12 ವರ್ಷಗಳಲ್ಲಿ ದೇಶದ ಪ್ರಜಾಪ್ರಭುತ್ವಕ್ಕೆ ದೊಡ್ಡ ಹಾನಿ!: ಮೋದಿಯಿಂದ ನಾವೇನೂ ಕಲಿಯಬೇಕಿಲ್ಲ ಎಂದು ಸೋನಿಯಾ ಗಾಂಧಿ ಆಕ್ರೋಶ! | Sonia Gandhi

ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ
ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ
Published on: 

ನವದೆಹಲಿ: ಬಿಜೆಪಿ, ಆರ್‌ಎಸ್‌ಎಸ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಬೆಳವಣಿಗೆಯಿಂದ ಕಾಂಗ್ರೆಸ್ ಪಕ್ಷವು ಕಲಿಯಬೇಕಾದದ್ದು ಏನೂ ಇಲ್ಲ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಕಡ್ಡಿ ಮುರಿದಂತೆ ಹೇಳಿದ್ದಾರೆ. ಕಳೆದ 12 ವರ್ಷಗಳ ಬಿಜೆಪಿ ಆಡಳಿತದಲ್ಲಿ ಭಾರತದ ಪ್ರಜಾಪ್ರಭುತ್ವದ ಆಶಯಗಳಿಗೆ ಮತ್ತು ಸಾಂವಿಧಾನಿಕ ಸಂಸ್ಥೆಗಳಿಗೆ ದೊಡ್ಡ ಮಟ್ಟದ ಹಾನಿ ಉಂಟಾಗಿದೆ ಎಂದು ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಸೋನಿಯಾ ಗಾಂಧಿ ಅವರ ಆತ್ಮಕಥೆ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಪುಸ್ತಕ ಬಿಡುಗಡೆಯ ಒಂದು ದಿನ ಮುಂಚಿತವಾಗಿ ದಿ ಹಿಂದೂ ಪತ್ರಿಕೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಅವರು ಈ ಪ್ರಮುಖ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ವ್ಯವಸ್ಥೆ ಸರಿಹೋಗಲು ಸಮಯ ಬೇಕು!

ಕಳೆದ 12 ವರ್ಷಗಳ ಬಿಜೆಪಿ ಆಡಳಿತದ ಕುರಿತು ಮಾತನಾಡಿದ ಸೋನಿಯಾ ಗಾಂಧಿ, ನಮ್ಮ ದೇಶದ ಸಾಮಾಜಿಕ ಸೌಹಾರ್ದತೆ, ಪ್ರಜಾಪ್ರಭುತ್ವ ಮತ್ತು ದೇಶದ ಪ್ರಮುಖ ಸಂಸ್ಥೆಗಳಿಗೆ ಅಪಾರ ಹಾನಿಯಾಗಿದೆ. ಈ ಸರ್ಕಾರ ತೊಲಗಿದ ನಂತರವೂ ನಮ್ಮ ಸಾಂವಿಧಾನಿಕ ವ್ಯವಸ್ಥೆಯನ್ನು ಮತ್ತೆ ಹಳಗೆ ತರಲು ಸಾಕಷ್ಟು ಸಮಯ ಹಾಗೂ ರಾಜಕೀಯ ಪಕ್ಷಗಳಿಂದ ಅಪಾರ ಶ್ರಮದ ಅಗತ್ಯವಿದ್ದು, ಕಾಲಕ್ರಮೇಣ ಭಾರತೀಯ ವ್ಯವಸ್ಥೆಯು ಮತ್ತೆ ಸರಿಯಾದ ಆಡಳಿತಕ್ಕೆ ಮರಳುತ್ತದೆ ಎಂಬ ಭರವಸೆ ತಮಗಿದೆ ಎಂದು ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ.

Also Read
ಹೌದು, ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಸಿದಿದ್ದು ನಿಜ!: ತುರ್ತು ಪರಿಸ್ಥಿತಿಯ ಕಹಿ ಸತ್ಯ ಒಪ್ಪಿಕೊಂಡ ಸೋನಿಯಾ ಗಾಂಧಿ | Sonia Gandhi
ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ

ಪ್ರಧಾನಿ ಮೋದಿ ಕುರಿತ ಪ್ರಶ್ನೆಗೆ ಉತ್ತರಿಸಿದ ಸೋನಿಯಾ, ನರೇಂದ್ರ ಮೋದಿ ಅವರು ಸಂಪೂರ್ಣ ಭಿನ್ನವಾದ ವೈಚಾರಿಕ ಹಿನ್ನೆಲೆಯಿಂದ ಬಂದವರು ಎಂಬುದು ನಿಜ. ಆದರೆ ಕಾಂಗ್ರೆಸ್ ಪಕ್ಷದೊಳಗೆ ಡಾ. ಮನಮೋಹನ್​ ಸಿಂಗ್ ಹಾಗೂ ಪ್ರಸ್ತುತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಂತಹ ನಾಯಕರು ರಾಜಕೀಯವಾಗಿ ಯಶಸ್ಸು ಕಂಡ ಅನೇಕ ಉದಾಹರಣೆಗಳಿವೆ. ಆದ್ದರಿಂದ ನಾವು ಆರ್‌ಎಸ್‌ಎಸ್‌ನಿಂದ ಕಲಿಯಬೇಕಾದದ್ದು ಏನೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

