ಹರ್ಮನ್‌-ಸ್ಮೃತಿ ನಡುವೆ ‘ಕ್ಯಾಪ್ಟನ್ಸಿ ವಾರ್’? ಪರಸ್ಪರ ಕೈ ಕುಲುಕದ ಉಭಯ​​ ಆಟಗಾರ್ತಿಯರು; ವಿಡಿಯೋ ವೈರಲ್! Smriti Mandhana

Harmanpreet Kaur and Smriti Mandhana Handshake Controversy
ಹರ್ಮನ್‌ಪ್ರೀತ್ ಕೌರ್ ಮತ್ತು ಸ್ಮೃತಿ ಮಂಧಾನ ಹ್ಯಾಂಡ್‌ಶೇಕ್ ವಿವಾದ
Published on: 

ವಡೋದರಾ: ಭಾರತ ಮತ್ತು ಜಿಂಬಾಬ್ವೆ ನಡುವೆ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಗೆಲುವನ್ನು ಸಾಧಿಸುವ ಮೂಲಕ ಭಾರತದ ವನಿತೆಯರು 3-0 ಅಂತರದಲ್ಲಿ ಸರಣಿಯನ್ನು ಕ್ಲೀನ್​ ಸ್ಪೀಪ್​ ಮಾಡಿದ್ದಾರೆ. ಕೊನೆಯ ಪಂದ್ಯದಲ್ಲಿ ಭರ್ತಿ 8 ವಿಕೆಟ್​ಗಳ ಭರ್ಜರಿ ಜಯವನ್ನು ಟೀಮ್​ ಇಂಡಿಯಾ ಕಂಡುಕೊಂಡಿದೆ. ಆದರೆ, ಈ ಪಂದ್ಯಾವಳಿ ಮುಗಿದ ನಂತರ ನಡೆದಿರುವ ಒಂದು ಘಟನೆ ಈಗ ಸೋಷಿಯಲ್​ ಮೀಡಿಯಾನಲ್ಲಿ ಕಾಡ್ಗಿಚ್ಚನ್ನು ಹಚ್ಚಿದೆ.

ಮ್ಯಾಚ್ ಮುಗಿದ ನಂತರ ವಿರೋಧಿ ಹಾಗೂ ಸ್ವತಂಡದ ಆಟಗಾರ/ರ್ತಿಯರು ಕೈ ಕುಲುಕುವುದು ಸ್ವಾಭಾವಿಕ ಪ್ರಕ್ರಿಯೆಯಾಗಿದೆ. ಆದರೆ, ಈ ಪಂದ್ಯದ ನಂತರ, ತಂಡದ ಮಾಜಿ ನಾಯಕಿ, ಹರ್ಮನ್​ಪ್ರೀತ್​ ಕೌರ್​ ಹಾಗೂ ಈಗೀನ ನಾಯಕಿ ಸ್ಮೃತಿ ಮಂಧಾನ ಕೈಕುಲುಕದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಅಷ್ಟಕ್ಕೂ ಮೈದಾನದಲ್ಲಿ ಆಗಿದ್ದೇನು?

ಮೂರನೇ ಪಂದ್ಯ ಮುಗಿದ ತಕ್ಷಣ ಎಲ್ಲ ಆಟಗಾರ್ತಿಯರು ಪರಸ್ಪರ ಹ್ಯಾಂಡ್‌ಶೇಕ್ ಮಾಡುತ್ತಾ, ತಬ್ಬಿಕೊಂಡು ಅಭಿನಂದನೆ ಸಲ್ಲಿಸುತ್ತಿದ್ದರು. ಈ ವೇಳೆ ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ ಹತ್ತಿರ ಬಂದು ಕೈ ಕುಲುಕಲು ಮುಂದಾಗಿದ್ದಾರೆ. ಆದರೆ, ಅದೇ ಸಮಯಕ್ಕೆ ಸ್ಮೃತಿ ಮಂಧನಾ ಬೇರೆ ಯಾರನ್ನೋ ನೋಡುತ್ತಾ ಅತ್ತ ಕಡೆ ಗಮನ ಹರಿಸಿದ್ದಾರೆ. ಪರಿಣಾಮ, ಇಬ್ಬರ ನಡುವೆ ಹ್ಯಾಂಡ್‌ಶೇಕ್ ನಡೆದಿಲ್ಲ.

