

Illegal MP: ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಇಂಡಿಯಾ ಒಕ್ಕೂಟದ ರ್ಯಾಲಿಯು ಸಂಪೂರ್ಣವಾಗಿ ವಿಫಲಗೊಂಡಿದೆ ಎಂದು ಆಡಳಿತರೂಢ ಭಾರತೀಯ ಜನತಾ ಪಕ್ಷ ತೀವ್ರವಾಗಿ ವಾಗ್ದಾಳಿ ನಡೆಸಿದೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಸದ ಸಂಬಿತ್ ಪಾತ್ರಾ, ವಿಪಕ್ಷಗಳ ರಾರಯಲಿಯು ಕೇವಲ ಫ್ಲಾಪ್ ಶೋ ಆಗಿದ್ದು, ಮೈದಾನದಲ್ಲಿ ಶೇ. 40ರಷ್ಟು ಜಾಗ ಖಾಲಿಯಾಗಿತ್ತು ಎಂದರು.
2024ರ ಲೋಕಸಭಾ ಚುನಾವಣೆಯ ಫಲಿತಾಂಶಗಳು ಕಾನೂನುಬಾಹಿರ ಎಂಬ ರಾಹುಲ್ ಗಾಂಧಿ ಆರೋಪಕ್ಕೆ ಖಡಕ್ ತಿರುಗೇಟು ನೀಡಿದ ಸಂಬಿತ್ ಪಾತ್ರಾ, ಹಾಗಾದರೆ ರಾಹುಲ್ ಗಾಂಧಿ ಅವರು ಅಕ್ರಮ ಸಂಸದ, ಅಕ್ರಮ ವಿರೋಧ ಪಕ್ಷದ ನಾಯಕ ಎಂದರ್ಥವೇ ಎಂದು ಪ್ರಶ್ನಿಸಿದರು. 2024ರ ಚುನಾವಣಾ ಫಲಿತಾಂಶಗಳು ಅಕ್ರಮವಾಗಿದ್ದರೆ, ಅದನ್ನು ನ್ಯಾಯಾಲಯದಲ್ಲಿ ಏಕೆ ಪ್ರಶ್ನಿಸಲಿಲ್ಲ..? ಎಂದು ಸವಾಲು ಹಾಕಿದರು.
ಮುಂದುವರೆದು ಮಾತನಾಡಿದ ಬಿಜೆಪಿ ನಾಯಕ, 2024 ರ ಚುನಾವಣೆಯ ಕುರಿತಾಗಿ ರಾಹುಲ್ ಗಾಂಧಿ ಸೇರಿದಂತೆ ಇಂಡಿಯಾ ಮೈತ್ರಿಕೂಟದ ಯಾವುದೇ ಮಿತ್ರಪಕ್ಷಗಳು ಒಂದೇ ಒಂದು ಮೇಲ್ಮನವಿ ಸಲ್ಲಿಸಿಲ್ಲ. ಈಗ ಎರಡೂವರೆ ವರ್ಷಗಳ ಬಳಿಕ ರಾಮಲೀಲಾ ಮೈದಾನದಲ್ಲಿ ನಿಂತು ಚುನಾವಣೆ ಅಕ್ರಮವೆಂದು ಘೋಷಿಸಲು ಸಾಧ್ಯವಿಲ್ಲ ಎಂದು ಪಾತ್ರಾ ವಾಗ್ದಾಳಿ ನಡೆಸಿದರು. ಅಲ್ಲದೆ, ರಾಹುಲ್ ಗಾಂಧಿ ಅವರ ಇಡೀ ಭಾಷಣವು ಕಾಲಹರಣ ಎಂದು ಜರಿದರು.
