ನವದೆಹಲಿ: ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಇಂಡಿಯಾ ಒಕ್ಕೂಟದ ರಾರಯಲಿಗೂ ಮುನ್ನ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ (CM Revanth Reddy) ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದಾರೆ.
ದೆಹಲಿಯ ತೆಲಂಗಾಣ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರೇವಂತ್ ರೆಡ್ಡಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾವಣನಿಗೆ ಹೋಲಿಸುತ್ತಾ, ಲಂಕಾ ವಿಜಯಕ್ಕಾಗಿ ರಾಮನಿಗೆ ಸಹಾಯ ಮಾಡಲು ವಾನರ ಸೇನೆ ತೆರಳಿದಂತೆ, ಮೋದಿಯನ್ನು ಸೋಲಿಸಲು ಕಾಂಗ್ರೆಸ್ ಕಾರ್ಯಕರ್ತರ ಸೇನೆ ದೆಹಲಿಗೆ ಬಂದಿದೆ ಎಂದಿದ್ದಾರೆ. ಇದು ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಧಾನಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ರೇವಂತ್ ರೆಡ್ಡಿ, ಜಾತಿ, ಧರ್ಮ, ಭಾಷೆ ಮತ್ತು ಪ್ರಾದೇಶಿಕ ರೇಖೆಗಳ ಮೂಲಕ ಜನರನ್ನು ವಿಭಜಿಸುವ ಮೂಲಕವೇ ಮೋದಿ ಮೂರನೇ ಬಾರಿಗೆ ಅಧಿಕಾರ ಹಿಡಿದಿದ್ದಾರೆ ಎಂದು ಆರೋಪಿಸಿದರು. 2024ರ ಲೋಕಸಭಾ ಚುನಾವಣೆಯಲ್ಲಿ ಸಂವಿಧಾನವನ್ನು ರದ್ದುಗೊಳಿಸುವ ಉದ್ದೇಶದಿಂದಲೇ ಬಿಜೆಪಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗುರಿಯಾಗಿರಿಸಿಕೊಂಡಿತ್ತು ಎಂಬ ಕಾಂಗ್ರೆಸ್‌ನ ಹಳೆಯ ಆರೋಪವನ್ನು ಅವರು ಪುನರುಚ್ಚರಿಸಿದರು.
ಅಲ್ಲದೆ, ಮಹಾರಾಷ್ಟ್ರ, ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದರ ಹಿಂದೆ ಮತ ಕಳ್ಳತನದ ಕೈ ಚಳಕ ಇದೆ, ದೇಶಾದ್ಯಂತ ನಡೆಯುತ್ತಿರುವ ಎಸ್ಐಆರ್ ಅಭಿಯಾನದ ಮೂಲಕ ಬರೋಬ್ಬರಿ 13.50 ಕೋಟಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಅಳಿಸಲಾಗಿದೆ ಎಂದು ಕಿಡಿಕಾರಿದರು. ರಾವಣನನ್ನು ಸೋಲಿಸಲು ಲಂಕಾಗೆ ವಾನರ ಸೇನೆ ಹೆಜ್ಜೆ ಹಾಕಿದಂತೆ, ರಾವಣನಂತಿರುವ ಮೋದಿಯನ್ನು ಸೋಲಿಸಲು ನಮ್ಮ ತೆಲಂಗಾಣದ ವಾನರ ಸೇನೆ ದೆಹಲಿಗೆ ಬಂದಿದೆ. ಬಿಜೆಪಿಯನ್ನು ಅಧಿಕಾರಕ್ಕೆ ತರಲು ದೇಶದಲ್ಲಿ ಶೇ.15-20ರಷ್ಟು ಮತಗಳನ್ನು ಅಳಿಸಿಹಾಕುವ ಹುನ್ನಾರ ನಡೆಯುತ್ತಿದೆ ಎಂದು ರೆಡ್ಡಿ ಆರೋಪಿಸಿದರು.
ರೇವಂತ್ ರೆಡ್ಡಿ ಅವರ ಈ ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ತೆಲಂಗಾಣ ವಕ್ತಾರ ಮಹೇಶ್ ನಾಮಾನಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ತೆಲಂಗಾಣ ಮುಖ್ಯಮಂತ್ರಿಯವರ ವರ್ತನೆಯು ಅತ್ಯಂತ ಅಸಹ್ಯಕರ ಮತ್ತು ನಾಚಿಕೆಗೇಡಿನಿಂದ ಕೂಡಿದೆ ಎಂದಿರುವ ಅವರು, ಜನರನ್ನು ವಿಭಜಿಸುವುದು ಯಾವಾಗಲೂ ಕಾಂಗ್ರೆಸ್ ಪಕ್ಷದ ಡಿಎನ್‌ಎಯಲ್ಲೇ ಇದೆ ಎಂದು ತಿರುಗೇಟು ನೀಡಿದರು. ದೇಶದ ಪ್ರಧಾನಿಯವರ ವಿರುದ್ಧ ಇಂತಹ ಕೀಳು ಮಟ್ಟದ ಭಾಷೆಯನ್ನು ಬಳಸುವುದು ಮುಖ್ಯಮಂತ್ರಿ ಹುದ್ದೆಯಲ್ಲಿರುವ ವ್ಯಕ್ತಿಗೆ ಶೋಭೆ ತರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ(ಏಜೆನ್ಸೀಸ್).