಿಜೆಪಿ ಜಿಲ್ಲಾಧ್ಯಕ್ಷನ ವಿರುದ್ಧ ಮಹಿಳೆ ಗಂಭೀರ ಆರೋಪ | Sexual harrassment

ಮಹೋಬಾ ಜಿಲ್ಲಾಧ್ಯಕ್ಷ ಲಾಲ್ ಕುಶ್ವಾಹ
ಮಹೋಬಾ ಜಿಲ್ಲಾಧ್ಯಕ್ಷ ಲಾಲ್ ಕುಶ್ವಾಹ
Published on
ಲಖನೌ: ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷನ ವಿರುದ್ಧ ಅದೇ ಪಕ್ಷದ ಮಹಿಳಾ ಕಾರ್ಯಕರ್ತೆಯೊಬ್ಬರು, ನಿನ್ನ ಪಕ್ಷದ ಜಿಲ್ಲಾ ಉಪಾಧ್ಯಕ್ಷೆಯನ್ನಾಗಿ ಮಾಡಿ ಬಡ್ತಿ ನೀಡುತ್ತೇನೆ, ನನ್ನ ಜೊತೆ ಮಲಗು ಎಂದು ಲೈಂಗಿಕ ಕಿರುಕುಳ(Sexual harrassment) ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದು, ರಾಜಕೀಯ ಬಿರುಗಾಳಿ ಎಬ್ಬಿಸಿದೆ.
45 ವರ್ಷದ ಬಿಜೆಪಿ ಕಾರ್ಯಕರ್ತೆ ಎಂದು ಹೇಳಿಕೊಂಡಿರುವ ಮಹಿಳೆಯೊಬ್ಬರು ಫೇಸ್​​ಬುಕ್​ ಲೈವ್​ನಲ್ಲಿ, ಮಹೋಬಾ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷ ಲಾಲ್ ಕುಶ್ವಾಹ ವಿರುದ್ಧ ಹುದ್ದೆಗೆ ಪ್ರತಿಯಾಗಿ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಮಹಿಳೆ ಪ್ರಕಾರ, ಬಿಜೆಪಿಯಲ್ಲಿ ಕಳೆದು ಒಂದು ದಶಕದಿಂದ ಕೆಲಸ ಮಾಡ್ತಿದ್ದು, ಜಿಲ್ಲಾ ಘಟಕ ಪುನರ್​ರಚನೆ ಉನ್ನತ ಹುದ್ದೆ ನೀಡುವಂತೆ ಲಾಲ್ ಕುಶ್ವಾಹ ಅವರನ್ನು ಸಂಪರ್ಕಿಸಿದಾಗ, ಆ ಹುದ್ದೆಗೆ ಪ್ರತಿಯಾಗಿ ನೀವು ಏನಾದರೂ ನೀಡಬೇಕು. ಅನುಮಾನ ಬರದಂತೆ ನನ್ನೊಂದಿಗೆ ಒಂದು ರಾತ್ರಿ ಕಳೆಯಲು ಲಖನೌ ಅಥವಾ ದೆಹಲಿ ಬರುವಂತೆ ಒತ್ತಾಯಿಸಿದ್ದಾರೆ ಎಂದು ಹೇಳಿದ್ದಾರೆ.
ಜಿಲ್ಲಾ ಉಪಾಧ್ಯಕ್ಷ ಪಂಕಜ್ ತಿವಾರಿ ಕೂಡ, ಜಿಲ್ಲಾಧ್ಯಕ್ಷರ ಪ್ರಸ್ತಾವನೆಯನ್ನು ಒಪ್ಪಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಅದು ಪಕ್ಷದಲ್ಲಿ ಇನ್ನೂ ಉನ್ನತ ಸ್ಥಾನಕ್ಕೆ ಬೆಳೆಯಲು ಸಹಕಾರಿಯಾಗುತ್ತೆ ಎಂದಿದ್ದಾರೆ. ಅದೇ ರೀತಿ ಪಕ್ಷದ ಮತ್ತೊಬ್ಬ ಪದಾಧಿಕಾರಿ ಜೈಪಾಲ್ ಅವರು ತಡರಾತ್ರಿ ಕರೆ ಮಾಡಿ ಒಪ್ಪಿಗೆ ನೀಡುವಂತೆ ಒತ್ತಡ ಹೇರಿದ್ದರು. 
ನಿರಾಕರಿಸಿದ್ರೆ ನಿಮ್ಮ ಪತಿಯನ್ನು ಅತ್ಯಾಚಾರ ಕೇಸ್​ನಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿಗೆ ಲಿಖಿತ ದೂರು ಸಲ್ಲಿಸುವುದಾಗಿ ಹೇಳಿದ್ದು, ಉನ್ನತ ಮಟ್ಟದ ತನಿಖೆ ಮತ್ತು ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
ಇನ್ನೂ ಮಹಿಳೆಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಲಾಲ್ ಕುಶ್ವಾಹ, ಆರೋಪಗಳನ್ನು ಆಧಾರರಹಿತ ಎಂದು ತಳ್ಳಿ ಹಾಕಿರುವ ಅವರು, ತಮ್ಮ ರಾಜಕೀಯ ಇಮೇಜ್‌ಗೆ ಕಳಂಕ ತರುವ ಪಿತೂರಿಯ ಭಾಗವಾಗಿದೆ. ನಿಷ್ಪಕ್ಷಪಾತ ತನಿಖೆ ನಡೆದರೆ ಸತ್ಯ ಹೊರಬರುತ್ತದೆ. ಇದೆಲ್ಲಾ ಕಟ್ಟು ಕತೆ ಎಂದು ಹೇಳಿದ್ದಾರೆ.

ಬಿಜೆಪಿ ವಿರುದ್ಧ ಕಾಂಗ್ರೆಸ್ ಟೀಕೆ

ಮಹಿಳೆಯ ಆರೋಪದ ವಿಡಿಯೋವನ್ನು ಎಕ್ಸ್​ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಆಡಳಿತ ಪಕ್ಷವೂ ಮಹಿಳಾ ಗೌರವವನ್ನು ಕಾಪಾಡುವುದಾಗಿ ಹೇಳುತ್ತದೆ. ಆದರೆ ಇಂತಹ ಘಟನೆ ಅದರ ಮಹಿಳಾ ವಿರೋಧಿ ಮನಸ್ಥಿತಿಯನ್ನು ಬಹಿರಂಗಪಡಿಸುತ್ತದೆ ಎಂದು ಕಿಡಿಕಾರಿದೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net