

ಬಿಹಾರ: ಶಿಕ್ಷಕ ಅಂದರೆ ಅವನೊಬ್ಬ ಜ್ಞಾನದಾತ, ವಿದ್ಯಾರ್ಥಿಗಳಿಗೆ ದಾರಿ ತೋರಿಸುವ ಮಾರ್ಗದರ್ಶಿ. ಆದರೆ ಅದೇ ಶಿಕ್ಷಕ ಕ್ಲಾಸ್‌ರೂಮ್ ಒಳಗೆ ಪೆನ್, ಪುಸ್ತಕ ಹಿಡಿಯುವ ಬದಲು ಕೈಯಲ್ಲಿ ಬಂದೂಕು ಹಿಡಿದು ನಿಂತರೆ ಹೇಗಾಗಬೇಡ! ಇಂತಹದ್ದೊಂದು ಶಾಕಿಂಗ್ ಘಟನೆ ಬಿಹಾರದಲ್ಲಿ ಬೆಳಕಿಗೆ ಬಂದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಬಿಹಾರದ ದರ್ಭಾಂಗಾದ ಕೋಚಿಂಗ್ ಸೆಂಟರ್ ಒಂದರಲ್ಲಿ ಶಿಕ್ಷಕರೊಬ್ಬರು ತರಗತಿಯಲ್ಲೇ ಪಿಸ್ತೂಲ್ ಪ್ರದರ್ಶಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ಪೋಷಕರು ಮತ್ತು ನೆಟ್ಟಿಗರು ಶಾಕ್ ಆಗಿದ್ದು, ಈತನ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.
ಟ್ವಿಟರ್ ನಲ್ಲಿ ಹಂಚಿಕೆಯಾಗಿರುವ ಈ ವಿಡಿಯೋನಲ್ಲಿ, ಕೋಚಿಂಗ್ ಕ್ಲಾಸ್‌ನಂತಿರುವ ಕೊಠಡಿಯಲ್ಲಿ ಶಿಕ್ಷಕನೊಬ್ಬ ಡೆಸ್ಕ್ ಮುಂದೆ ನಿಂತು, ದರ್ಪದಿಂದ ಕೈಯಲ್ಲಿ ಗನ್ ಹಿಡಿದು ಆಡಿಸುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ತರಗತಿಯಲ್ಲಿ ಪಾಠ ಕಲಿಯಲು ಕೂತಿದ್ದ ಮಕ್ಕಳ ಮುಂದೆಯೇ ಈ ರೀತಿ ಗನ್ ಶೋಕಿ ತೋರಿಸಿರುವುದು ಜನರನ್ನು ಕೆರಳಿಸಿದೆ.
ವಿಡಿಯೋ ಪೋಸ್ಟ್ ಮಾಡಿದ ವ್ಯಕ್ತಿ ಬಿಹಾರ ಪೊಲೀಸರಿಗೆ ನೇರವಾಗಿಯೇ ಚಾಟಿ ಬೀಸಿದ್ದಾರೆ. "ಇವರು ಮಕ್ಕಳಿಗೆ ಪಾಠ ಹೇಳಿಕೊಡುವ ಶಿಕ್ಷಕರಾ ಅಥವಾ ವಿದ್ಯಾರ್ಥಿಗಳನ್ನು ಕ್ರಿಮಿನಲ್‌ಗಳನ್ನಾಗಿ ಮಾಡುವ ಗ್ಯಾಂಗ್‌ಸ್ಟರ್‌ಗಳಾ? ದರ್ಭಾಂಗಾ ಸಿಟಿಯಲ್ಲೇ ರಾಜಾರೋಷವಾಗಿ ಈ ಕೋಚಿಂಗ್ ಸೆಂಟರ್ ನಡೀತಿದೆ" ಎಂದು ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೆ, ಬಿಹಾರ ಸಿಎಂ ಕಚೇರಿ ಮತ್ತು ಪೊಲೀಸರನ್ನು ಟ್ಯಾಗ್ ಮಾಡಿ, ತಕ್ಷಣ ಇವನ ಜೈಲಿಗಟ್ಟುವಂತೆ ಆಗ್ರಹಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆ ಅಲರ್ಟ್ ಆದ ಬಿಹಾರ ಪೊಲೀಸ್ ಇಲಾಖೆ, ಅಧಿಕೃತವಾಗಿ ಪ್ರತಿಕ್ರಿಯೆ ನೀಡಿದೆ. ಘಟನೆಗೆ ಸಂಬಂಧಿಸಿದಂತೆ ದರ್ಭಾಂಗಾ ಜಿಲ್ಲಾ ಪೊಲೀಸರಿಗೆ ಟ್ಯಾಗ್ ಮಾಡಿ, "ತಕ್ಷಣವೇ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ" ಎಂದು ಆದೇಶಿಸಿದೆ.
ಆದರೆ ಈ ವಿಡಿಯೋ ಯಾವಾಗ ಶೂಟ್ ಮಾಡಿದ್ದು? ಶಿಕ್ಷಕನ ಕೈಯಲ್ಲಿದ್ದ ಗನ್ ನಿಜವಾದದ್ದೇ ಅಥವಾ ಬರೀ ಶೋಕಿಗಾಗಿ ಹಿಡಿದ ನಕಲಿ ಪಿಸ್ತೂಲೇ? ಈ ಬಗ್ಗೆ ಪೊಲೀಸರು ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ. ಗನ್ ಅಸಲಿಯೋ ನಕಲಿಯೋ ಎಂಬುದು ಪಕ್ಕಕ್ಕಿರಲಿ, ತರಗತಿಯ ಒಳಗೆ ಮಕ್ಕಳ ಮುಂದೆ ಇಂತಹ ಬೇಜವಾಬ್ದಾರಿ ನಡವಳಿಕೆ ತೋರಿಸಿರುವುದು ಮಾತ್ರ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವುದು ಸಾರ್ವಜನಿಕರ ಸ್ಪಷ್ಟ ಅಭಿಪ್ರಾಯವಾಗಿದೆ, (ಏಜೆನ್ಸೀಸ್).