ಮಗನ ಮಾನಸಿಕ ಕಾಯಿಲೆ ಗುಣಪಡಿಸಲು ಕನ್ಯೆ ಬಲಿ ಬೇಕೆಂದ ಮಾಂತ್ರಿಕ: ಮಗಳನ್ನೇ ಕೊಂದ ಹೆತ್ತಮ್ಮ..Jharkhand Daughter killed

Jharkhand Daughter killed
Jharkhand Daughter killed
Published on

ಪ್ರಮುಖ ಮುಖ್ಯಾಂಶಗಳು

  • ಅನಾರೋಗ್ಯ ಪೀಡಿತ ಮಗನ ಗುಣಮುಖಕ್ಕಾಗಿ ಮಗಳನ್ನೇ ಬಲಿಕೊಟ್ಟ ತಾಯಿ
  • ಕನ್ಯೆಯನ್ನು ಬಲಿ ನೀಡಿದರೆ ಕಾಯಿಲೆ ವಾಸಿಯಾಗುತ್ತದೆ ಎಂದು ನಂಬಿಸಿದ್ದ ಮಾಂತ್ರಿಕಳು
  • ಗ್ರಾಮಸ್ಥರು ಹಬ್ಬದ ಸಂಭ್ರಮದಲ್ಲಿದ್ದಾಗ ನಡೆದ ಭೀಕರ ಕೊಲೆ
  • ತಾಯಿ ರೇಷ್ಮಿ ದೇವಿ, ಮಾಂತ್ರಿಕಳು ಶಾಂತಿ ದೇವಿ ಮತ್ತು ಭೀಮ್ ರಾಮ್ ಎಂಬಾತನ ಬಂಧನ
ಹಜಾರಿಬಾಗ್​: ಕೆಟ್ಟ ಮಕ್ಕಳಿರ್ತಾರೆ. ಆದರೆ, ಕೆಟ್ಟ ತಾಯಿ ಎಂದಿಗೂ ಇರೋದಿಲ್ಲ ಎನ್ನುವ ಮಾತೊಂದಿದೆ. ಸದ್ಯ ಜಾರ್ಖಂಡ್​ನಲ್ಲಿ (Jharkhand Human Sacrifice) ನಡೆದಿರೋ ಈ ಘಟನೆ ನಿಜಕ್ಕೂ ಆತಂಕಕ್ಕೀಡು ಮಾಡುವಂತದ್ದು. ತಾಯಿಯೊಬ್ಬಳು ಹೆತ್ತ ಮಗಳನ್ನೇ ಬಲಿಕೊಟ್ಟ ಪ್ರಕರಣ ಬೆಳಕಿಗೆ ಬಂದಿದೆ.
ಹೌದು, ಮಗನ ಅನಾರೋಗ್ಯವನ್ನು ಗುಣಪಡಿಸಲು ಕನ್ಯೆಯನ್ನು ಬಲಿ ನೀಡಬೇಕು ಎಂಬ ಮಾಂತ್ರಿಕ ಮಾತನ್ನು ನಂಬಿದ ತಾಯಿ ತನ್ನ ಮಗಳನ್ನೇ ಬಲಿ ನೀಡಿದ ಬೆಚ್ಚಿಬೀಳಿಸುವ ಘಟನೆ ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯ ಕುಸುಂಬಾ ಗ್ರಾಮದಲ್ಲಿ ಈ ಘೋರ ಕೃತ್ಯ ನಡೆದಿದೆ.

ಯಾರ್ಯಾರ ಬಂಧನ?

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಾಲಕಿಯ ತಾಯಿ, ಒಬ್ಬ ಮಹಿಳಾ ಮಾಂತ್ರಿಕ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಾಲಕಿಯ ತಾಯಿ ರೇಷ್ಮಿ ದೇವಿ, 55 ವರ್ಷದ ಮಾಂತ್ರಿಕ ಶಾಮತಿ ದೇವಿ. 40ವರ್ಷದ ಭೀಮ್ ರಾಮ್ ಬಂಧಿತರು.

ಏನಿದು ಘಟನೆ?