ಕೇವಲ ಎರಡರಿಂದ ಮೂರು ಸೆಕೆಂಡ್‌ಗಳಲ್ಲಿ ನಡೆದುಹೋದ ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈಗ ನೆಟ್ಟಿಗರ ಕೈಗೆ ಸಿಕ್ಕಿ ರಾದ್ಧಾಂತವೇ ಸೃಷ್ಟಿಯಾಗಿದೆ. "ಟೀಮ್ ಇಂಡಿಯಾದ ಇಬ್ಬರು ಸೀನಿಯರ್ ಆಟಗಾರ್ತಿಯರ ನಡುವೆ ಎಲ್ಲವೂ ಸರಿಯಿಲ್ವಾ? ಡ್ರೆಸ್ಸಿಂಗ್ ರೂಮ್‌ನಲ್ಲಿ ಕೋಲ್ಡ್ ವಾರ್ ಶುರುವಾಗಿದ್ಯಾ?" ಎಂಬ ಪ್ರಶ್ನೆಗಳು ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಜೋರಾಗಿ ಹರಿದಾಡುತ್ತಿವೆ.

ವೈರಲ್ ವಿಡಿಯೋದ ಹಿಂದಿನ ಅಸಲಿ ಸತ್ಯವೇನು?

ವಿಡಿಯೋ ನೋಡಿದ ತಕ್ಷಣ ಇಬ್ಬರ ನಡುವೆ ಮುನಿಸು ಎಂದು ತೀರ್ಮಾನಕ್ಕೆ ಬರುವುದು ತಪ್ಪು ಎನ್ನುತ್ತಾರೆ ಕ್ರಿಕೆಟ್ ಪಂಡಿತರು. ಪಂದ್ಯ ಮುಗಿದ ತಕ್ಷಣ ಮೈದಾನದಲ್ಲಿ ಸಂಭ್ರಮ, ಗಲಾಟೆ ಜೋರಾಗಿರುತ್ತದೆ. ಆ ಸಮಯದಲ್ಲಿ ಒಬ್ಬರನ್ನೊಬ್ಬರು ಮಾತನಾಡಿಸುವಾಗ ಗಮನ ಬೇರೆಡೆ ಹೋಗುವುದು ತೀರಾ ಸಹಜ. ಹರ್ಮನ್‌ಪ್ರೀತ್ ಕೈ ಚಾಚಿದಾಗ ಸ್ಮೃತಿ ಬೇರೆ ಆಟಗಾರ್ತಿಯನ್ನೋ ಅಥವಾ ಸಿಬ್ಬಂದಿಯನ್ನೋ ಗಮನಿಸುತ್ತಿದ್ದ ಕಾರಣ ಕೈಕುಲುಕಲು ಸಾಧ್ಯವಾಗದೇ ಇರಬಹುದು. ಇದು ಕೇವಲ ಒಂದು ಕ್ಷಣದ ಮಿಸ್‌ಕಮ್ಯುನಿಕೇಶನ್ ಅಷ್ಟೇ, ಇದರಲ್ಲಿ ಯಾವುದೇ ಶೀತಲ ಸಮರ ಇಲ್ಲ ಎನ್ನುವುದು ಹೆಚ್ಚಿನವರ ವಾದವಾಗಿದೆ.

