

ನವದೆಹಲಿ: ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯದ ನಿರ್ಮಾಣಕ್ಕೆ ಸಂಬಂಧಿಸಿದ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಇಡಿಯಿಂದ ಬಂಧನಕ್ಕೊಳಗಾಗಿರುವ ಎಸ್‌ಪಿ ಹಿರಿಯ ನಾಯಕ ಅಜಂ ಖಾನ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ಎರಡು ಪ್ಯಾನ್ ಕಾರ್ಡ್ ವಂಚನೆ ಪ್ರಕರಣದಲ್ಲಿ 11 ತಿಂಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದ ಬಳಿಕ ಅ. 31ರಂದು ಜಾಮೀನಿನ ಮೇಲೆ ರಾಂಪುರ ಜೈಲಿನಿಂದ ಹೊರ ಬರುತ್ತಿದ್ದಂತೆ ಜಾರಿ ನಿರ್ದೇಶನಾಲಯ (ED) ಹೊಸ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಅವರನ್ನು ಬಂಧಿಸಿತ್ತು.
ತಮ್ಮ ಬಂಧನವನ್ನು ಪ್ರಶ್ನಿಸಿ ಅಜಂ ಖಾನ್ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯವು ಅರ್ಜಿ ವಿಚಾರಣೆಗೆ ಒಪ್ಪಿಗೆ ನೀಡಿದೆ. ಖಾನ್ ಅವರ ವಕೀಲ ನಿಜಾಮ್ ಪಾಷಾ ಅವರ ಸಲ್ಲಿಕೆಗಳನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ ಮೋಹನ ಅವರನ್ನೊಳಗೊಂಡ ಪೀಠವು ವಾರದೊಳಗೆ ಅರ್ಜಿ ವಿಚಾರಣೆ ನೆಡಸಲಾಗುವುದು ಎಂದು ತಿಳಿಸಿದೆ.
ಇನ್ನೂ ಭಾನುವಾರ ಅಜಂ ಖಾನ್ ಅವರನ್ನು ಗಾಜಿಯಾಬಾದ್‌ನ ವಿಶೇಷ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ.
ರಾಂಪುರದಲ್ಲಿ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯದ ನಿರ್ಮಾಣಕ್ಕೆ 416.14 ಕೋಟಿ ರೂಪಾಯಿಗಳನ್ನು ವಿವರಿಸಲಾಗದಂತೆ ಖರ್ಚು ಮಾಡಿರುವ ಆರೋಪದ ಮೇಲೆ ಎಸ್‌ಪಿ ನಾಯಕನನ್ನು ಜೈಲಿನಲ್ಲಿ ದೀರ್ಘಕಾಲ ವಿಚಾರಣೆ ನಡೆಸಿದ ನಂತರ, ಅಕ್ಟೋಬರ್ 14 ರಂದು ಇಡಿ ಅಜಂ ಖಾನ್, ಮೌಲಾನಾ ಮೊಹಮ್ಮದ್ ಅಲಿ ಜೌಹರ್ ಟ್ರಸ್ಟ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿದೆ (ಏಜೆನ್ಸೀಸ್).