ಜೀವ ಉಳಿಸಬೇಕಾದ ಸಿರಿಂಜ್‌, ಸ್ಟೆಂಟ್‌ನಿಂದ ಅಪಾಯವೇ? ಭಾರತದಲ್ಲಿ 9,373 ಪ್ರಕರಣ ಪತ್ತೆ, ಕಂಪನಿಗಳ ಹೆಸರು ಮುಚ್ಚಿಟ್ಟಿರುವುದೇಕೆ? Medical Device Safety

ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಾಗ ವೈದ್ಯರು ಬಳಸುವ ಸಿರಿಂಜ್‌, ಸ್ಟೆಂಟ್‌, ಕ್ಯಾತಿಟರ್‌ಗಳೇ ರೋಗಿಗಳಿಗೆ ಅಪಾಯ ತಂದರೆ ಹೇಗೆ? ಇಂತಹ ಆತಂಕಕಾರಿ ಪ್ರಶ್ನೆಯೊಂದಕ್ಕೆ ಕಾರಣವಾಗುವ ವರದಿ ಇದೀಗ ಬಹಿರಂಗವಾಗಿದೆ. ಭಾರತದಲ್ಲಿ ವೈದ್ಯಕೀಯ ಉಪಕರಣಗಳ ಬಳಕೆಯಿಂದ ಸಂಭವಿಸಿರುವ 9,373 ಗಂಭೀರ ಆರೋಗ್ಯ ಸಮಸ್ಯೆಗಳು ದಾಖಲಾಗಿವೆ. ಅದರಲ್ಲೂ ಕೇವಲ ಆರು ವರ್ಷಗಳಲ್ಲಿ ಇಂತಹ ಘಟನೆಗಳ ಸಂಖ್ಯೆ ಸುಮಾರು ಮೂರು ಪಟ್ಟು ಹೆಚ್ಚಾಗಿರುವುದು ಕಳವಳ ಮೂಡಿಸಿದೆ. ಆದರೆ ಈ ಘಟನೆಗಳಿಗೆ ಸಂಬಂಧಿಸಿದ ಉಪಕರಣಗಳನ್ನು ತಯಾರಿಸಿದ ಕಂಪನಿಗಳ ಹೆಸರನ್ನು ಮಾತ್ರ ಬಹಿರಂಗಪಡಿಸಿಲ್ಲ! Medical Device Safety
ಸಿರಿಂಜ್‌, ಸ್ಟೆಂಟ್‌ನಿಂದ ಅಪಾಯ
ಸಿರಿಂಜ್‌, ಸ್ಟೆಂಟ್‌ನಿಂದ ಅಪಾಯWEB
Published on: 

ನವದೆಹಲಿ: ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಾಗ ವೈದ್ಯರು ಬಳಸುವ ಸಿರಿಂಜ್‌, ಸ್ಟೆಂಟ್‌, ಕ್ಯಾತಿಟರ್‌ಗಳೇ ರೋಗಿಗಳಿಗೆ ಅಪಾಯ ತಂದರೆ ಹೇಗೆ? ಇಂತಹ ಆತಂಕಕಾರಿ ಪ್ರಶ್ನೆಯೊಂದಕ್ಕೆ ಕಾರಣವಾಗುವ ವರದಿ ಇದೀಗ ಬಹಿರಂಗವಾಗಿದೆ. ಭಾರತದಲ್ಲಿ ವೈದ್ಯಕೀಯ ಉಪಕರಣಗಳ ಬಳಕೆಯಿಂದ ಸಂಭವಿಸಿರುವ 9,373 ಗಂಭೀರ ಆರೋಗ್ಯ ಸಮಸ್ಯೆಗಳು ದಾಖಲಾಗಿವೆ. ಅದರಲ್ಲೂ ಕೇವಲ ಆರು ವರ್ಷಗಳಲ್ಲಿ ಇಂತಹ ಘಟನೆಗಳ ಸಂಖ್ಯೆ ಸುಮಾರು ಮೂರು ಪಟ್ಟು ಹೆಚ್ಚಾಗಿರುವುದು ಕಳವಳ ಮೂಡಿಸಿದೆ. ಆದರೆ ಈ ಘಟನೆಗಳಿಗೆ ಸಂಬಂಧಿಸಿದ ಉಪಕರಣಗಳನ್ನು ತಯಾರಿಸಿದ ಕಂಪನಿಗಳ ಹೆಸರನ್ನು ಮಾತ್ರ ಬಹಿರಂಗಪಡಿಸಿಲ್ಲ!

ಆಸ್ಪತ್ರೆಗಳಲ್ಲಿ ಬಳಸುವ ವೈದ್ಯಕೀಯ ಉಪಕರಣಗಳ ಸುರಕ್ಷತೆ ಕುರಿತು ಭಾರತೀಯ ಔಷಧಸಂಹಿತೆ ಆಯೋಗ (IPC) ಬಿಡುಗಡೆ ಮಾಡಿರುವ ಅಂಕಿಅಂಶಗಳು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ. 2020ರಿಂದ 2025ರವರೆಗೆ ವೈದ್ಯಕೀಯ ಉಪಕರಣಗಳ ಬಳಕೆಯಿಂದ ಸಂಭವಿಸಿದ 9,373 ಗಂಭೀರ ಪ್ರತಿಕೂಲ ಘಟನೆಗಳ ವರದಿಗಳನ್ನು ಆಯೋಗ ಸ್ವೀಕರಿಸಿ ಪರಿಶೀಲಿಸಿದೆ. ಸೆಪ್ಟೆಂಬರ್ 10ರಂದು ಕೇಂದ್ರ ಮಾಹಿತಿ ಆಯೋಗ ನೀಡಿದ ಆದೇಶದ ಬಳಿಕ ಅಕ್ಟೋಬರ್ 27ರಂದು ಈ ಮಾಹಿತಿ ಲಭ್ಯವಾಗಿದೆ.

