ಬೆಟ್ಟಿಂಗ್​ನಿಂದ ಸಾಲ: ಚಿನ್ನಾಭರಣ ದೋಚಿ ಮಹಿಳೆಯನ್ನು ಬಾವಿಗೆ ತಳ್ಳಿದ ಕಿರಾತಕ, 21 ಗಂಟೆ ಹೋರಾಡಿ ಬದುಕಿಬಂದ ಗಟ್ಟಿಗಿತ್ತಿ! Survive

ಬೆಟ್ಟಿಂಗ್​ನಿಂದ ಸಾಲ: ಚಿನ್ನಾಭರಣ ದೋಚಿ ಮಹಿಳೆಯನ್ನು ಬಾವಿಗೆ ತಳ್ಳಿದ ಕಿರಾತಕ, 21 ಗಂಟೆ ಹೋರಾಡಿ ಬದುಕಿಬಂದ ಗಟ್ಟಿಗಿತ್ತಿ! Survive
ಬೆಟ್ಟಿಂಗ್​ನಿಂದ ಸಾಲ: ಚಿನ್ನಾಭರಣ ದೋಚಿ ಮಹಿಳೆಯನ್ನು ಬಾವಿಗೆ ತಳ್ಳಿದ ಕಿರಾತಕ, 21 ಗಂಟೆ ಹೋರಾಡಿ ಬದುಕಿಬಂದ ಗಟ್ಟಿಗಿತ್ತಿ! Survive
Published on

ಪ್ರಮುಖ ಮುಖ್ಯಾಂಶಗಳು

  • ಆನ್‌ಲೈನ್ ಜೂಜುಕೋರನ ಕೃತ್ಯಕ್ಕೆ ಸಿಕ್ಕಿಬಿದ್ದ ಮಹಿಳೆ ಪವಾಡಸದೃಶ ಪಾರು
  • ಆನ್‌ಲೈನ್ ಬೆಟ್ಟಿಂಗ್ ಸಾಲ ತೀರಿಸಲು ಕೃಷಿ ಬಾವಿಗೆ ಮಹಿಳೆಯನ್ನು ತಳ್ಳಿದ 21ರ ವಿದ್ಯಾರ್ಥಿ
  • ಒಂದೇ ಒಂದು 'ಡಯಲ್-100' ಕರೆಗೆ ನಡುಗಿದ ಕಿಲ್ಲರ್ ಸ್ಟೂಡೆಂಟ್
  • ಆನ್‌ಲೈನ್ ಜೂಜಿನ ಸಾಲಕ್ಕಾಗಿ 55 ವರ್ಷದ ಮಹಿಳೆಯನ್ನು ಬಾವಿಗೆ ತಳ್ಳಿ ಕೊಲೆಗೆ ಯತ್ನಿಸಿದ ವಿದ್ಯಾರ್ಥಿಯ ಬಂಧನ
ಹೈದರಾಬಾದ್​ : ತೆಲಂಗಾಣದ ಕರೀಮನಗರ ಜಿಲ್ಲೆಯ ನಿರ್ಜನ ಪ್ರದೇಶದ ಕೃಷಿ ಬಾವಿಯೊಂದರಲ್ಲಿ 55 ವರ್ಷದ ಮಹಿಳೆಯೊಬ್ಬರು ಸುಮಾರು 21 ಗಂಟೆಗಳ ಕಾಲ ಬದುಕುಳಿಯಲು ( Survive ) ತೀವ್ರ ಹೋರಾಟ ನಡೆಸಿದ ಪ್ರಸಂಗ ಜರುಗಿದೆ. ಮಹಿಳೆಯ ಚಿನ್ನಾಭರಣ ದೋಚಿದ ಆರೋಪಿಯು, ಆಕೆ ಬದುಕಿ ಉಳಿದರೆ ತನ್ನನ್ನು ಗುರುತಿಸಬಹುದೆಂಬ ಭಯದಿಂದ ಬಾವಿಗೆ ತಳ್ಳಿ ಕೊಲ್ಲಲು ಯತ್ನಿಸಿದ್ದಾನೆ. ಪ್ರಾಣಾಪಾಯದಿಂದ ಪಾರಾದ ಆಕೆ ಸಾವು-ಬದುಕಿನ ನಡುವೆ ಹೋರಾಡಿ ಅಂತಿಮವಾಗಿ ಬದುಕಿ ಬಂದಿದ್ದಾಳೆ.
