ಕಾಶ್ಮೀರದ ಪೋಸ್ಟ್ ತಂದ ಆಪತ್ತು: ಶಶಿ ತರೂರ್ ವಿರುದ್ಧ ಮತ್ತೆ ತಿರುಗಿಬಿದ್ದ ಕಾಂಗ್ರೆಸ್ ನಾಯಕರು! Shashi Tharoor

ಕಾಶ್ಮೀರದ ಪೋಸ್ಟ್ ತಂದ ಆಪತ್ತು: ಶಶಿ ತರೂರ್ ವಿರುದ್ಧ ಮತ್ತೆ ತಿರುಗಿಬಿದ್ದ ಕಾಂಗ್ರೆಸ್ ನಾಯಕರು!
ಕಾಶ್ಮೀರದ ಪೋಸ್ಟ್ ತಂದ ಆಪತ್ತು: ಶಶಿ ತರೂರ್ ವಿರುದ್ಧ ಮತ್ತೆ ತಿರುಗಿಬಿದ್ದ ಕಾಂಗ್ರೆಸ್ ನಾಯಕರು!
Published on
ಶ್ರೀನಗರ: ಕಾಂಗ್ರೆಸ್​ನ ಹಿರಿಯ ನಾಯಕ ಹಾಗೂ ತಿರುವನಂತಪುರಂ ಲೋಕಸಭಾ ಸಂಸದ ಶಶಿ ತರೂರ್( Shashi Tharoor) ಅವರು ಮತ್ತೊಮ್ಮೆ ಸ್ವಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಸದ್ಯದ ಪರಿಸ್ಥಿತಿ ತಿಳಿಯಾಗುತ್ತಿದ್ದು, ಸಹಜ ಸ್ಥಿತಿಯತ್ತ ಮರಳುತ್ತಿದೆ ಎಂದು ತರೂರ್ ನೀಡಿದ ಹೇಳಿಕೆ ಕಾಂಗ್ರೆಸ್ ಪಾಳಯದಲ್ಲಿ ಭಾರಿ ಅಸಮಾಧಾನ ಕಾರಣವಾಗಿದೆ.
ಕಾಶ್ಮೀರದ ಪರಿಸ್ಥಿತಿಯ ಕುರಿತು ಎಲ್​ಜಿ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ ನಂತರ ತರೂರ್ ತಮ್ಮ 'Xನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದರು. ಶ್ರೀನಗರದ ಲೋಕ ಭವನದಲ್ಲಿ ಇಂದು ಗೌರವಾನ್ವಿತ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನು ಭೇಟಿಯಾಗುವ ಸೌಭಾಗ್ಯ ಸಿಕ್ಕಿತು. ಕಾಶ್ಮೀರದ ಸದ್ಯದ ಪರಿಸ್ಥಿತಿ ಮತ್ತು ಅಲ್ಲಿ ಸಹಜ ಸ್ಥಿತಿ ಮರಳುತ್ತಿರುವುದರ ಸಕಾರಾತ್ಮಕ ಪ್ರಗತಿಯ ಬಗ್ಗೆ ನಾವು ಚರ್ಚಿಸಿದೆವು ಎಂದು ಬರೆದುಕೊಂಡಿದ್ದರು.

ತರೂರ್ ಪೋಸ್ಟ್‌ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿರಿಯ ನಾಯಕರು

ಶಶಿ ತರೂರ್ ಅವರ ಈ ಪೋಸ್ಟ್‌ಗೆ ಜಮ್ಮು-ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿ (JKPCC) ಮುಖ್ಯಸ್ಥ ರವೀಂದರ್ ಶರ್ಮಾ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ತರೂರ್ ಅವರಿಗೆ ತಿರುಗೇಟು ನೀಡಿರುವ ಶರ್ಮಾ, ಕೇವಲ ಅಧಿಕಾರಿಗಳನ್ನು ಭೇಟಿಯಾಗುವ ಬದಲು ಕಾಶ್ಮೀರದ ಸ್ಥಳೀಯ ಜನರನ್ನು ಭೇಟಿಯಾಗಿದ್ದರೆ ಅಲ್ಲಿನ ಅಸಲಿ ಗ್ರೌಂಡ್ ರಿಯಾಲಿಟಿ ನಿಮಗೆ ಅರ್ಥವಾಗುತ್ತಿತ್ತು. ಕನಿಷ್ಠ ಪಕ್ಷ 7 ವರ್ಷಗಳ ಹಿಂದೆ ನಮ್ಮಿಂದ ಕಸಿದುಕೊಳ್ಳಲಾದ ರಾಜ್ಯದ ಸ್ಥಾನಮಾನಕ್ಕಾಗಿ ಹೋರಾಡುತ್ತಿರುವ ಸ್ವಪಕ್ಷದ ನಾಯಕರನ್ನು ಭೇಟಿಯಾಗಲು ಸಹ ನಿಮಗೆ ಸಮಯ ಸಿಗಲಿಲ್ಲವೇ ಎಂದು ಬಹಿರಂಗವಾಗಿ ಪ್ರಶ್ನಿಸಿದ್ದಾರೆ.
ಅಲ್ಲದೆ, ಅಧಿಕಾರಿಗಳ ಸಕಾರಾತ್ಮಕ ನಡೆಯನ್ನು ನಾನು ಸ್ವಾಗತಿಸುತ್ತೇನೆ. ಇನ್ನೂ ಹಲವು ಸವಾಲುಗಳು ಬಾಕಿ ಇವೆ ನಿಜ, ಆದರೆ ಈ ಭೇಟಿಯ ನಂತರ ನನಗೆ ಕಾಶ್ಮೀರದ ಭವಿಷ್ಯದ ಬಗ್ಗೆ ಭರವಸೆ ಮೂಡಿದೆ ಎಂದು ತರೂರ್ ಬರೆದ ಸಾಲುಗಳು ಕಾಂಗ್ರೆಸ್‌ನ ಅಧಿಕೃತ ನಿಲುವಿಗೆ ವಿರುದ್ಧವಾಗಿದೆ ಎಂದು ಸ್ಥಳೀಯ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ.

