ಪ್ರಧಾನಿ ಮೋದಿ ತಂದೆಯ ಕುರಿತ ವಿವಾದಾತ್ಮಕ ಹೇಳಿಕೆ: ಖರ್ಗೆ ಮಾಡಿದ್ದು ದೊಡ್ಡ ತಪ್ಪು, ಕೂಡಲೇ ಕ್ಷಮೆಯಾಚಿಸಲಿ ಎಂದ ಮಹಾ ಮಾಜಿ ಸಿಎಂ! | Prithviraj Chavan

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ತಪ್ಪು ಮಾಡಿದ್ದು, ಅವರು ಅದಕ್ಕಾಗಿ ಕ್ಷಮೆ ಯಾಚಿಸಬೇಕು ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವ್ಹಾಣ್ (Prithviraj Chavan) ಮಂಗಳವಾರ ಬಹಿರಂಗವಾಗಿ ಆಗ್ರಹಿಸಿದ್ದಾರೆ.
ಖರ್ಗೆ ಮಾಡಿದ್ದು ದೊಡ್ಡ ತಪ್ಪು ಕೂಡಲೇ ಕ್ಷಮೆಯಾಚಿಸಲಿ ಎಂದ ಮಾಜಿ ಮುಖ್ಯಮಂತ್ರಿ ಹಾಗೂ ಪೃಥ್ವಿರಾಜ್ ಚವ್ಹಾಣ್
ಖರ್ಗೆ ಮಾಡಿದ್ದು ದೊಡ್ಡ ತಪ್ಪು ಕೂಡಲೇ ಕ್ಷಮೆಯಾಚಿಸಲಿ ಎಂದ ಮಾಜಿ ಮುಖ್ಯಮಂತ್ರಿ ಹಾಗೂ ಪೃಥ್ವಿರಾಜ್ ಚವ್ಹಾಣ್
Published on: 

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ತಪ್ಪು ಮಾಡಿದ್ದು, ಅವರು ಅದಕ್ಕಾಗಿ ಕ್ಷಮೆ ಯಾಚಿಸಬೇಕು ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವ್ಹಾಣ್ (Prithviraj Chavan) ಮಂಗಳವಾರ ಬಹಿರಂಗವಾಗಿ ಆಗ್ರಹಿಸಿದ್ದಾರೆ.

ಯಾವುದೇ ರಾಜಕೀಯ ಪಕ್ಷದ ನಾಯಕರಾಗಿರಲಿ, ಸಾರ್ವಜನಿಕ ಭಾಷಣಗಳಲ್ಲಿ ಮತ್ತು ಸಂಭಾಷಣೆಗಳಲ್ಲಿ ಸಭ್ಯತೆಯ ಗಡಿಯನ್ನು ಮೀರಬಾರದು ಎಂದಿರುವ ಚವ್ಹಾಣ್, ರಾಜಕೀಯ ವಲಯದಲ್ಲಿ ನಾಯಕರ ಭಾಷೆಯ ಹದಗೆಡುತ್ತಿರುವುದರ ಬಗ್ಗೆ ಕಳಕಳ ವ್ಯಕ್ತಪಡಿಸಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷವು ದೇಶಾದ್ಯಂತ ಮತ ಉಳಿಸಿ ಅಭಿಯಾನ ಹಾಗೂ ಗುಜರಾತ್‌ನಲ್ಲಿ ಜಿಲ್ಲಾ ಮಟ್ಟದ ಸಭೆಗಳನ್ನು ನಡೆಸುತ್ತಿರುವ ಮಹತ್ವದ ರಾಜಕೀಯ ಬೆಳವಣಿಗೆಯ ನಡುವೆಯೇ ಹಿರಿಯ ನಾಯಕರೊಬ್ಬರಿಂದ ಈ ಹೇಳಿಕೆ ಹೊರಬಂದಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Also Read
ವ್ಯಾಪಾರ ವಲಯದಲ್ಲಿ ಭೀತಿ ತಂದ ಇಂಡಿಯಾ ಒಕ್ಕೂಟದ ರ‍್ಯಾಲಿ!...ರಾಹುಲ್​ಗೆ ಎರಡನೇ ಪತ್ರ ಬರೆದ ಸಿಟಿಐ...ಏನಿದೆ ಅದರಲ್ಲಿ..? | India Bloc Rally
ಖರ್ಗೆ ಮಾಡಿದ್ದು ದೊಡ್ಡ ತಪ್ಪು ಕೂಡಲೇ ಕ್ಷಮೆಯಾಚಿಸಲಿ ಎಂದ ಮಾಜಿ ಮುಖ್ಯಮಂತ್ರಿ ಹಾಗೂ ಪೃಥ್ವಿರಾಜ್ ಚವ್ಹಾಣ್

ಖರ್ಗೆ ಹೇಳಿಕೆಯಿಂದ ಮುಜುಗರ!

