

ವಾಷಿಂಗ್ಟನ್: ಅಮೆರಿಕದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅಲ್ಲಿನ ಮಾಧ್ಯಮಗಳ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಸಾಂಪ್ರದಾಯಿಕ ಮಾಧ್ಯಮಗಳಿಗೆ ಸೆಡ್ಡು ಹೊಡೆದಿರುವ ಟ್ರಂಪ್, ದೇಶದ ಜನರಿಗೆ ತಲುಪಲು ತನ್ನದೇ ಹೆಸರಿನ ಟ್ರಂಪ್ ಟಿವಿ 24/7 ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಅನ್ನು ಅಧಿಕೃವಾಗಿ ಆರಂಭಿಸಿದ್ದಾರೆ.
ಇತ್ತೀಚಿಗೆ ಸುಳ್ಳು ಸುದ್ದಿ, ತಪ್ಪು ವರದಿಗಾರಿಕೆ ಹಾಗೂ ಪಕ್ಷಪಾತದಿಂದ ವರ್ತಿಸುತ್ತಿವೆ ಎಂದು ಆರೋಪಿಸಿ ಟ್ರಂಪ್, ಸಿಎನ್‌ಎನ್, ಎಂಎಸ್ ನೌ ಹಾಗೂ ಪೊಲಿಟಿಕೊ ಎಂಬ ಮೂರು ಸುದ್ದಿ ಚಾನಲ್ಗಳಿಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಆದೇಶ ಹೊರಡಿಸಿದ್ದರು. ಇದನ್ನು ಖಂಡಿಸಿ ಸೆ. 21ರಂದು ಮೂರು ಮಾಧ್ಯಮ ಸಂಸ್ಥೆಗಳು ಜಂಟಿಯಾಗಿ ಕೋರ್ಟ್ ಮೆಟ್ಟಿಲೇರಿವೆ.
ಶ್ವೇತಭವನದ ಈ ನಡೆ ಸಂವಿಧಾನದ ಮೊದಲ ತಿದ್ದುಪಡಿಯಡಿ ತಮಗೆ ನೀಡಲಾಗಿರುವ ವಾಕ್ ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನೆ ಎಂದು ಆರೋಪಿಸಿವೆ. ಜೊತೆಗೆ ಇತರೆ ಪ್ರಮುಖ ಮಾಧ್ಯಮ ಸಂಸ್ಥೆಗಳಾದ ಎಬಿಸಿ, ಸಿಬಿಎಸ್, ಫ್ಯಾಕ್ಸ್ ನ್ಯೂಸ್ ಹಾಗೂ ಎನ್ಬಿಸಿ ಸುದ್ದಿ ಸಂಸ್ಥೆಗಳು ಸಹ ಶ್ವೇತ ಭವನದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿವೆ.
ಈ ವಿವಾದ ನಡುವೆ ಶ್ವೇತಭವನ, ಟ್ರಂಪ್ ಟಿವಿ: ದಿ ಎಸ್ಸೆನ್ಷಿಯಲ್ ಸ್ಟೇಷನ್ ಹೆಸರಿನ 24/7 ಡಿಜಿಟಲ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಅನ್ನು ಅಧಿಕೃತವಾಗಿ ಪ್ರಾರಂಭಿಸಿದೆ. ಇದು ಡೊನಾಲ್ಡ್ ಟ್ರಂಪ್ ಅವರ ಭಾಷಣಗಳು, ಆಡಳಿತ ಪ್ರಕಟಣೆಗಳು ಮತ್ತು ನವೀಕರಣಗಳನ್ನು ಪ್ರಸಾರ ಮಾಡುವ ವೇದಿಕೆಯಾಗಿದೆ.
ಈ ಕುರಿತು ಎಕ್ಸ್ನಲ್ಲಿ ಟ್ರಂಪ್ ಟಿವಿ ಬಿಡುಗಡೆ ಮಾಡುತ್ತಾ ಶ್ವೇತಭವನ, ಇದು ನೇರಪ್ರಸಾರವಾಗಿದೆ. ಟ್ರಂಪ್ ಟಿವಿ ಈಗ ಸ್ಟ್ರೀಮ್ ಆಗುತ್ತಿದೆ. ಹಿಂದಿನ ಪ್ರಮುಖ ಕ್ಷಣಗಳು, ಪ್ರಕಟಣೆಗಳು ಹಾಗೂ ಆಡಳಿತದ ಇತ್ತೀಚಿನ ಮಾಹಿತಿಗಳನ್ನು ನೈಜ ಸಮಯದಲ್ಲಿ ಒಂದೇ ಸ್ಥಳದಲ್ಲಿ ನೀಡಲಾಗುತ್ತಿದೆ. ನಿಮ್ಮ ಟಿವಿಯಲ್ಲಿ ಪ್ರಸಾರವಾಗದ ಹಲವು ಪ್ರಮುಖ ಕ್ಷಣಗಳನ್ನು ಇದೀಗ ಇಲ್ಲಿ ವೀಕ್ಷಿಸಬಹುದು ಎಂದು ಹೇಳಿದೆ.
