

ನವದೆಹಲಿ: ತಮ್ಮ ಜೀವನದ ಕುರಿತು ಇರುವ ಅತಿಶಯೋಕ್ತಿಗಳು ಹಾಗೂ ತಪ್ಪು ಮಾಹಿತಿಯನ್ನು ತಿದ್ದುವ ಉದ್ದೇಶದಿಂದಲೇ ತಾವು ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ (Belonging: A Journey of Love) ಎಂಬ ತಮ್ಮ ಚೊಚ್ಚಲ ಆತ್ಮಚರಿತ್ರೆಯನ್ನು ಬರೆಯಲು ನಿರ್ಧರಿಸಿರುವುದಾಗಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮಂಗಳವಾರ (ಅಕ್ಟೋಬರ್ 26) ತಿಳಿಸಿದ್ದಾರೆ.
ಕಳೆದ ದಶಕಗಳಿಂದ ಇತರರೇ ತಮ್ಮ ಜೀವನದ ಕಥೆಯನ್ನು ಹೇಳುತ್ತಾ ಬಂದಿದ್ದಾರೆ, ಆದರೆ ಈಗ ತನ್ನ ಸ್ವಂತ ಕಥೆಯನ್ನು ಹೇಳುವ ಸರದಿ ತನ್ನದಾಗಿದೆ ಎಂದಿರುವ ಸೋನಿಯಾ ಗಾಂಧಿ, ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಈ ಕೃತಿಯು ಹೊರಬಂದಾಗ ರಾಜಕೀಯ ವಲಯದಲ್ಲಿ ಒಂದಷ್ಟು ಸಂಚಲನ ಸೃಷ್ಟಿಸುವುದು ಖಚಿತ ಎಂದು ಅವರು ಮಂದಹಾಸದೊಂದಿಗೆ ನುಡಿದಿದ್ದಾರೆ.
ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಸೋನಿಯಾ ಗಾಂಧಿ, ತಮ್ಮ ಆತ್ಮಚರಿತ್ರೆಯನ್ನು ಬರೆಯಲು ಪ್ರೇರೇಪಿಸಿದ ಹಿನ್ನೆಲೆಯನ್ನು ಹಂಚಿಕೊಂಡಿದ್ದಾರೆ. ಈ ಪುಸ್ತಕ ಹೊರಬಂದಾಗ ಖಂಡಿತವಾಗಿಯೂ ಸ್ವಲ್ಪ ತಮಾಷೆ ನಡೆಯಲಿದೆ. ಕೊನೆಗೂ, ಇತರರು ದಶಕಗಳಿಂದ ನನ್ನ ಕಥೆಯನ್ನು ಹೇಳುತ್ತಾ ಬಂದಿದ್ದಾರೆ, ಈಗ ನನ್ನ ಸರದಿ ಎಂಬ ಕ್ಯಾಪ್ಷನ್ನೊಂದಿಗೆ ಅವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
1 ನಿಮಿಷ 28 ಸೆಕೆಂಡುಗಳ ಅವಧಿಯ ಈ ವಿಡಿಯೋದಲ್ಲಿ, ತಮ್ಮ ಪತಿ, ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರು ಪ್ರಧಾನಿಯಾಗಲು ತಾವೇ ಸಂಪೂರ್ಣವಾಗಿ ವಿರೋಧ ವ್ಯಕ್ತಪಡಿಸಿದ್ದಾಗಿ ಸೋನಿಯಾ ಗಾಂಧಿ ಮೆಲುಕು ಹಾಕಿದ್ದಾರೆ. ತಮ್ಮ ಬಗ್ಗೆ ವರ್ಷಗಳ ಕಾಲ ಸಾಕಷ್ಟು ಸಂಗತಿಗಳು ಮುದ್ರಣಗೊಂಡಿವೆ, ಆದರೆ ಅದರಲ್ಲಿ ಹೆಚ್ಚಿನವು ಒಂದೋ ತಪ್ಪಾಗಿವೆ, ಇಲ್ಲವೇ ಕಲ್ಪಿತವಾಗಿವೆ ಅಥವಾ ಅತಿಶಯೋಕ್ತಿಯಿಂದ ಕೂಡಿದ್ದವು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಆಗ... ನನ್ನ ಪತಿಯನ್ನು ಪ್ರಧಾನಿಯಾಗುವಂತೆ ಕೋರಲಾಯಿತು, ಆದರೆ ಅದನ್ನು ನಾನು ಸಂಪೂರ್ಣವಾಗಿ ವಿರೋಧಿಸಿದ್ದೆ. ನನ್ನ ಬಗ್ಗೆ ಸಾಕಷ್ಟು ಬರೆಯಲಾಗಿದೆ ಮತ್ತು ಅದರಲ್ಲಿ ಹೆಚ್ಚಿನವು ಸಂಪೂರ್ಣವಾಗಿ ಸರಿಯಾಗಿಲ್ಲ, ಅಥವಾ ಅವುಗಳನ್ನು ಕಲ್ಪಿಸಿಕೊಳ್ಳಲಾಗಿದೆ ಇಲ್ಲವೇ ಅತಿಶಯೋಕ್ತಿಯಿಂದ ಬಿಂಬಿಸಲಾಗಿದೆ ಎಂದು ನನಗೆನಿಸಿತು. ಹಾಗಾಗಿ, ಈಗ ಎಲ್ಲವನ್ನೂ ಸತ್ಯಸಂಗತಿಯೊಂದಿಗೆ, ನಿಜವಾಗಿಯೂ ಹೇಗಿತ್ತೋ ಹಾಗೆ ನನ್ನ ಸ್ವಂತ ಕಥೆಯನ್ನು ದಾಖಲಿಸುವ ಅವಕಾಶ ಇದು ಎಂದು ನನಗೆನಿಸಿತು. ಇದನ್ನು ನಾನು ಕೇವಲ ನನ್ನ ಆವೃತ್ತಿ ಎಂದು ಕರೆಯುವುದಿಲ್ಲ, ಬದಲಿಗೆ ಇದು ನನ್ನ ಕಥೆ ಎಂದು ಸೋನಿಯಾ ಗಾಂಧಿ ವಿವರಿಸಿದ್ದಾರೆ.
ಪುಸ್ತಕವನ್ನು ಓದಿದ ಬಳಿಕ ಓದುಗರು ತಮ್ಮ ಕುರಿತಾದ ಅಭಿಪ್ರಾಯವನ್ನು ಬದಲಿಸಿಕೊಳ್ಳಬಹುದು ಅಥವಾ ಮರುಮೌಲ್ಯಮಾಪನ ಮಾಡಬಹುದು ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ಜನರಿಗೆ ಭಿನ್ನವಾದ ಅಭಿಪ್ರಾಯಗಳಿರಬಹುದು. ಕೆಲವರು ನನ್ನ ಬಗ್ಗೆ ಹೊಂದಿರುವ ಅಭಿಪ್ರಾಯ ಬದಲಿಸಿಕೊಳ್ಳಬಹುದು; ಇನ್ನು ಕೆಲವರ ಅಭಿಪ್ರಾಯ ಮತ್ತಷ್ಟು ಹದಗೆಡಬಹುದು. ಆದರೆ, ಅದು ಸಹಜ. ನೀವು ಪುಸ್ತಕವೊಂದನ್ನು ಬರೆದಾಗ ಅಥವಾ ಸಾರ್ವಜನಿಕ ಜೀವನದಲ್ಲಿ ಇದ್ದಾಗ ಹೀಗಾಗುವುದು ಸಾಮಾನ್ಯ. ಇಲ್ಲಿ ಖಂಡಿತವಾಗಿಯೂ ಒಂದು ತಮಾಷೆ ನಡೆಯಲಿದೆ ಎಂದು ಅವರು ಮುಂಚಿತವಾಗಿ ಹೇಳಿದ್ದಾರೆ.
ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಕೃತಿಯು ಸೋನಿಯಾ ಗಾಂಧಿಯವರ ವೈಯಕ್ತಿಕ ಹಾಗೂ ರಾಜಕೀಯ ಜೀವನದ ರೋಚಕ ಪಯಣವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತದೆ. ಯುದ್ಧೋತ್ತರ ಇಟಲಿಯ ವೆನೆಟೊದಲ್ಲಿ ಕಳೆದ ಅವರ ಬಾಲ್ಯದಿಂದ ಹಿಡಿದು, 1965ರಲ್ಲಿ ಕೇಂಬ್ರಿಡ್ಜ್ನಲ್ಲಿ ರಾಜೀವ್ ಗಾಂಧಿ ಅವರನ್ನು ಭೇಟಿಯಾದ ಪ್ರೇಮಕಥೆ ಮತ್ತು ಆ ಪ್ರೀತಿಯಿಂದಾಗಿ ಭಾರತಕ್ಕೆ ಕಾಲಿಟ್ಟ ರೋಚಕ ಪಯಣವನ್ನು ಈ ಪುಸ್ತಕ ಹೊಂದಿದೆ.
ತಮ್ಮ ಅತ್ತೆ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪರಿಚಯ, ಭಾರತೀಯ ಸಂಸ್ಕೃತಿಗೆ ಹೊಂದಿಕೊಳ್ಳಲು ಅವರು ಪಟ್ಟ ಶ್ರಮ, ಹಿಂದಿ ಭಷೆಯನ್ನು ಕಲಿತದ್ದು, ಸೀರೆ ಧರಿಸಲು ಅಭ್ಯಾಸ ಮಾಡಿಕೊಂಡದ್ದು ಹಾಗೂ ಭಾರತೀಯ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡ ಸುಂದರ ಕ್ಷಣಗಳನ್ನು ಈ ಕೃತಿ ಅನಾವರಣಗೊಳಿಸುತ್ತದೆ.
ಅಲ್ಲದೆ, ಗಾಂಧಿ ಕುಟುಂಬದ ಕರಾಳ ದಿನಗಳಾದ ವಿಮಾನ ದುರಂತದಲ್ಲಿ ಸಂಜಯ್ ಗಾಂಧಿ ಮೃತಪಟ್ಟಿದ್ದು, 1984ರಲ್ಲಿ ಇಂದಿರಾ ಗಾಂಧಿ ಅವರ ಹತ್ಯೆ ಮತ್ತು 1991ರಲ್ಲಿ ರಾಜೀವ್ ಗಾಂಧಿ ಅವರ ಭೀಕರ ಹತ್ಯೆಯಂತಹ ಆಘಾತಕಾರಿ ವೈಯಕ್ತಿಕ ನಷ್ಟಗಳ ನೋವಿನ ದಿನಗಳನ್ನು ಈ ಪುಸ್ತಕ ದಾಖಲಿಸಿದೆ. ಇದರ ಜೊತೆಗೆ, 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದ ಐತಿಹಾಸಿಕ ಜಯದ ರಾಜಕೀಯ ಬೆಳವಣಿಗೆಗಳು, ತಾವೇ ಪ್ರಧಾನಿಯಾಗುವ ಅವಕಾಶವಿದ್ದರೂ ಅದನ್ನು ಸ್ವಯಂಪ್ರೇರಿತವಾಗಿ ತಿರಸ್ಕರಿಸಿ ಪಕ್ಷವನ್ನು ಮುನ್ನಡೆಸಿದ ಮಹತ್ವದ ತಿರುವುಗಳು ಹಾಗೂ ಒಂದು ದಶಕ ಕಾಲ ದೇಶವನ್ನು ಆಳಿದ ಯುಪಿಎ ಸರ್ಕಾರದ ಆಡಳಿತದ ಒಳನೋಟಗಳು ಈ ಆತ್ಮಚರಿತ್ರೆಯಲ್ಲಿರಲಿವೆ(ಏಜೆನ್ಸೀಸ್).