ಹೌದು, ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಸಿದಿದ್ದು ನಿಜ!: ತುರ್ತು ಪರಿಸ್ಥಿತಿಯ ಕಹಿ ಸತ್ಯ ಒಪ್ಪಿಕೊಂಡ ಸೋನಿಯಾ ಗಾಂಧಿ | Sonia Gandhi

ತುರ್ತು ಪರಿಸ್ಥಿತಿಯ ಕಹಿ ಸತ್ಯ ಒಪ್ಪಿಕೊಂಡ ಸೋನಿಯಾ ಗಾಂಧಿ
ತುರ್ತು ಪರಿಸ್ಥಿತಿಯ ಕಹಿ ಸತ್ಯ ಒಪ್ಪಿಕೊಂಡ ಸೋನಿಯಾ ಗಾಂಧಿ
Published on: 

ನವದೆಹಲಿ: ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರು 1975ರ ತುರ್ತು ಪರಿಸ್ಥಿತಿಯ ಅತಿರೇಕಗಳಿಗೆ ಕೇವಲ ಸಂಜಯ್ ಗಾಂಧಿ ಅವರನ್ನೇ ಹೊಣೆಗಾರರನ್ನಾಗಿ ಮಾಡುವುದನ್ನು ಖಂಡಿಸಿದ್ದು, ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಮೇಲೆ ಹಿರಿಯ ನಾಯಕರ ತೀವ್ರ ಒತ್ತಡವಿತ್ತು ಎಂದು ದಿ ಹಿಂದೂ ಪತ್ರಿಕೆಯ ಎನ್. ರಾಮ್ ಅವರೊಂದಿಗಿನ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಸೋನಿಯಾ ಗಾಂಧಿ ಅವರ ಆತ್ಮಕಥೆ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ನವೆಂಬರ್ 10 ರಂದು ಜಾಗತಿಕವಾಗಿ ಬಿಡುಗಡೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅವರು ನೀಡಿರುವ ಸಂದರ್ಶನ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.

ಜನಮಾನಸದಲ್ಲಿ ಸಂಜಯ್ ಗಾಂಧಿ ಅವರ ಹೆಸರು ತುರ್ತು ಪರಿಸ್ಥಿತಿಯ ಅತಿರೇಕಗಳಿಗೆ ಸಮಾನಾರ್ಥಕವಾಗಿ ನೋಡಲ್ಪಟ್ಟರೂ, ನಿಜಾಂಶವೆಂದರೆ ಅಂದಿನ ಹಿರಿಯ ನಾಯಕರು ಇಂದಿರಾ ಗಾಂಧಿಯವರ ಮೇಲೆ ಅಪಾರ ಒತ್ತಡ ಹೇರಿದ್ದರು ಎಂದು ಸೋನಿಯಾ ಗಾಂಧಿ ವಿವರಿಸಿದ್ದಾರೆ.

Also Read
ಭಾರತಕ್ಕೂ ಬಾಂಗ್ಲಾ-ನೇಪಾಳದ ಗತಿ! ಕಾಂಗ್ರೆಸ್ ಸಚಿವ ಅನ್ಸಾರಿ ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ಆಕ್ರೋಶ | Irfan Ansari Statement
ತುರ್ತು ಪರಿಸ್ಥಿತಿಯ ಕಹಿ ಸತ್ಯ ಒಪ್ಪಿಕೊಂಡ ಸೋನಿಯಾ ಗಾಂಧಿ

ಆ ಸಮಯದಲ್ಲಿ ರಾಜೀವ್ ಗಾಂಧಿ ಅವರಂತೆ ಭಿನ್ನ ಅಭಿಪ್ರಾಯ ಹೊಂದಿದ್ದವರು ಇಂದಿರಾ ಜಿ ಅವರ ಸುತ್ತಲೂ ಅತ್ಯಂತ ಕಡಿಮೆ ಜನರಿದ್ದರು, ರಾಜೀವ್ ಅವರು ತಾವು ಜನರಿಂದ ಕೇಳಿದ ಕುಂದುಕೊರತೆಗಳು ಮತ್ತು ನೈಜ ಪ್ರತಿಕ್ರಿಯೆಗಳನ್ನು ತಮ್ಮ ತಾಯಿಗೆ (ಇಂದಿರಾ ಗಾಂಧಿ) ತಲುಪಿಸುತ್ತಿದ್ದರು. ಕಾಲಕ್ರಮೇಣ ಇಂದಿರಾ ಗಾಂಧಿ ಪರಿಸ್ಥಿತಿಯ ಗಂಭೀರತೆಯನ್ನು ಗ್ರಹಿಸಿ, ಸೂಕ್ತ ತಿದ್ದುಪಡಿ ಕ್ರಮಗಳನ್ನು ಕೈಗೊಂಡರು ಎಂದು ಸೋನಿಯಾ ಹೇಳಿದ್ದಾರೆ.