2004ರ ಪ್ರಧಾನಿ ಹುದ್ದೆಯ ಬಗ್ಗೆ ಸೋನಿಯಾ ಮಾತು

2004ರಲ್ಲಿ ತಾವು ಪ್ರಧಾನಿ ಹುದ್ದೆಯನ್ನು ಸ್ವೀಕರಿಸಿದ್ದರೆ ಯುಪಿಎ ಸರ್ಕಾರದ ಕಾರ್ಯತಂತ್ರ ಬದಲಾಗುತ್ತಿತ್ತೇ ಎಂಬ ಪ್ರಶ್ನೆಗೆ, ಅಂತಹ ಆಲೋಚನೆ ನನ್ನ ಮನಸ್ಸಿನಲ್ಲಿ ಎಂದಿಗೂ ಬರಲಿಲ್ಲ ಎಂದು ಸೋನಿಯಾ ಉತ್ತರಿಸಿದ್ದಾರೆ. ಯುಪಿಎ ಆಡಳಿತದ ನಮ್ಮ ಅನುಭವವು ಒಟ್ಟಾರೆಯಾಗಿ ಅತ್ಯಂತ ಧನಾತ್ಮಕವಾಗಿತ್ತು. ನಾವು ಒಂದು ತಂಡವಾಗಿ ಕೆಲಸ ಮಾಡಿದೆವು. ಡಾ. ಮನ್ಮೋಹನ್ ಸಿಂಗ್ ಅವರು ಸರ್ಕಾರವನ್ನು ಮುನ್ನಡೆಸಿದರೆ, ನಾನು ಪಕ್ಷವನ್ನು ಮುನ್ನಡೆಸಿದೆ. ನಮ್ಮ ಪಾತ್ರಗಳು ಸ್ಪಷ್ಟವಾಗಿದ್ದವು ಎಂದು ಅವರು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ದೇಶದ ಪ್ರಮುಖ ಮಾಧ್ಯಮಗಳು ಹಾಗೂ ಭಾರತೀಯ ಚುನಾವಣಾ ಆಯೋಗ ಸೇರಿದಂತೆ ಇಡೀ ಚುನಾವಣಾ ಯಂತ್ರಗಳನ್ನು ಬಿಜೆಪಿ ತನ್ನ ವಶಕ್ಕೆ ತೆಗೆದುಕೊಂಡಿದೆ, ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿರೋಧ ಪಕ್ಷಗಳಿಗೆ ಸಮಾನ ಅವಕಾಶಗಳು ಸಿಗುತ್ತಿಲ್ಲ ಎಂದು ಸೋನಿಯಾ ಆರೋಪಿಸಿದ್ದಾರೆ.

ಇತ್ತೀಚಿನ ತಿಂಗಳುಗಳಲ್ಲಿ ಅನೇಕ ಚುನಾವಣೆಗಳನ್ನು ಅಕ್ರಮವಾಗಿ ಗೆಲ್ಲಲಾಗಿದೆ ಎಂಬುದು ಸಾಬೀತಾಗಿದೆ. ಈ ಬಗ್ಗೆ ಜನರಲ್ಲಿ ಈಗ ಜಾಗೃತಿ ಮೂಡುತ್ತಿದೆ. ಈ ಎಲ್ಲ ದಾಳಿಗಳು ಮತ್ತು ಸವಾಲುಗಳ ನಡುವೆಯೂ ನಿಂತು ಹೋರಾಡುತ್ತಿರುವ ಏಕೈಕ ಪಕ್ಷ ಕಾಂಗ್ರೆಸ್. ನಾವು ಸಮಾನ ಮನಸ್ಕ ಪಕ್ಷಗಳೊಂದಿಗೆ ಸೇರಿ ಕೆಲಸ ಮಾಡುತ್ತಿದ್ದು, ದಿನದಿಂದ ದಿನಕ್ಕೆ ನಮ್ಮ ಬಲ ಹೆಚ್ಚಾಗುತ್ತಿದೆ ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾರ್ಪರ್‌ಕಾಲಿನ್ಸ್ ಇಂಡಿಯಾ ಪ್ರಕಟಿಸಿರುವ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಸೋನಿಯಾ ಗಾಂಧಿ ಅವರ ವೈಯಕ್ತಿಕ ಜೀವನದ ಆತ್ಮಕಥೆಯಾಗಿದ್ದು, ಇಟಲಿಯ ವೆನೆಟೋದಲ್ಲಿನ ಅವರ ಬಾಲ್ಯದಿಂದ ಹಿಡಿದು 1965ರಲ್ಲಿ ಕೆಂಬ್ರಿಡ್ಜ್‌ನಲ್ಲಿ ರಾಜೀವ್ ಗಾಂಧಿ ಅವರನ್ನು ಭೇಟಿಯಾದ ಕ್ಷಣಗಳವರೆಗಿನ ಸುದೀರ್ಘ ಪಯಣವನ್ನು ಒಳಗೊಂಡಿದೆ(ಏಜೆನ್ಸೀಸ್​).