ರೇಷ್ಮಿ ದೇವಿಯ ಕಿರಿಯ ಮಗ ದೈಹಿಕ ಮತ್ತು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದನು. ಮಗನ ಕಾಯಿಲೆ ಗುಣಪಡಿಸಲು ರೇಷ್ಮಿ ದೇವಿ ತನ್ನ ಗ್ರಾಮದ ಶಾಂತಿ ದೇವಿ ಎಂಬ ತಾಂತ್ರಿಕಳನ್ನು ಪದೇ ಪದೇ ಭೇಟಿ ಮಾಡುತ್ತಿದ್ದಳು.
ಮಗನ ಎಲ್ಲ ಕಾಯಿಲೆಗಳು ವಾಸಿಯಾಗಬೇಕಾದರೆ ಒಬ್ಬ ಕನ್ಯೆಯನ್ನು ಬಲಿ ನೀಡಬೇಕು ಎಂದು ಮಾಂತ್ರಿಕಳು ರೇಷ್ಮಿ ದೇವಿಗೆ ತಿಳಿಸಿದ್ದಳು. ಮಾಂತ್ರಿಕಳ ಮಾತು ನಂಬಿದ ತಾಯಿ, ತನ್ನ ಸ್ವಂತ ಮಗಳನ್ನೇ ಬಲಿ ಕೊಡಲು ನಿರ್ಧರಿಸಿದಳು.

ಬಲಿ ತೆಗೆದುಕೊಂಡಿದ್ದು ಹೀಗೆ

ಮಾರ್ಚ್ 24 ರಂದು ರಾಮನವಮಿಯಂದು ಮಂಗಳ ಜುಲುಸ್ ಸಂಭ್ರಮದಲ್ಲಿ ಗ್ರಾಮಸ್ಥರು ಮಗ್ನರಾಗಿದ್ದರು. ಆ ದಿನದ ಅಷ್ಟಮಿ ರಾತ್ರಿಯಂದು ಈ ಕೃತ್ಯ ನಡೆದಿದೆ. ಮಾಂತ್ರಿಕಳು ಶಾಂತಿ ದೇವಿಯ ಮನೆಯಲ್ಲಿ ರೇಷ್ಮಿ ದೇವಿ ಮತ್ತು ಭೀಮ್ ರಾಮ್ ಸೇರಿ ಬಾಲಕಿಯನ್ನು ಉಸಿರುಗಟ್ಟಿಸಿ ಕೊಂದಿದ್ದಾರೆ‌ ಎನ್ನಲಾಗಿದೆ.

ಕಾಣೆಯಾಗಿದ್ದಾಳೆ ಎಂದು ಕತೆ ಕಟ್ಟಿದ್ದ ತಾಯಿ

ಬಲಿ ನೀಡುವ ವಿಧಿವಿಧಾನದ ಭಾಗವಾಗಿ ಬಾಲಕಿಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ರಕ್ತವನ್ನು ಸಂಗ್ರಹಿಸಲಾಗಿತ್ತು. ನಂತರ ಶವವನ್ನು ತೋಟವೊಂದರಲ್ಲಿ ಹೂತುಹಾಕಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಬಲಿ ಕೊಟ್ಟ ಬಗ್ಗೆ ಯಾವುದೇ ಅನುಮಾನ ಬಾರದಂತೆ ನೋಡಿಕೊಳ್ಳಲು ಮೊದಲು ತಾಯಿ ಮಗಳು ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದಾರೆ. ಮಾ.25ರಂದು ಬೇರೊಂದು ಗ್ರಾಮದ ಹೊಲವೊಂದರಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು.
ಮಗಳೆಂದು ಪತ್ತೆ ಹಚ್ಚಿದ ತಾಯಿ ಇದು ಅತ್ಯಾಚಾರ ಮತ್ತು ಕೊಲೆ ಎಂದು ಬಿಂಬಿಸಿ, ಪೊಲೀಸರ ಹಾದಿ ತಪ್ಪಿಸಲು ಯತ್ನಿಸಿದ್ದರು. ಆದರೆ, ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ವರದಿಯಲ್ಲಿ ಅತ್ಯಾಚಾರ ನಡೆದಿಲ್ಲ ಎಂಬುದು ದೃಢವಾಗಿ ಬಯಲಿಗೆ ಬಂದಿತು. ತಾಯಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಮಗಳನ್ನು ಬಲಿ ಕೊಟ್ಟದ್ದನ್ನು ಬಾಯ್ಬಿಟ್ಟಿದ್ದಾರೆ.
ಈ ಘಟನೆಯನ್ನು ಜಾರ್ಖಂಡ್ ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದ್ದು, ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net