ಪ್ರಧಾನಿ ಮೋದಿ ಶ್ಲಾಘನೆ ವದಂತಿ: ಶನಿವಾರವಷ್ಟೇ ಎದ್ದಿತ್ತು ಭಿನ್ನಮತದ ಬಿರುಗಾಳಿ!

ಶಶಿ ತರೂರ್ ಅವರು ಸ್ವಪಕ್ಷೀಯರಿಂದ ಟೀಕೆಗೆ ಒಳಗಾಗುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಶನಿವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದಾರೆ ಎಂಬ ಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್ ತರೂರ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಅಮೆರಿಕದ ನೌಕಾ ದಿಗ್ಬಂಧನದ ನಡುವೆ ಮೂವರು ಭಾರತೀಯ ನಾವಿಕರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ, ಪ್ರಧಾನಿ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಸಾರ್ವಜನಿಕವಾಗಿ ಹಾಗೂ ಖಾಸಗಿ ಸಭೆಗಳಲ್ಲಿ ಭಾರತದ ನಿಲುವನ್ನು ಅತ್ಯಂತ ಸ್ಪಷ್ಟವಾಗಿ ಮತ್ತು ಗಟ್ಟಿಯಾಗಿ ಮಂಡಿಸಿದ್ದಾರೆ ಎಂದು ತರೂರ್ ಹೇಳಿಕೆ ನೀಡಿದ್ದರು ಎನ್ನಲಾಗಿದೆ.
ಇದು ಸಾಮಾನ್ಯ ರಾಜಕೀಯ ಹೇಳಿಕೆಯನ್ನು ಮೀರಿ ಪ್ರಧಾನಿ ಮೋದಿಯವರ ಅತಿಯಾದ ಹೊಗಳಿಕೆಯಂತೆ ಕಾಣಿಸುತ್ತಿದೆ ಎಂದು ಕಾಂಗ್ರೆಸ್ ನಾಯಕರು ಅಸಮಾಧಾನ ಹೊರಹಾಕಿದ್ದರು.

ಟ್ವಿಸ್ಟ್ ಬೇಡ, ನನ್ನ ಗಮನವಿದ್ದದ್ದು ನಾಗರಿಕರ ರಕ್ಷಣೆಯ ಮೇಲೆ: ತರೂರ್ ಸ್ಪಷ್ಟನೆ

ಸ್ವಪಕ್ಷದವರ ಈ ಟೀಕೆಗಳಿಗೆ ತೀವ್ರ ಆಶ್ಚರ್ಯ ವ್ಯಕ್ತಪಡಿಸಿರುವ ತರೂರ್, ತಮ್ಮ ಹೇಳಿಕೆಗೆ ರಾಜಕೀಯ ಬಣ್ಣ ಬಳಿಯುತ್ತಿರುವುದು ದುರದೃಷ್ಟಕರ ಎಂದಿದ್ದಾರೆ. ದೇಶದ ನಾಗರಿಕರು ಹಾಗೂ ನಾವಿಕರ ಸುರಕ್ಷತೆಯ ಬಗ್ಗೆ ನಾನು ಮಾತನಾಡಿದ್ದೇನೆಯೇ ಹೊರತು ಇದರಲ್ಲಿ ಯಾವುದೇ ರಾಜಕೀಯ ಪ್ರಶಂಸೆ ಇರಲಿಲ್ಲ. ಮೂವರು ಭಾರತೀಯರು ಪ್ರಾಣ ಕಳೆದುಕೊಂಡಿದ್ದಾರೆ. ನಮ್ಮ ನಾಗರಿಕರ ರಕ್ಷಣೆ ಮತ್ತು ಸೈನಿಕ ಕಾರ್ಯಾಚರಣೆಗಳಿಗೆ ನಾಗರಿಕ ನಾವಿಕರು ಬಲಿಯಾಗಬಾರದು ಎನ್ನುವುದಷ್ಟೇ ನನ್ನ ಕಳಕಳಿಯಾಗಿತ್ತು. ಇದನ್ನು ಪಕ್ಷಪಾತದ ರಾಜಕೀಯ ವಿವಾದವನ್ನಾಗಿ ಮಾಡುತ್ತಿರುವುದು ಆಶ್ಚರ್ಯ ತಂದಿದೆ ಎಂದು ತರೂರ್ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ಸದ್ಯ ಜಮ್ಮು-ಕಾಶ್ಮೀರ ಭೇಟಿಯ ಬೆನ್ನಲ್ಲೇ ಕಾಂಗ್ರೆಸ್ ಆಂತರಿಕ ವಲಯದಲ್ಲಿ ಶಶಿ ತರೂರ್ ವಿರುದ್ಧ ಅಸಮಾಧಾನದ ಹೊಗೆ ದಟ್ಟವಾಗುತ್ತಿದ್ದು, ಈ ಹೊಸ ವಿವಾದ ಮುಂಬರುವ ದಿನಗಳಲ್ಲಿ ಪಕ್ಷದೊಳಗೆ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net