ಚಾನಲ್ ಆರಂಬಿಸುವಾಗ ಡೊನಾಲ್ಡ್ ಟ್ರಂಪ್ ಅವರ ಹಿಂದಿನ ಸಾರ್ವಜನಿಕ ಪ್ರದರ್ಶನಗಳು ಮತ್ತು ಭಾಷಣಗಳ ದೃಶ್ಯಗಳನ್ನು ಹಾಗೂ ಅವರು 47ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭವನ್ನು ಪ್ರಸಾರ ಮಾಡಲಾಗಿದೆ.
ಸೋಮವಾರ ನ್ಯೂಯಾರ್ಕ್ಗೆ ಭೇಟಿ ನೀಡಿದ ವೇಳೆ ಮೂರು ಚಾನಲ್ಗಳಿಗೆ ಶ್ವೇತಭವನ ಪ್ರವೇಶಕ್ಕೆ ನಿಷೇಧಿಸಿದ್ದನ್ನು ಸಮರ್ಥಿಸಿಕೊಂಡ ಡೊನಾಲ್ಡ್ ಟ್ರಂಪ್, ಮಾಧ್ಯಮಗಳು ತಮ್ಮನ್ನು ಬಹಿಷ್ಕರಿಸಬಹುದು ಎಂಬ ಮಾತನ್ನು ತಳ್ಳಿ ಹಾಕಿದರು. ಅವರು ನನ್ನನ್ನು ಬಹಿಷ್ಕರಿಸುವುದಾಗಿ ಹೇಳಿದ್ದರು, ಆದರೆ ಅವರು ಎಂದಿಗೂ ನನ್ನನ್ನು ಬಹಿಷ್ಕರಿಸಲಿಲ್ಲ. ಹಾಗಾಗಿ ನಾನು ಅದರ ಬಗ್ಗೆ ಹೆಚ್ಚು ಚಿಂತಿಸಲಿಲ್ಲ. ಸ್ಥಳದಲ್ಲಿದ್ದ ಪತ್ರಕರ್ತರನ್ನು ತೋರಿಸಿ ಈ ಎಲ್ಲಾ ಪರ್ತಕರ್ತರನ್ನು ನೋಡಿ ಎಂದು ಹೇಳಿದ್ದಾರೆ.
ಮಾಧ್ಯಮಗಳು ನ್ಯಾಯಯುತವಾಗಿ ವರದಿ ಮಾಡುವ ಬಾಧ್ಯತೆಯನ್ನು ಹೊಂದಿವೆ ಎಂದ ಅವರು, ಆದರೆ ಅವರು ಸುಳ್ಳು ಸುದ್ದಿ ಪ್ರಕಟಿಸುತ್ತಿದ್ದಾರೆ ಎಂದು ಆರೋಪಿಸಿ ಮೂರು ಚಾನಲ್ಗಳನ್ನು ನಿರ್ಬಂಧಿಸುವ ತಮ್ಮ ಆಡಳಿತದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಮಾಧ್ಯಮಗಳು ನ್ಯಾಯಯುತವಾಗಿರುವ ಬಾಧ್ಯತೆಯನ್ನು ಹೊಂದಿವೆ ಎಂದು ನಾನು ಭಾವಿಸುತ್ತೇನೆ. ಅವು ಸುಳ್ಳು ಸುದ್ದಿ ನೀಡುತ್ತಿದ್ದರೆ, ಅತ್ಯಂತ ವಿಶೇಷವಾದ ಸ್ಥಳವಾದ ಶ್ವೇತಭವನಕ್ಕೆ ಅವುಗಳಿಗೆ ಅವಕಾಶ ನೀಡದಿರುವುದು ನನ್ನ ಹೊಣೆ ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).