ಪವನ್ ಕಲ್ಯಾಣ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: 4 ಬಾರಿ ಅರೆಸ್ಟ್, 4 ಬಾರಿ ಬೇಲ್: 5ನೇ ಬಾರಿ UAPA ಅಡಿ ಯೂಟ್ಯೂಬರ್ ಬಂಧಿಸಿದ ಆಂಧ್ರ ಪೊಲೀಸರು

ಪ್ರಶ್ನ ರಾವಣ ಮತ್ತು ಡಿಸಿಎಂ ಪವನ್ ಕಲ್ಯಾಣ್
ಪ್ರಶ್ನ ರಾವಣ ಮತ್ತು ಡಿಸಿಎಂ ಪವನ್ ಕಲ್ಯಾಣ್
Published on
ಅಮರಾವತಿ: ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಯೂಟ್ಯೂಬರ್​ ಒಬ್ಬರನ್ನು ಆಂಧ್ರ ಪ್ರದೇಶ ಪೊಲೀಸರು 4 ದಿನಗಳಲ್ಲಿ 4 ಬಾರಿ ಅರೆಸ್ಟ್ ಮಾಡಿದ್ದು, ನಾಲ್ಕು ಬಾರಿಯೂ ಕೋರ್ಟ್​ ಜಾಮೀನು ನೀಡಿದ ಹಿನ್ನೆಲೆ ಐದನೇ ಬಾರಿ UAPA ಅಡಿ ಬಂಧಿಸಿ ಜೈಲಿಗಟ್ಟಿದ್ದಾರೆ.
ಪ್ರಶ್ನ ರಾವಣ@ ಜೋಸೆಫ್ ಬಚ್ಚಲಕುರಿ ಬಂಧಿತನಾಗಿರುವ ಯೂಟ್ಯೂಬರ್. ಕಳೆದ ತಿಂಗಳ ಕೊನೆಯಲ್ಲಿ ಏಲೂರು ದಲಿತ ಕ್ರೈಸ್ತ ಸಭೆಯಲ್ಲಿ ಮಾತನಾಡಿದ್ದ ರಾವಣ್, ಡಿಸಿಎಂ ಪವನ್ ಕಲ್ಯಾಣ್ ವಿರುದ್ಧ ಆಕ್ಷೇಪಾರ್ಹವಾಗಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ ಜನಸೇನಾ ಕಾರ್ಯಕರ್ತರು ಆತನ ವಿರುದ್ಧ ವಿವಿಧ ಠಾಣೆಗಳಲ್ಲಿ ಸುಮಾರು 35 ದೂರು ದಾಖಲಿಸಿದ್ದಾರೆ.
ಜನಸೇನಾ ಕಾರ್ಯಕರ್ತರು ನೀಡಿದ ದೂರಿನ ಅನ್ವಯ ಜೂ. 30ರಂದು ಪೀಠಾಪುರ ಪೊಲೀಸರು ಮೊದಲು ಹೈದರಾಬಾದ್​ನಲ್ಲಿ ಬಂಧಿಸಿ ಪೀಠಾಪುರಕ್ಕೆ ಕರೆತಂದಿದ್ದರು. ಬಳಿಕ ಜು. 01 ರಂದು ಕೋರ್ಟ್ ಆತನಿಗೆ ಜಾಮೀನು ನೀಡಿತ್ತು. ಬಳಿಕ 2025ರ ಬೇರೆ ಪ್ರಕರಣದಲ್ಲಿ ಸರ್ಪವರಂ ಪೊಲೀಸರು ತಕ್ಷಣವೇ ಮತ್ತೆ ಬಂಧಿಸಿದರು. ಜುಲೈ 2ರಂದು ಮ್ಯಾಜಿಸ್ಟ್ರೇಟ್ ಅದಕ್ಕೂ ಜಾಮೀನು ನೀಡಿದ್ದಾರೆ.
ಹೀಗೆ ನಾನಾ ಪ್ರಕರಣದಲ್ಲಿ ನಾಲ್ಕು ದಿನ 4 ಬಾರಿ ಬಂಧಿಸಿ, 4 ಬಾರಿ ನ್ಯಾಯಾಲಯಗಳು ಜಾಮೀನು ನೀಡಿದ ಬಳಿಕ ಕೊನೆಯದಾಗಿ ಏಳು ತಿಂಗಳ ಹಿಂದೆ ಪ್ರಚೋದನಕಾರಿ ವೀಡಿಯೊವನ್ನು ಅಪ್‌ಲೋಡ್ ಮಾಡಿದ ಆರೋಪದ ಮೇಲೆ ರಾವಣ್​ ವಿರುದ್ಧ ಕಠಿಣ ಯುಎಪಿಎ ಕಾಯ್ದೆಯಡಿ ಬಂದಿಸಿದ್ದಾರೆ.