ಆರು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಳ

2020ರಲ್ಲಿ 808 ಗಂಭೀರ ಘಟನೆಗಳು ವರದಿಯಾಗಿದ್ದರೆ, 2025ರಲ್ಲಿ ಈ ಸಂಖ್ಯೆ 2,176ಕ್ಕೆ ಏರಿಕೆಯಾಗಿದೆ. ಅಂದರೆ ಆರು ವರ್ಷಗಳಲ್ಲಿ ವರದಿಗಳ ಸಂಖ್ಯೆ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಇಂತಹ ಗಂಭೀರ ಘಟನೆಗಳಿಂದ ರೋಗಿಗಳಿಗೆ ಜೀವಕ್ಕೆ ಅಪಾಯ ಉಂಟಾಗಬಹುದು ಅಥವಾ ದೀರ್ಘಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಪರಿಸ್ಥಿತಿ ಎದುರಾಗಬಹುದು.

ಯಾವ ಕಂಪನಿಯ ಉಪಕರಣದಿಂದ ಸಮಸ್ಯೆ?

ಈ ವರದಿಯಲ್ಲಿ ಅತಿ ಮುಖ್ಯವಾಗಿ ಗಮನ ಸೆಳೆಯುವ ಸಂಗತಿಯೆಂದರೆ, ಯಾವ ಕಂಪನಿಯ ವೈದ್ಯಕೀಯ ಉಪಕರಣದಿಂದ ಸಮಸ್ಯೆ ಉಂಟಾಗಿದೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ತಯಾರಕರ ಹೆಸರು ಮತ್ತು ಬ್ರ್ಯಾಂಡ್‌ಗಳ ವಿವರಗಳನ್ನು ನೀಡದಿರುವುದಕ್ಕೆ ವಾಣಿಜ್ಯ ಗೌಪ್ಯತೆಯ ಕಾರಣವನ್ನು ಮುಂದಿಡಲಾಗಿದೆ. ಅಲ್ಲದೆ, ವರದಿಯಾದ ಪ್ರತಿಯೊಂದು ಆರೋಗ್ಯ ಸಮಸ್ಯೆಗೂ ವೈದ್ಯಕೀಯ ಉಪಕರಣವೇ ನೇರ ಕಾರಣ ಎಂದು ಖಚಿತಪಡಿಸಲಾಗಿಲ್ಲ.

ಇದನ್ನೂ ಓದಿ : ಕೆನಡಾದಲ್ಲಿ ಭಾರತೀಯರಿಗೆ ಬಂಪರ್ ಆಫರ್! 2 ಲಕ್ಷ ತಾತ್ಕಾಲಿಕ ನಿವಾಸಿಗಳಿಗೆ ಪರ್ಮನೆಂಟ್ ರೆಸಿಡೆನ್ಸಿ ಭಾಗ್ಯ, 2027ರೊಳಗೆ ನೆಲೆಸಲು ಅವಕಾಶ...Canada PR

ಸಾವಿರಾರು ವರದಿಗಳಲ್ಲಿ ಕ್ರಮಕ್ಕೆ ಹೋಗಿದ್ದು ಕೆಲವೇ ಪ್ರಕರಣ

ಐಪಿಸಿಯ 2024-25ರ ವಾರ್ಷಿಕ ವರದಿಯಲ್ಲಿ 14,584 ವೈದ್ಯಕೀಯ ಉಪಕರಣಗಳ ಪ್ರತಿಕೂಲ ಘಟನೆಗಳು ದಾಖಲಾಗಿವೆ. ಆದರೆ ಅವುಗಳಲ್ಲಿ ಕೇವಲ 22 ಪ್ರಕರಣಗಳನ್ನು ಹೆಚ್ಚಿನ ಕ್ರಮಕ್ಕಾಗಿ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಗೆ (CDSCO) ಕಳುಹಿಸಲಾಗಿದೆ. ಇದರಲ್ಲಿ ಸಿರಿಂಜ್‌, ಸರ್ಜಿಕಲ್ ಗ್ಲೌಸ್‌ ಮತ್ತು ಮೂತ್ರ ಸಂಗ್ರಹ ಚೀಲಗಳಂತಹ ಉಪಕರಣಗಳೂ ಸೇರಿವೆ.ಹೀಗಾಗಿ ಆಸ್ಪತ್ರೆಗಳಲ್ಲಿ ಪ್ರತಿದಿನ ಬಳಕೆಯಾಗುವ ವೈದ್ಯಕೀಯ ಉಪಕರಣಗಳ ಸುರಕ್ಷತೆ ಮತ್ತು ಅವುಗಳಿಂದ ಉಂಟಾಗುವ ಸಮಸ್ಯೆಗಳ ಕುರಿತು ಪಾರದರ್ಶಕ ಮಾಹಿತಿ ಲಭ್ಯವಾಗಬೇಕೆಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ, ( ಏಜೆನ್ಸೀಸ್​).