ಇಂದೋರ್: ಭಾನುವಾರ (ಜೂ.21) ದೇಶದಾದ್ಯಂತ ನೀಟ್ ಯುಜಿ ಮರು ಪರೀಕ್ಷೆ ನಡೆದಿದ್ದು, ಈ ಬಾರಿ ಯಾವುದೇ ರೀತಿಯ ಪರೀಕ್ಷಾ ಅಕ್ರಮ ನಡೆಯದ ಹಾಗೆ ನೋಡಿಕೊಳ್ಳಲಾಗಿದೆ ಎಂದು ಎನ್ಟಿಎ ಹೇಳಿದೆ.
ಆದರೆ, ಕೃತಕ ಬುದ್ದಿಮತ್ತೆಯನ್ನು ಬಳಸಿಕೊಂಡು ಇಂದೋರ್‌ನ ಕಾನೂನು ವಿದ್ಯಾರ್ಥಿಯೊಬ್ಬ ನಕಲಿ ನೀಟ್ ಪ್ರಶ್ನೆ ಪತ್ರಿಕೆ (Fake NEET Paper) ಗಳನ್ನು 50-100 ರೂಪಾಯಿಗಳಿಗೆ ಮಾರಾಟ ಮಾಡಿದ ಘಟನೆ ವರದಿಯಾಗಿದೆ.
ನೀಟ್ ಪರೀಕ್ಷೆಗೆ ಮುನ್ನ ಪ್ರಶ್ನೆ ಪತ್ರಿಕೆಗಳನ್ನು ನೀಡುವುದಾಗಿ ನಂಬಿಸಿ, ಇನ್ಸ್ಟಾಗ್ರಾಮ್ ಖಾತೆಯೊಂದರಲ್ಲಿ ನಕಲಿ ಪ್ರಶ್ನೆ ಪತ್ರಿಕೆಗಳನ್ನು ಸೃಷ್ಟಿಸಿ, 50-100 ರೂಪಾಯಿಗಳಿಗೆ ಮಾರಾಟ ಮಾಡಿದ ಆರೋಪದಲ್ಲಿ ಅಕ್ಷಯ್ ಮಾಳವೀಯಾ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ವ್ಯಕ್ತಿಯು ಪ್ರಥಮ ವರ್ಷದ ಕಾನೂನು ವಿದ್ಯಾರ್ಥಿಯಾಗಿದ್ದು, ನೀಟ್ ಪರೀಕ್ಷೆಗೆ ಮೊದಲೇ ಪ್ರಶ್ನೆ ಪತ್ರಿಕೆ ಒದಗಿಸುವ ಭರವಸೆ ನೀಡಿದ್ದನು. ನಂತರ ಇತನನ್ನು ಟ್ರ್ಯಾಕ್ ಮಾಡಿದ ಕೋಟಾ ಪೊಲೀಸರು, ಎಸ್ಐಟಿ ತಂಡಕ್ಕೆ ಇವನ ಮಾಹಿತಿ ನೀಡಿದ್ದಾರೆ.
ಚಾಟ್ ಜಿಪಿಟಿ ಬಳಕೆ!
ನಂತರ ಇವನನ್ನು ಬಂಧಿಸಿದ ಎಸ್ಐಟಿ ತಂಡಕ್ಕೆ, ತಾನು ಚಾಟ್ ಜಿಪಿಟಿ ಎಂಬ ಕೃತಕ ಬುದ್ಧಿಮತ್ತೆ ಬಳಸಿಕೊಂಡು, ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆ ಹಾಗೂ ಮಾಡೆಲ್ ಪೇಪರ್ಗಳ ಪ್ರಶ್ನೆಗಳನ್ನು ಮಿಶ್ರಣ ಮಾಡಿ ಒಂದು ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಿದ್ದೆ.
ಅದನ್ನೇ ಈ ವರ್ಷದ ನೀಟ್ ಪೇಪರ್ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಮಾರಾಟ ಮಾಡಿದ್ದೆ. ಸುಮಾರು 20-22 ವಿದ್ಯಾರ್ಥಿಗಳು ನನಗೆ ಹಣವನ್ನು ವರ್ಗಾಯಿಸಿದ್ದರು ಎಂದು ಹೇಳಿದ್ದಾನೆ.
ಸದ್ಯ ಈ ಅಕ್ಷಯ್ ಮಾಳವೀಯಾನ ಮೇಲೆ ಪರೀಕ್ಷಾ ಅಕ್ರಮ ಹಾಗೂ ವಂಚನೆ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸುತ್ತಿದ್ದೆವೆಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ, (ಏಜನ್ಸೀಸ್).