TCS ಮತಾಂತರ ಪ್ರಕರಣ: ನ್ಯಾಯಾಂಗ ಬಂಧನಕ್ಕೆ ನಿದಾ ಖಾನ್​; AIMIM ಕಾರ್ಪೊರೇಟರ್​ಗೆ ನೋಟಿಸ್​! TCS Nida Khan

ಪ್ರಮುಖ ಆರೋಪಿ ನಿದಾ ಖಾನ್​ಗೆ 14 ದಿನ ಜೈಲು
ಪ್ರಮುಖ ಆರೋಪಿ ನಿದಾ ಖಾನ್​ಗೆ 14 ದಿನ ಜೈಲು
Published on

ಪ್ರಮುಖ ಮುಖ್ಯಾಂಶಗಳು

  • TCS ನಲ್ಲಿ ಮತಾಂತರ ಪ್ರಕರಣ
  • ಪ್ರಮುಖ ಆರೋಪಿ ನಿದಾ ಖಾನ್​ಗೆ 14 ದಿನ ಜೈಲು
  • ವಾಸ್ತವ್ಯ ನೀಡಿದ್ದ AIMIM ಪಕ್ಷದ ಮತಿನ್ ಪಟೇಲ್​ಗೆ ನೋಟಿಸ್​
ನಾಸಿಕ್​: ದೇಶಾದ್ಯಂತ ಸಂಚಲನ ಮೂಡಿಸಿರುವ ನಾಸಿಕ್‌ನ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಕಂಪನಿಯ ಲೈಂಗಿಕ ಕಿರುಕುಳ ಮತ್ತು ಬಲವಂತದ ಮತಾಂತರ ಪ್ರಕರಣದ ಪ್ರಮುಖ ಆರೋಪಿ ನಿದಾ ಖಾನ್‌ (TCS Nida Khan) ಗೆ ಈಗ ಕಾನೂನಿನ ಉರುಳು ಬಿಗಿಯಾಗಿದೆ. ಪೊಲೀಸ್ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ, ನಾಸಿಕ್ ನ್ಯಾಯಾಲಯ ನಿದಾ ಖಾನ್‌ಗೆ ಮೇ 24ರ ವರೆಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

ಜೈಲು ಸೇರಿದ ನಿದಾ ಖಾನ್!

ಗರ್ಭಿಣಿಯಾಗಿರುವ ನಿದಾ ಖಾನ್ ಅವರನ್ನು ಕಳೆದ ವಾರವಷ್ಟೇ ಛತ್ರಪತಿ ಸಂಭಾಜಿನಗರದಲ್ಲಿ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದರು. ಸದ್ಯ ಅವರನ್ನು ನಾಸಿಕ್ ರಸ್ತೆಯ ಕೇಂದ್ರ ಜೈಲಿನಲ್ಲಿ ಇರಿಸಲಾಗಿದೆ. ಈಕೆಯ ವಿರುದ್ಧ ಈಗಾಗಲೇ 9 ಎಫ್‌ಐಆರ್‌ಗಳು ದಾಖಲಾಗಿದ್ದು, ಮತಾಂತರಕ್ಕೆ ಪ್ರಚೋದನೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮತ್ತು ಲೈಂಗಿಕ ಕಿರುಕುಳದಂತಹ ಗಂಭೀರ ಆರೋಪಗಳನ್ನು ಹೊರಿಸಲಾಗಿದೆ.
ಮತಾಂತರದ ಕಿಂಗ್​ಪಿನ್​ ನಿದಾ
ಟಿಸಿಎಸ್‌ನ ನಾಸಿಕ್ ಘಟಕದಲ್ಲಿ ಕೆಲಸ ಮಾಡುತ್ತಿದ್ದ ನಿದಾ ಖಾನ್, ಅಲ್ಲಿನ ಮಹಿಳಾ ಉದ್ಯೋಗಿಗಳಿಗೆ ಇಸ್ಲಾಮಿಕ್ ಸಂಪ್ರದಾಯದಂತೆ ಉಡುಗೆ ತೊಡಲು ಮತ್ತು ವರ್ತಿಸಲು ಒತ್ತಾಯಿಸುತ್ತಿದ್ದರು ಎಂಬ ದೂರುಗಳಿವೆ. ಕೇವಲ ಧಾರ್ಮಿಕ ದಬ್ಬಾಳಿಕೆ ಮಾತ್ರವಲ್ಲದೆ, ದಲಿತ ಉದ್ಯೋಗಿಯೊಬ್ಬರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಈಕೆಯ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿಯೂ ಪ್ರಕರಣ ದಾಖಲಾಗಿದೆ.
ಈ ಪ್ರಕರಣದ ಗಂಭೀರತೆ ಅರಿತ ಮಹಾರಾಷ್ಟ್ರ ಸರ್ಕಾರ, ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ. ಖುದ್ದು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಈ ಪ್ರಕರಣದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

AIMIM ಕಾರ್ಪೊರೇಟರ್‌ಗೆ ಮುನ್ಸಿಪಾಲಿಟಿ ಶಾಕ್!

ಈ ಪ್ರಕರಣ ಕೇವಲ ನಿದಾ ಖಾನ್‌ಗೆ ಸೀಮಿತವಾಗಿದೆ, ತಲೆಮರೆಸಿಕೊಂಡಿದ್ದ ನಿದಾ ಖಾನ್‌ಗೆ ಸಂಭಾಜಿನಗರದಲ್ಲಿ ಆಶ್ರಯ ನೀಡಿದ್ದ ಆರೋಪದ ಮೇಲೆ AIMIM ಕಾರ್ಪೊರೇಟರ್ ಮತಿನ್ ಪಟೇಲ್ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮತಿನ್ ಪಟೇಲ್ ಒಡೆತನದ 600 ಚದರ ಅಡಿ ಮನೆ ಅಕ್ರಮ ಎಂಬ ಅನುಮಾನ ವ್ಯಕ್ತವಾಗಿದ್ದು, ಮಹಾನಗರ ಪಾಲಿಕೆಯು ಈ ಸಂಬಂಧ ನೋಟಿಸ್ ಜಾರಿ ಮಾಡಿದೆ.
ಮನೆಯ ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಲಾಗಿದ್ದು, ಸರಿಯಾದ ದಾಖಲೆ ನೀಡದಿದ್ದರೆ ಕಾನೂನು ಕ್ರಮ ಅನಿವಾರ್ಯ ಎಂದು ಮೇಯರ್ ಸಮೀರ್ ರಾಜೂರ್ಕರ್ ತಿಳಿಸಿದ್ದಾರೆ. ಅತ್ತ ನಿದಾ ಖಾನ್ ಜೈಲು ಪಾಲಾದರೆ, ಇತ್ತ ಆಕೆಗೆ ಸಹಾಯ ಮಾಡಿದವರಿಗೂ ಅಧಿಕಾರಿಗಳು ಬಿಸಿ ಮುಟ್ಟಿಸುತ್ತಿದ್ದಾರೆ.

ಇದು ಮೀಡಿಯಾ ಟ್ರಯಲ್​ ಎಂದ ಓವೈಸಿ

ಈ ವಿಷಯಕ್ಕೆ ಪ್ರತಿಕ್ರಿಯಿಸಿರುವ AIMIM ಅಧ್ಯಕ್ಷ ಅಸಾದುದ್ದೀನ್ ಓವೈಸಿ, ನಿದಾ ಖಾನ್​ರನ್ನು ಬೇಕಂತಲೇ ಗುರಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ನಿದಾ ಖಾನ್ ಮೇಲೆ ಎಫ್‌ಐಆರ್ ದಾಖಲಾಗುವ ಮೊದಲೇ ಕೆಲಸದಿಂದ ತೆಗೆಯಲಾಗಿತ್ತು. ಅವರು ಮಾನವ ಸಂಪನ್ಮೂಲ (HR) ಇಲಾಖೆಗೆ ಸಂಬಂಧಪಟ್ಟವರಲ್ಲ ಎಂದು ಕಂಪನಿಯೇ ಹೇಳಿದೆ. ಇಲ್ಲಿ ಮಾಧ್ಯಮಗಳೇ ವಿಚಾರಣೆ ನಡೆಸಿ ತೀರ್ಪು ನೀಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net