ಜು. 04ರಂದು ಕೃಷ್ಣ ಜಿಲ್ಲೆಯ ಗನ್ನವರಂ ಪೊಲೀಸರು ಕ್ಕಪಲ್ಲಿಯಲ್ಲಿರುವ ವೆಂಪಡು ಟೋಲ್ ಪ್ಲಾಜಾದಲ್ಲಿ ರಾವಣ್ ಅವರನ್ನು ಬಂಧಿಸಿದರು. ಬಳಿಕ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು, ನ್ಯಾಯಾಲಯವು ಅವರಿಗೆ 14 ದಿನಗಳ ರಿಮಾಂಡ್ ನ್ನು ವಿಧಿಸಿದೆ. ಇಂದು ಬೆಳಗ್ಗೆ ಗನ್ನವರಂ ಪೊಲೀಸರು ಆತನನ್ನು ನೆಲ್ಲೂರು ಕೇಂದ್ರ ಕಾರಾಗೃಹಕ್ಕೆ ಹಸ್ತಾಂತರಿಸಿದ್ದಾರೆ.
2025 ನವೆಂಬರ್ 25ರಂದು ಪ್ರಶ್ನ ರಾವಣ್ ತನ್ನ ಯೂಟ್ಯೂಬ್​ ಚಾನಲ್​ನಲ್ಲಿ ಪೋಸ್ಟ್​ ಮಾಡಿದ ವಿಡಿಯೋ ಒಂದು ತುಂಬಾ ಪ್ರಚೋದನಕಾರಿ ಸ್ವರೂಪದ್ದಾಗಿದ್ದು, ಅದು ಮಾವೋವಾದಿಗಳಂತಹ ನಿಷೇಧಿತ ಸಂಘಟನೆಗಳನ್ನು ಬೆಂಬಲಿಸುತ್ತದೆ ಮತ್ತು ಪ್ರೋತ್ಸಾಹಿಸುತ್ತದೆ. ವೀಡಿಯೊದಲ್ಲಿ ಹಿಡ್ಮಾ, ಕೇಶವ ರಾವ್ ಸೇರಿ ಇತರೆ ಎನ್‌ಕೌಂಟರ್ ಆದ ಮಾವೋವಾದಿಗಳ ಚಿತ್ರಗಳನ್ನು ಸೇರಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ರಾವಣ್ ಬಂಧನದ ವಿರುದ್ಧ ಜಗನ್ ಕಿಡಿ

ಇನ್ನೂ ಯೂಟ್ಯೂಬರ್ ಪ್ರಶ್ನ ರಾವಣ ಬಂಧನ ಹಿನ್ನೆಲೆ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ, ಟಿಡಿಪಿ ನೇತೃತ್ವದ ಎನ್​ಡಿಎ ಸರ್ಕಾರ ಮತ್ತು ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಯೂಟ್ಯೂಬರ್ ಬಂಧನ ಪ್ರಕರಣದಲ್ಲಿ ಅವರ ವಿರುದ್ಧ ದಾಖಲಾಗಿದ್ದ ನಾಲ್ಕು ವಿಭಿನ್ನ ಪ್ರಕರಣಗಳಲ್ಲಿ ನ್ಯಾಯಾಲಯಗಳಿಂದ ಜಾಮೀನು ಪಡೆದ ನಂತರವೂ, ದುರಹಂಕಾರದಿಂದ ಭಯೋತ್ಪಾದಕರ ವಿರುದ್ಧ ಬಳಸಲಾಗುವ ಸೆಕ್ಷನ್​ ಅಡಿ ಬಂಧಿಸಿ ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆಯನ್ನು ಅತ್ಯಂತ ಅಪಾಯಕಾರಿ ಹಾದಿಗೆ ತಳ್ಳಿ, ರಾಜಕೀಯ ದಬ್ಬಾಳಿಕೆ ನಡೆಸಿ ತಮ್ಮ ಸರ್ಕಾರವನ್ನು ಪ್ರಶ್ನಿಸುವವರ ಬಾಯಿ ಮುಚ್ಚಿಸಿದ್ದಾರೆ ಎಂದು ಸಿಎಂ ನಾಯ್ಡು, ಪವನ್ ಕಲ್ಯಾಣ್, ನಾರಾ ಲೋಕೇಶ್ ವಿರುದ್ಧ ಕಿಡಿಕಾರಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net