

ಲಖನೌ: ಪತಿ ಬೇರೊಬ್ಬ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾನೆ. ತನ್ನ ಜೊತೆ ಸರಿಯಾಗಿ ಬೆರೆಯುತ್ತಿಲ್ಲ ಎಂಬ ಅನುಮಾನದ ಮೇಲೆ ಸಿಟ್ಟಿಗೆದ್ದ ಮಹಿಳೆಯೊಬ್ಬಳು, ಪತಿಗೆ ಕಾಫಿಯಲ್ಲಿ ನಿದ್ದೆ ಮಾತ್ರೆ ಬೆರಸಿ ಕೊಟ್ಟಿದ್ದು, ಮಲಗಿದ ಬಳಿಕ ಆತನ ಖಾಸಗಿ ಅಂಗವನ್ನು ಚಾಕುವಿನಿಂದ ಗಾಯಗೊಳಿಸಿದ್ದಾಳೆ.
ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಲಿಸಾಡಿ ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಜೈದ್ ಗಾರ್ಡನ್ ಪ್ರದೇಶದಲ್ಲಿ ವಾಸಿಸುವ ದಂಪತಿಗೆ ಮಕ್ಕಳಿಲ್ಲ. ತನ್ನ ಪತಿಗೆ ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧವಿದೆ. ಆಕೆಯನ್ನು ಮದುವೆಯಾಗುತ್ತಿದ್ದಾನೆ ಎಂದು ಅನುಮಾನ ವ್ಯಕ್ತಪಡಿಸಿ ಪತಿಯನ್ನು ಪ್ರಶ್ನಿಸಿದ್ದಾಳೆ.
ಏತನ್ಮಧ್ಯೆ, ಅ. 8ರಂದು, ಈ ವಿಷಯಕ್ಕೆ ದಂಪತಿಗಳ ನಡುವೆ ವಾಗ್ವಾದ ನಡೆದಿದೆ. ಬಳಿಕ ಪತ್ನಿ ಕಾಫಿಯಲ್ಲಿ ನಿದ್ದೆ ಮಾತ್ರೆ ಬೆರೆಸಿ ತನ್ನ ಪತಿಗೆ ಕೊಟ್ಟಿದ್ದಾಳೆ. ಅದನ್ನು ಕುಡಿದ ನಂತರ ಆತ ಪ್ರಜ್ಞೆ ತಪ್ಪಿದ್ದಾನೆ. ನಂತರ ಆಕೆ ಆತನ ಖಾಸಗಿ ಅಂಗವನ್ನು ಚಾಕುವಿನಿಂದ ಗಾಯಗೊಳಿಸಿ ಪರಾರಿಯಾಗಿದ್ದಾಳೆ.
ವ್ಯಕ್ತಿಯ ಚೀರಾಟ ಕೇಳಿದ ತಾಯಿ ಮತ್ತು ಸಹೋದರಿ ಸಹಾಯಕ್ಕೆ ಧಾವಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಕ್ತಸ್ರಾವ ನಿಲ್ಲಿಸಲು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದು, ಗಾಯಗೊಂಡ ಖಾಸಗಿ ಅಂಗವನ್ನು ಸರಿಪಡಿಸಲು ವೈದ್ಯರು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
ಘಟನೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಬಳಿಕ ಪತಿ ನೀಡಿದ ದೂರಿನನ್ವಯ ಪತ್ನಿಯ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ತನಿಖೆ ನಡೆಯುತ್ತಿದೆ (ಏಜೆನ್ಸೀಸ್).