ಆನ್‌ಲೈನ್ ಜೂಜು ಮತ್ತು ಬೆಟ್ಟಿಂಗ್ ಆಡಿ ಸುಮಾರು 4 ಲಕ್ಷ ರೂಪಾಯಿಗಳನ್ನು ಕಳೆದುಕೊಂಡು ಸಾಲದ ಸುಳಿಗೆ ಸಿಲುಕಿದ್ದ 21 ವರ್ಷದ ವಿದ್ಯಾರ್ಥಿಯೊಬ್ಬ, ತನ್ನ ಸಾಲ ತೀರಿಸಲು ಈ ದರೋಡೆಯನ್ನು ಯೋಜಿಸಿದ್ದಾಗಿ ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಸಾಲದ ಹೊರೆಯಿಂದಾಗಿ ಮಹಿಳೆಯ ಚಿನ್ನಾಭರಣ ದೋಚಿದ ಆರೋಪಿ, ಆಕೆ ಬದುಕುಳಿದರೆ ತನ್ನನ್ನು ಗುರುತಿಸಬಹುದೆಂಬ ಭಯದಿಂದ ಬಾವಿಗೆ ತಳ್ಳಿದ್ದನು. ಆದರೆ, ಸಾವು-ಬದುಕಿನ ನಡುವೆ ಹೋರಾಡಿ ಆಕೆ ಸುರಕ್ಷಿತವಾಗಿ ಪಾರಾಗಿದ್ದಾಳೆ.
ಅಷ್ಟಕ್ಕೂ ನಡೆದಿದ್ದೇನು ಅಂದರೆ, ಜುಲೈ 1 ರಂದು ದಿನಗೂಲಿ ಕಾರ್ಮಿಕಳಾದ 55 ವರ್ಷದ ತಂಗರಾಳ ಲಕ್ಷ್ಮಿ ಅವರು ಮನೆಗೆ ಬಾರದಿದ್ದಾಗ, ಆರಂಭದಲ್ಲಿ ಈ ಪ್ರಕರಣವು ನಾಪತ್ತೆ ದೂರು ಆಗಿ ದಾಖಲಾಗಿತ್ತು. ಈ ಬಗ್ಗೆ ಕರೀಮ್​ನಗರ ಪೊಲೀಸ್ ಕಮಿಷನರ್ ಗೌಸ್ ಆಲಂ ಮಾತನಾಡಿ, ಮೊದಲ ರಾತ್ರಿ ನಮಗೆ ಕೇವಲ ಮಹಿಳೆ ನಾಪತ್ತೆಯಾಗಿರುವ ವರದಿ ಬಂದಿತ್ತು ಮತ್ತು ಆಕೆಯ ಮಗ ನೀಡಿದ ದೂರಿನ ಮೇರೆಗೆ ಸಾಮಾನ್ಯ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದೆವು, ಆಗ ಯಾರ ಮೇಲೂ ಅನುಮಾನವಿರಲಿಲ್ಲ ಎಂದು ತಿಳಿಸಿದ್ದಾರೆ. ಆದರೆ, ಮರುದಿನ ಬೆಳಗ್ಗೆ ನುಸ್ತುಲಾಪುರ ಗ್ರಾಮದ ಹೊರವಲಯದ ಆಳವಾದ ಕೃಷಿ ಬಾವಿಯಿಂದ ಗ್ರಾಮಸ್ಥರು ಲಕ್ಷ್ಮಿ ಅವರನ್ನು ರಕ್ಷಿಸಿದ ಬಳಿಕ, ಪೊಲೀಸರಿಗೆ 'ಡಯಲ್-100' ಮೂಲಕ ಕರೆ ಬಂದಾಗ ಈ ತನಿಖೆಯು ನಾಟಕೀಯ ತಿರುವು ಪಡೆದುಕೊಂಡಿತು.