Also Read
PNB ಬ್ಯಾಂಕ್‌ನಲ್ಲಿ 35 ಕೋಟಿ ಲೂಟಿ: OTP ಇಲ್ಲ, ಮೆಸೇಜ್ ಇಲ್ಲ, ಗ್ರಾಹಕರ ಖಾತೆಯೊಂದಿಗೆ ಚೆಲ್ಲಾಟವಾಡಿದ ಸಿಬ್ಬಂದಿ? PNB Scam
Harmanpreet Kaur and Smriti Mandhana Handshake Controversy

ಹರ್ಮನ್ ಶತಕ ಬಾರಿಸಿದಾಗ ಬೆನ್ನುತಟ್ಟಿದ್ದ ಸ್ಮೃತಿ!

ನಿಜವಾಗಿಯೂ ಇಬ್ಬರ ನಡುವೆ ಜಗಳ ಅಥವಾ ಮನಸ್ತಾಪ ಇದ್ದಿದ್ದರೆ, ಅದು ಈ ಹಿಂದಿನ ಪಂದ್ಯಗಳಲ್ಲೇ ಕಾಣಿಸುತ್ತಿತ್ತು. ಎರಡನೇ ಏಕದಿನ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಜಿಂಬಾಬ್ವೆ ಬೌಲರ್‌ಗಳನ್ನು ಮನಬಂದಂತೆ ದಂಡಿಸಿ 126 ರನ್ ಚಚ್ಚಿದ್ದರು. ಆ ಪಂದ್ಯದಲ್ಲಿ ಹರ್ಮನ್ ಆಟವನ್ನು ಮೈದಾನದಲ್ಲೇ ನಿಂತು ಮನಸಾರೆ ಮೆಚ್ಚಿಕೊಂಡಿದ್ದು ಇದೇ ಸ್ಮೃತಿ ಮಂಧನಾ. ಅಷ್ಟೇ ಅಲ್ಲದೇ, ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲೂ ಹರ್ಮನ್ ಅವರ ಬ್ಯಾಟಿಂಗ್ಅನ್ನು ಸ್ಮೃತಿ ಮುಕ್ತಕಂಠದಿಂದ ಕೊಂಡಾಡಿದ್ದರು.

ನಾಯಕತ್ವದ ಬದಲಾವಣೆಯಿಂದ ಗಾಸಿಪ್‌ಗೆ ಪುಷ್ಟಿ?

ಸ್ಮೃತಿ ಮಂಧನಾ ಸದ್ಯ ತಂಡವನ್ನು ಮುನ್ನಡೆಸುತ್ತಿದ್ದರೆ, ಹರ್ಮನ್‌ಪ್ರೀತ್ ಕೌರ್ ತಂಡದ ಅತ್ಯಂತ ಹಿರಿಯ ಮತ್ತು ಪವರ್‌ಫುಲ್ ಆಟಗಾರ್ತಿ ಆಗಿದ್ದಾರೆ. ಇಂಥ ಸ್ಟಾರ್ ಆಟಗಾರ್ತಿಯರ ನಡುವೆ ಸಣ್ಣ ವಿಷಯ ನಡೆದರೂ ಅದು ದೊಡ್ಡ ಹೆಡ್‌ಲೈನ್ ಆಗುವುದು ಮಾಮೂಲಿ. ಕೆಲವರಂತೂ ಇಬ್ಬರ ನಡುವೆ ‘ಕ್ಯಾಪ್ಟನ್ಸಿ ವಾರ್’ ನಡೆಯುತ್ತಿದೆ ಎಂದೆಲ್ಲ ಕಟ್ಟುಕಥೆಗಳನ್ನು ಹೆಣೆಯಲು ಶುರುಮಾಡಿದ್ದಾರೆ. ಆದರೆ, ತಂಡದ ಆಟಗಾರ್ತಿಯರ ಬಾಂಡಿಂಗ್ ನೋಡಿದರೆ ಇಂಥ ಊಹಾಪೋಹಗಳಿಗೆ ಯಾವುದೇ ಆಧಾರವಿಲ್ಲ ಎಂಬುದು ಸ್ಪಷ್ಟವಾಗುತ್ತದೆ, (ಏಜೆನ್ಸೀಸ್​).