ಪ್ರಜಾಪ್ರಭುತ್ವದ ಹಕ್ಕುಗಳ ಮೊಟಕುಗೊಳಿಸಿದ್ದನ್ನು ಒಪ್ಪಿಕೊಂಡ ಸೋನಿಯಾ

ತುರ್ತು ಪರಿಸ್ಥಿತಿಯು ಪ್ರಜಾಪ್ರಭುತ್ವ ವಿರೋಧಿ ಮತ್ತು ಸರ್ವಾಧಿಕಾರಿ ಅಧ್ಯಾಯವೇ ಎಂಬ ಪ್ರಶ್ನೆಗೆ ಉತ್ತರಿಸಿದ ಸೋನಿಯಾ ಗಾಂಧಿ, ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಮೊಟಕುಗೊಳಿಸಲಾಗಿತ್ತು ಎಂಬ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ತುರ್ತು ಪರಿಸ್ಥಿತಿಯ ನಂತರವಷ್ಟೇ ಅಲ್ಲಿ ನಡೆದಿರುವ ಅತಿರೇಕಗಳ ನಿಜವಾದ ತೀವ್ರತೆ ನನಗೆ ತಿಳಿದುಬಂತು. ನಾಗರಿಕರ ಮೂಲಭೂತ ಹಕ್ಕುಗಳು ಹಾಗೂ ಹೇಬಿಯಸ್ ಕಾರ್ಪಸ್ ಅನ್ನು ಅಮಾನತುಗೊಳಿಸಲಾಗಿತ್ತು. ಆದರೆ, ಆ ನಿರ್ಧಾರವನ್ನು ಸಂವಿಧಾನಬದ್ಧವಾಗಿಯೇ ತೆಗೆದುಕೊಳ್ಳಲಾಗಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹಿಂಸಾತ್ಮಕ ಪ್ರತಿಭಟನೆಗಳು, ಸರ್ಕಾರಿ ಆಸ್ತಿ-ಪಾಸ್ತಿಗಳಿಗೆ ಬೆಂಕಿ, ವ್ಯಾಪಕ ಅಶಾಂತಿ ಮತ್ತು ಸಶಸ್ತ್ರ ಪಡೆಗಳಿಗೆ ಸರ್ಕಾರದ ಆದೇಶಗಳನ್ನು ಉಲ್ಲಂಘಿಸುವಂತೆ ಬಂದ ಕರೆಗಳಿಂದ ದೇಶದ ಪರಿಸ್ಥಿತಿ ತೀವ್ರವಾಗಿ ಕ್ಷೀಣಿಸಿತ್ತು. ಆ ಕಷ್ಟಕರ ಸಂದರ್ಭದಲ್ಲಿ ಇಂದಿರಾ ಗಾಂಧಿ ಪರಿಸ್ಥಿತಿಯನ್ನು ನಿಭಾಯಿಸಲು ತೀವ್ರ ಹೋರಾಟ ನಡೆಸುತ್ತಿದ್ದರು ಎಂಬುದನ್ನು ಆ ಕಾಲಘಟ್ಟಕ್ಕೆ ಹೋಗಿ ನೋಡಿದಾಗ ಅರ್ಥವಾಗುತ್ತದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಇಂದಿರಾ ಗಾಂಧಿಯವರ ಬಹಿರಂಗ ಕ್ಷಮೆಯಾಚನೆ

ತುರ್ತು ಪರಿಸ್ಥಿತಿಯನ್ನು ಹೇರುವುದು ಅಂತಿಮವಾಗಿ ಪ್ರಜಾಸತ್ತಾತ್ಮಕ ಮಾರ್ಗಗಳ ಮೂಲಕವೇ ಕೊನೆಗೊಂಡಿತು ಎಂದು ಸೋನಿಯಾ ನೆನಪಿಸಿದ್ದಾರೆ. ಪರಿಸ್ಥಿತಿಯನ್ನು ಅರಿತು ಮಾರ್ಚ್ 1977 ರ ಸಾರ್ವತ್ರಿಕ ಚುನಾವಣೆಗೆ ಕರೆ ನೀಡಿದ್ದು ಸ್ವತಃ ಇಂದಿರಾ ಗಾಂಧಿ ಅವರೇ. ತದನಂತರ ಅವರು ತುರ್ತು ಪರಿಸ್ಥಿತಿಯಲ್ಲಿ ಸಂಭವಿಸಿದ ಅತಿರೇಕಗಳಿಗೆ ಬಹಿರಂಗವಾಗಿ ವಿಷಾದ ವ್ಯಕ್ತಪಡಿಸಿ, ದೇಶದ ಜನರಲ್ಲಿ ಕ್ಷಮೆಯಾಚಿಸಿದ್ದರು ಎಂದು ಸೋನಿಯಾ ಗಾಂಧಿ ಸಂದರ್ಶನದಲ್ಲಿ ತಿಳಿಸಿದ್ದಾರೆ.

1975 ರ ಜೂನ್ 25 ರಂದು ಘೋಷಣೆಯಾದ ತುರ್ತು ಪರಿಸ್ಥಿತಿಯು 1977 ರ ಮಾರ್ಚ್ 21 ರವರೆಗೆ ಮುಂದುವರಿದಿತ್ತು. ಈ ಅವಧಿಯಲ್ಲಿ ಪತ್ರಿಕಾ ಸ್ವಾತಂತ್ರ್ಯದ ಮೇಲೆ ಕಟ್ಟುನಿಟ್ಟಿನ ನಿರ್ಬಂಧ, ಸಂವಿಧಾನ ತಿದ್ದುಪಡಿಗಳು ಹಾಗೂ ಬಲವಂತದ ಸಂತಾನಹರಣ ಪ್ರಚಾರಗಳಂತಹ ನಡೆಗಳು ರಾಷ್ಟ್ರದ ಇತಿಹಾಸದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದ್ದವು(ಏಜೆನ್ಸೀಸ್​).