ಬಾವಿಯಿಂದ ರಕ್ಷಿಸಲ್ಪಟ್ಟ ಬಳಿಕ ಲಕ್ಷ್ಮಿ ಅವರು ತನಿಖಾಧಿಕಾರಿಗಳಿಗೆ ನೀಡಿದ ಹೇಳಿಕೆಯಲ್ಲಿ, ಅಪರಿಚಿತ ವ್ಯಕ್ತಿಯೊಬ್ಬ ತನ್ನ ತೋಟದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ತನ್ನನ್ನು ಕರೆದೊಯ್ದಿದ್ದಾಗಿ ತಿಳಿಸಿದ್ದಾರೆ. ಈ ಕುರಿತು ಪೊಲೀಸ್ ಕಮಿಷನರ್ ಗೌಸ್ ಆಲಂ ವಿವರಿಸುತ್ತಾ, "ಆರೋಪಿಯು ಮೊದಲು ರ‍್ಯಾಪಿಡೋ ಬೈಕ್ ಬುಕ್ ಮಾಡಿ ಆಕೆಯನ್ನು ತಿಮ್ಮಾಪುರ ಗ್ರಾಮದ ಕಡೆಗೆ ಕರೆದೊಯ್ದಿದ್ದ, ಆದರೆ ಅಲ್ಲಿ ಸಿಸಿಟಿವಿ ಕ್ಯಾಮೆರಾಗಳು ಮತ್ತು ಸಾರ್ವಜನಿಕರ ಓಡಾಟ ಹೆಚ್ಚಿದ್ದರಿಂದ ನಿರ್ಜನ ಪ್ರದೇಶ ಸಿಗದೆ, ನಂತರ ತನ್ನದೇ ಮೋಟಾರ್ ಸೈಕಲ್‌ಗೆ ಆಕೆಯನ್ನು ಹತ್ತಿಸಿಕೊಂಡು ನುಸ್ತುಲಾಪುರ ಗ್ರಾಮದ ಸಮೀಪದ ಕಾಡು ಹಾದಿಗೆ ಕರೆದೊಯ್ದಿದ್ದನು ಎಂದಿದ್ದಾರೆ. ಆ ಏಕಾಂತ ಪ್ರದೇಶವನ್ನು ತಲುಪಿದ ತಕ್ಷಣ ಆರೋಪಿಯು ಲಕ್ಷ್ಮಿ ಅವರಿಗೆ ಬೆದರಿಕೆ ಹಾಕಿ, ಅವರ ಬಳಿಯಿದ್ದ ಸುಮಾರು 5 ಗ್ರಾಂ ಚಿನ್ನದ ಆಭರಣಗಳು, 20 ಗ್ರಾಮ್ ಬೆಳ್ಳಿ ಕಾಲುಗೆಜ್ಜೆ ಮತ್ತು ನಗದನ್ನು ದೋಚಿದ್ದಲ್ಲದೆ, ತನ್ನನ್ನು ಯಾರೂ ಗುರುತಿಸಬಾರದು ಎಂಬ ಸ್ಪಷ್ಟ ಉದ್ದೇಶದಿಂದ ಸಾಕ್ಷ್ಯವನ್ನು ನಾಶಪಡಿಸಲು ಆಕೆಯನ್ನು ಬಾವಿಗೆ ತಳ್ಳಿ ಕೊಲೆಗೆ ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ಲಕ್ಷ್ಮಿ ಅವರನ್ನು ಬಾವಿಗೆ ತಳ್ಳಿದಾಗ, ಆಕೆ ಅಲ್ಲಿನ ಹಗ್ಗವನ್ನು ಹಿಡಿದು ನೀರಿನಲ್ಲಿ ಮುಳುಗದಂತೆ ತೇಲುತ್ತಿರುವುದನ್ನು ಗಮನಿಸಿ, ಆಕೆಯನ್ನು ಕೊಲ್ಲುವ ಉದ್ದೇಶದಿಂದಲೇ ಆ ಹಗ್ಗವನ್ನು ಕತ್ತರಿಸಿದ್ದನು ಎಂದು ಕಮಿಷನರ್ ತಿಳಿಸಿದ್ದಾರೆ. ಆದಾಗ್ಯೂ ಈಜಲು ಬರುತ್ತಿದ್ದ ಲಕ್ಷ್ಮಿ ಅವರು ಧೈರ್ಯ ಬಿಡದೆ, ಬಾವಿಯ ಮೋಟಾರ್ ಪೈಪ್‌ಲೈನ್‌ಗೆ ಕಟ್ಟಲಾಗಿದ್ದ ಮತ್ತೊಂದು ಕೇಬಲ್ ಅನ್ನು ಹಿಡಿದುಕೊಂಡು ಇಡೀ ರಾತ್ರಿ ಸಾವು-ಬದುಕಿನ ನಡುವೆ ಹೋರಾಡಿದ್ದಾರೆ. ಆ ಪ್ರದೇಶವು ನಿರ್ಜನವಾಗಿದ್ದರಿಂದ ಆಕೆಯ ಕಿರುಚಾಟ ಯಾರಿಗೂ ಕೇಳಿಸಲಿಲ್ಲ, ಮರುದಿನ ಬೆಳಗ್ಗೆ ಸ್ಥಳೀಯ ರೈತರು ಆಕೆಯನ್ನು ರಕ್ಷಿಸುವವರೆಗೆ ಸುಮಾರು 21 ಗಂಟೆಗಳ ಕಾಲ ಆಕೆ ಬಾವಿಯಲ್ಲೇ ಕಳೆದಿದ್ದರು. ಬಳಿಕ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿ ರ‍್ಯಾಪಿಡೋ ಬುಕಿಂಗ್ ದಾಖಲೆಗಳು, ಸಿಸಿಟಿವಿ ದೃಶ್ಯಾವಳಿ ಹಾಗೂ ಮೊಬೈಲ್ ಫೋನ್ ನೆಟ್‌ವರ್ಕ್ ಆಧಾರದ ಮೇಲೆ ಆರೋಪಿಯ ಪತ್ತೆಗೆ ಮುಂದಾಗಿದ್ದಾರೆ.
ಈ ಬಗ್ಗೆ ಪೊಲೀಸ್ ಕಮಿಷನರ್ ಗೌಸ್ ಆಲಂ ವಿವರಿಸಿದ್ದು, ನಾವು ರ‍್ಯಾಪಿಡೋ ಬೈಕ್ ಸವಾರನನ್ನು ವಿಚಾರಣೆ ನಡೆಸಿ, ಸಿಸಿಟಿವಿ ದೃಶ್ಯಾವಳಿ ಹಾಗೂ ತಾಂತ್ರಿಕ ಆಧಾರಗಳ ನೆರವಿನಿಂದ ಆರೋಪಿಯನ್ನು ಯಶಸ್ವಿಯಾಗಿ ಗುರುತಿಸಿ ಬಂಧಿಸಿದ್ದೇವೆ ಮತ್ತು ಆತ ವಿಚಾರಣೆ ವೇಳೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ. ತನಿಖೆಯ ವೇಳೆ 21 ವರ್ಷದ ವಿದ್ಯಾರ್ಥಿ ಧಮ್ಮ ದಿನೇಶ್ ರೆಡ್ಡಿ ಆನ್‌ಲೈನ್ ಜೂಜು, ಬೆಟ್ಟಿಂಗ್ ಹಾಗೂ ಲೋನ್ ಆ್ಯಪ್‌ಗಳ ಮೂಲಕ ಸುಮಾರು 4 ಲಕ್ಷ ರೂಪಾಯಿ ಕಳೆದುಕೊಂಡು ಸಾಲದ ಸುಳಿಗೆ ಸಿಲುಕಿ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಆತ ಕದ್ದ ಚಿನ್ನದ ಆಭರಣಗಳನ್ನು ಕದ್ದ ಮಾಲು ಎಂದು ಗೊತ್ತಿದ್ದೂ ಖರೀದಿಸಿದ್ದ ಜ್ಯುವೆಲ್ಲರಿ ವ್ಯಾಪಾರಿಯನ್ನೂ ಪೊಲೀಸರು ಬಂಧಿಸಿದ್ದು, ಇಬ್ಬರೂ ಆರೋಪಿಗಳನ್ನು ಮುಂದಿನ ಕಾನೂನು ಕ್ರಮಗಳಿಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net