ರಾರಯಲಿಗೆ ಜನಸಾಗರವೇ ಹರಿದುಬರಲಿದೆ ಎಂದು ಕಾಂಗ್ರೆಸ್ ನಾಯಕರು ಬಿಗಿದುಕೊಂಡಿದ್ದ ಮಾತಿಗೆ ವ್ಯಂಗ್ಯವಾಡಿದ ಸಂಬಿತ್ ಪಾತ್ರಾ, ಹಿಂದಿನ ದೃಶ್ಯಗಳನ್ನೇ ಗಮನಿಸಿದರೆ ರಾಮಲೀಲಾ ಮೈದಾನದ ಶೇ. 40ರಷ್ಟು ಜಾಗ ಖಾಲಿಯಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ರಾಹುಲ್ ಗಾಂಧಿ ಮತ್ತು ಅವರ ತಂಡವು 10 ಲಕ್ಷ ಜನರು ಸೇರಲಿದ್ದಾರೆ ಎಂದು ದೊಡ್ಡ ಸುಳ್ಳು ಹೇಳಿತ್ತು. ಆದರೆ ಮೈದಾನದಲ್ಲಿ ಹಾಕಲಾಗಿದ್ದ 28,000 ಕುರ್ಚಿಗಳ ಪೈಕಿ ಮಧ್ಯಾಹ್ನ 3:30ರಿಂದ 4 ಗಂಟೆಯ ನಡುವೆಯೂ ಸುಮಾರು 5,000ದಿಂದ 7,000 ಕುರ್ಚಿಗಳು ಖಾಲಿಯಾಗಿದ್ದವು. ಕಾಂಗ್ರೆಸ್ ಪಕ್ಷದ 10 ಲಕ್ಷ ಜನರ ಸುಳ್ಳು ದಾವೆಯ ಅಸಲಿಯತ್ತು ಇದು ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ನಾಯಕರ ಆರೋಪಗಳ್ನು ತೀವ್ರವಾಗಿ ಖಂಡಿಸಿದ ಪಾತ್ರಾ, ಈ ದೇಶವು ಯಾರೊಬ್ಬರ ಅಪ್ಪನ ಸ್ವತ್ತಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕಠಿಣ ಪರಿಶ್ರಮ ಮತ್ತು ಬೆವರು ಹರಿಸಿ ಈ ಸ್ಥಾನಕ್ಕೆ ಬಂದಿದ್ದಾರೆ ಹೊರತು ವಂಶಾಡಳಿತದಿಂದ ಅಲ್ಲ ಎಂದರು. ಎಷ್ಟೇ ಪಕ್ಷಗಳು ಮತ್ತು ಧ್ವಜಗಳನ್ನು ಒಗ್ಗೂಡಿಸಿದರೂ ಇಂಡಿಯಾ ಒಕ್ಕೂಟಕ್ಕೆ 10 ಲಕ್ಷ ಜನರನ್ನು ಸೇರಿಸಲು ಸಾಧ್ಯವಾಗಿಲ್ಲ. ಇಂತಹ ನಕಲಿ ತಂತ್ರಗಳಿಂದ ಯಾರೂ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದು ಟೀಕಿಸಿದ ಅವರು, ಇಂತಹ ಸುಳ್ಳು ಆರೋಪಗಳ ಮೂಲಕ ಸಾರ್ವಜನಿಕರ ಬೆಂಬಲ ಗಳಿಸಲು ಸಾಧ್ಯವಿಲ್ಲ ಎಂದರು.
ಒಬ್ಬ ಸಾಮಾನ್ಯ ಚಹಾ ಮಾರಾಟಗಾರ ಕೂಡ ಈ ದೇಶದಲ್ಲಿ ಪ್ರಧಾನಿಯಾಗಬಹುದು ಮತ್ತು ಸಾಮಾನ್ಯ ವ್ಯಕ್ತಿಯೊಬ್ಬ ಗೃಹಮಂತ್ರಿಯಾಗಬಹುದು ಎಂಬುದು ಪ್ರಜಾಪ್ರಭುತ್ವದ ಸೌಂದರ್ಯ. ಆದರೆ ಇದುವೇ ರಾಹುಲ್ ಗಾಂಧಿ ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಪಾತ್ರಾ ಟೀಕಿಸಿದರು. ರಾಹುಲ್ ಗಾಂಧಿ ಅವರೇ, ಭಾರತವನ್ನು ಅರಾಜಕತೆಗೆ ತಳ್ಳಲು ನೀವು ಬಯಸುವ ಗೊಂದಲಗಳು ಕೇವಲ ಅವ್ಯವಸ್ಥೆಯ ಪ್ರದರ್ಶನವಷ್ಟೇ ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದರು. ಇದಷ್ಟೆ ಅಲ್ಲದೇ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು 2024ರ ಲೋಕಸಭಾ ಚುನಾವಣೆ ನಡೆದಾಗ ಸಿಇಸಿ ಆಗಿರಲಿಲ್ಲ ಎನ್ನುವ ಸತ್ಯವನ್ನು ರಾಹುಲ್ ಗಾಂಧಿ ಮರೆತಿದ್ದಾರೆ ಎಂದು ಪಾತ್ರಾ ಕುಟುಕಿದರು(ಏಜೆನ್ಸೀಸ್).