2027ರ ಯುಪಿ ಚುನಾವಣೆಯಲ್ಲಿ ಎಸ್​ಪಿ ದಾಖಲೆ ಸ್ಥಾನಗಳಲ್ಲಿ ಗೆದ್ದು ಅಧಿಕಾರಕ್ಕೇರಲಿದೆ: ಅಖಿಲೇಶ್ ಯಾದವ್ ವಿಶ್ವಾಸ | Akhilesh Yadav

2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವೂ ದಾಖಲೆ ಸ್ಥಾನಗಳಲ್ಲಿ ಗೆದ್ದು ಅಧಿಕಾರಕ್ಕೇರಲಿದೆ ಎಂದು ಎಸ್​ಪಿ ಮುಖ್ಯಸ್ಥ ಮತ್ತು ಮಾಜಿ ಸಿಎಂ ಅಖಿಲೇಶ್ ಯಾದವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Akhilesh Yadav
ಅಖಿಲೇಶ್ ಯಾದವ್
Published on

ಲಖನೌ: 2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವೂ ದಾಖಲೆ ಸ್ಥಾನಗಳಲ್ಲಿ ಗೆದ್ದು ಅಧಿಕಾರಕ್ಕೇರಲಿದೆ ಎಂದು ಎಸ್​ಪಿ ಮುಖ್ಯಸ್ಥ ಮತ್ತು ಮಾಜಿ ಸಿಎಂ ಅಖಿಲೇಶ್ ಯಾದವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಣದುಬ್ಬರ ಮತ್ತು ನಿರುದ್ಯೋಗ ಸಮಸ್ಯೆಗೆ ಬಿಜೆಪಿ ಬಳಿ ಯಾವುದೇ ಪರಿಹಾರವಿಲ್ಲ. ಕಾನೂನು ಸುವ್ಯವಸ್ಥೆ ಕುಸಿದಿದೆ ಮತ್ತು ಭ್ರಷ್ಟಾಚಾರ ಉತ್ತುಂಗದಲ್ಲಿದೆ. ಸಾರ್ವಜನಿಕರು ಬಿಜೆಪಿ ವಿರುದ್ಧ ಇದ್ದಾರೆ, ಅದಕ್ಕಾಗಿಯೇ ಅದು ನಕಾರಾತ್ಮಕ ಪ್ರಚಾರಕ್ಕೆ ಇಳಿದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

Also Read
ಅಮೆರಿಕದ ಸಾಂಪ್ರದಾಯಿಕ ಮಾಧ್ಯಮಗಳಿಗೆ ಸೆಡ್ಡು ಹೊಡೆದ ಡೊನಾಲ್ಡ್ ಟ್ರಂಪ್: ತನ್ನದೇ ಹೆಸರಿನ ಟ್ರಂಪ್ ಟಿವಿ 24/7 ಸ್ಟ್ರೀಮಿಂಗ್ ಆರಂಭ | Donald Trump
Akhilesh Yadav

ಬಿಜೆಪಿ ಸರ್ಕಾರವು ಪಿಡಿಎ ವರ್ಗದವರನ್ನು ಅವರ ಹಕ್ಕುಗಳಿಂದ ವಂಚಿತರನ್ನಾಗಿಸಿದೆ. 11,000ಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷವು ಲೆಕ್ಕಪರಿಶೋಧನಾ ವರದಿಯನ್ನು ಬಿಡುಗಡೆ ಮಾಡಿದ್ದರೂ, ಸರ್ಕಾರವು ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ 20ಕ್ಕೂ ಹೆಚ್ಚು ನೇಮಕಾತಿ ಪರೀಕ್ಷಾ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ. ಹೊರಗುತ್ತಿಗೆ ಪದ್ದತಿಯನ್ನು ಉತ್ತೇಜಿಸುವ ಉದ್ದೇಶದಿಂದಲೇ ಇದನ್ನು ಮಾಡಲಾಗುತ್ತಿದೆ ಎಂದು ಪ್ರತಿಪಾದಿಸಿದ್ದಾರೆ. ಸರ್ಕಾರಿ ನೇಮಕಾತಿಗಳಲ್ಲಿ ಮೀಸಲಾತಿ ಮತ್ತು ನಿಯಮಿತ ವೇತನವನ್ನು ಕಲ್ಪಿಸಬೇಕಾಗುತ್ತದೆ. ಆದರೆ ಹೊರಗುತ್ತಿಗೆ ಪದ್ಧತಿಯಲ್ಲಿ ನೇಮಕಾತಿ ಮತ್ತು ವೇತನ ಪಾವತಿಯ ಜವಾಬ್ದಾರಿಯನ್ನು ಏಜೆನ್ಸಿಗಳು ನಿರ್ವಹಿಸುತ್ತವೆ ಎಂದಿದ್ದಾರೆ.

ಸರ್ಕಾರವು ಪಿಡಿಎ ಸಮುದಾಯಗಳನ್ನು ಉದ್ದೇಶಪೂರ್ವಕವಾಗಿ ಅವಮಾನಿಸುತ್ತಿದೆ. ರಾಜ್ಯದ ಹಲವೆಡೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗಳಿಗೆ ಹಾನಿ ಮಾಡಲಾಗಿದೆ. ಪರಿಣಾಮಕಾರಿ ಕ್ರಮ ಕೈಗೊಳ್ಳದೆ, ಗುರುತು ಪತ್ತೆಯಾಗದ ವ್ಯಕ್ತಿಗಳ ವಿರುದ್ಧ ಆಗಾಗ್ಗೆ ಎಫ್‌ಐಆರ್ ದಾಖಲಿಸಲಾಗುತ್ತಿದೆ ಎಂದು ದೂರಿದ್ದಾರೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net