ಟಿವಿಕೆ ಸೇರುವ ಊಹಾಪೋಹ; ನಾನು ದ್ರಾವಿಡ ಚಳುವಳಿಗೆ ಸೇರಿದವನು: ವದಂತಿ ತಳ್ಳಿ ಹಾಕಿದ ಮಾಜಿ ಸಿಎಂ ಓ ಪನ್ನೀರ್​ಸೆಲ್ವಂ | O. Panneerselvam

ಮಾಜಿ ಸಿಎಂ ಓ. ಪನ್ನೀರ್ ಸೆಲ್ವಂ
ಮಾಜಿ ಸಿಎಂ ಓ. ಪನ್ನೀರ್ ಸೆಲ್ವಂ
Published on
ಚೆನ್ನೈ: ಜಯಲಲಿತಾ ನಿಷ್ಠ, ಮೂರು ಬಾರಿ ತಮಿಳುನಾಡಿನ ಸಿಎಂ ಆಗಿದ್ದ ಮತ್ತು ಹಾಲಿ ಡಿಎಂಕೆ ಶಾಸಕರಾಗಿರುವ ಮಾಜಿ ಸಿಎಂ ಓ. ಪನ್ನೀರ್ ಸೆಲ್ವಂ(O Panneerselvam) ಆಡಳಿತರೂಢ ಟಿವಿಕೆ ಸೇರಲು ಯೋಚಿಸುತ್ತಿದ್ದಾರೆ ಎಂಬ ವದಂತಿ ಹಬ್ಬಿದ್ದು, ಈ ಕುರಿತು ಮಂಗಳವಾರ(ಜು. 07) ಸ್ವತಃ ಸ್ಪಷ್ಟೀಕರಣ ನೀಡಿರುವ ಅವರು, ನಾನು ದ್ರಾವಿಡ ಚಳುವಳಿಗೆ ಸೇರಿದವನು, ಇದೆಲ್ಲಾ ವದಂತಿ ಎಂದು ತಳ್ಳಿ ಹಾಕಿದ್ದಾರೆ.
ಚೆನ್ನೈನಲ್ಲಿ ಮಾತನಾಡಿರುವ ಅವರು, ಡಿಎಂಕೆ ತೊರೆದು ಟಿವಿಕೆಗೆ ಹೋಗುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದೆಲ್ಲಾ ವದಂತಿಯಾಗಿದೆ. ಇದು ರಾಜಕೀಯ ಕಿಡಿಗೇಡಿಗಳ ಕೈವಾಡ. ಇದರಲ್ಲಿ ಬೇರೇನೂ ಇಲ್ಲ. ಅದನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆಯಿಲ್ಲ ಎಂದು ಹೇಳಿದ್ದಾರೆ.
ತಮಿಳುನಾಡಿನ ರಾಜಕೀಯ ಚರ್ಚೆಯಲ್ಲಿ ನಾಯಕರು ಪಕ್ಷ ಬದಲಾಯಿಸುವ ಬಗ್ಗೆ ಊಹಾಪೋಹಗಳು ಹೆಚ್ಚಾಗಿ ಕಂಡುಬರುತ್ತಿವೆ. ಪಕ್ಷ ಬದಲಾಯಿಸುವುದು ಜನರ ನಂಬಿಕೆಗೆ ದ್ರೋಹ ಬಗೆದಂತೆ. ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳ ಮೂಲ ಸಂಸ್ಥೆ ಡಿಎಂಕೆ. ತಾವು ಅಂತಹ ಚಳವಳಿಗೆ ಸೇರಿದವರು ಎಂದು ತಿಳಿಸಿದ್ದಾರೆ.
ರಾಜಕೀಯ ಕಿಡಿಗೇಡಿಗಳು ಅಗ್ಗದ ವದಂತಿಗಳನ್ನು ಹರಡಬಾರದು. ಜನರು ಈಗಾಗಲೇ ಈ (ಟಿವಿಕೆ) ಸರ್ಕಾರದ ಬಗ್ಗೆ ಕಾಮೆಂಟ್ ಮಾಡಲು ಪ್ರಾರಂಭಿಸಿದ್ದಾರೆ. ಶೀಘ್ರದಲ್ಲೇ ನಾಟಕೀಯ ರಾಜಕೀಯ ಬದಲಾವಣೆಗಳನ್ನು ನಿರೀಕ್ಷಿಸಬಹುದು ಎಂದಿದ್ದಾರೆ.
ಮೂರು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಪನ್ನೀರ್‌ಸೆಲ್ವಂ ಅವರನ್ನು 2022 ರಲ್ಲಿ ಎಐಎಡಿಎಂಕೆಯಿಂದ ಹೊರಹಾಕಲಾಯಿತು. 2026 ಫೆಬ್ರವರಿ 27ರಂದು ಆಗಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಸಮ್ಮುಖದಲ್ಲಿ ಡಿಎಂಕೆ ಸೇರಿದರು. ಮತ್ತು ಹಾಲಿ ತಮ್ಮ ಸ್ವಕ್ಷೇತ್ರದಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net