ಬಿಹಾರದ ಮೊದಲ ಮುಖ್ಯಮಂತ್ರಿ ಶ್ರೀಕೃಷ್ಣ ಸಿಂಗ್ ಅವರ 139ನೇ ಜನ್ಮದಿನಾಚರಣೆಯ ಅಂಗವಾಗಿ ಭಾನುವಾರ ಪಟನಾದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಲ್ಲಿಕಾರ್ಜುನ್ ಖರ್ಗೆ ಭಾಗವಹಿಸಿದ್ದರು. ಈ ವೇಳೆ ಮಾತನಾಡುತ್ತಿದ್ದ ಖರ್ಗೆ, ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಅಕ್ರಮ ಎಸಗಿರುವವರನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಜೈಲಿಗೆ ಕಳುಹಿಸಲಾಗುವುದು ಎಂದು ಗುಡುಗಿದ್ದರು. ಈ ಸಂದರ್ಭದಲ್ಲಿ ಸಭೆಯಲ್ಲಿದ್ದ ಪ್ರೇಕ್ಷಕರೊಬ್ಬರು, ಬಂಡಾಯ ಏಳದ ಹೊರತು ಪ್ರಧಾನಿ ಮೋದಿ ಎಲ್ಲೂ ಹೋಗುವುದಿಲ್ಲ ಎಂದು ಕೂಗಿದರು. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಖರ್ಗೆ, ಮೋದಿ ಕಾ ಬಾಪ್ ಭೀ ಜಾಯೆಗಾ (ಮೋದಿ ಅಪ್ಪ ಕೂಡ ಹೋಗಬೇಕಾಗುತ್ತದೆ) ಎಂದು ವಿವಾದಾತ್ಮಕವಾಗಿ ಆಕ್ರೋಶ ಹೊರಹಾಕಿದ್ದರು.

ಈ ಹೇಳಿಕೆಯು ರಾಷ್ಟ್ರಮಟ್ಟದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಇದೀಗ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಪೃಥ್ವಿರಾಜ್ ಚವ್ಹಾಣ್ ಅವರೇ ಖರ್ಗೆ ನಡೆ ಸರಿ ಅಲ್ಲ ಎಂದಿದ್ದಾರೆ. ಖರ್ಗೆ ಅವರು ಆ ರೀತಿಯ ಮಾತುಗಳನ್ನು ಆಡಬಾರದಿತ್ತು, ಅದು ಒಂದು ತಪ್ಪು. ಅತಿರೇಕದ ಅಥವಾ ಕೀಳುಮಟ್ಟದ ಭಾಷೆಯನ್ನು ಯಾವುದೇ ಪಕ್ಷದ ನಾಯಕರು ಬಳಸಬಾರದು. ಅವರು ಬಹುಶಃ ಆಕಸ್ಮಿಕವಾಗಿ ಆ ಮಾತುಗಳನ್ನು ಆಡಿರಬಹುದು, ಆದರೂ ಅವರು ಈ ಕುರಿತು ಸ್ಪಷ್ಟನೆ ನೀಡುವುದು ಅಥವಾ ಕ್ಷಮೆ ಯಾಚಿಸುವುದು ಸೂಕ್ತ ಎಂದು ಚವ್ಹಾಣ್ ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ನಾಯಕರಿಗೂ ಬಿಟ್ಟಿಲ್ಲ ಚವ್ಹಾಣ್

ಖರ್ಗೆ ಹೇಳಿಕೆಯನ್ನು ತರಾಟೆಗೆ ತೆಗೆದುಕೊಂಡಿರುವ ಚವ್ಹಾಣ್, ಬಿಜೆಪಿ ನಾಯಕರನ್ನು ಬಿಟ್ಟಿಲ್ಲ. ಈ ಹಿಂದೆ ಬಿಜೆಪಿ ನಾಯಕರು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ವಿರುದ್ಧ ಹೇಗೆಲ್ಲಾ ಮಾತನಾಡಿದ್ದಾರೆ ಎಂಬುದನ್ನು ನಾವು ಮರೆಯಬಾರದು. ಇಲ್ಲಿ ಎರಡು ಕಡೆಯವರೂ ತಪ್ಪಿತಸ್ಥರೇ. ಆದರೆ ರಾಜಕಾರಣಿಗಳು ಪರಸ್ಪರ ಶತ್ರುಗಳಲ್ಲ, ನಮ್ಮದು ಕೇವಲ ಸೈದ್ಧಾಂತಿಕ ಹೋರಾಟ ಎಂದು ಅವರು ಸ್ಪಷ್ಟಪಡಿಸಿದರು.

ತಮ್ಮ ಸಂಸದರ ದಿನಗಳನ್ನು ಮೆಲುಕು ಹಾಕಿದ ಅವರು, ಹಿಂದಿನ ಕಾಲದಲ್ಲಿ ಅಟಲ್ ಬಿಹಾರಿ ವಾಜಪೇಯಿ, ಸುಷ್ಮಾ ಸ್ವರಾಜ್ ಮತ್ತು ಜಸ್ವಂತ್ ಸಿಂಗ್ ಅವರಂತಹ ದಿಗ್ಗಜರೊಂದಿಗೆ ಸಂಸತ್ತಿನಲ್ಲಿ ತೀವ್ರ ವಾಗ್ವಾದ ಹಾಗೂ ಜಗಳಗಳಾಗುತ್ತಿದ್ದರೂ, ಸಂಸತ್ತಿನ ಹೊರಗೆ ಎಲ್ಲರೂ ಅಷ್ಟೇ ಸೌಹಾರ್ದತೆಯಿಂದ ಇರುತ್ತಿದ್ದರು. ಆದರೆ ಇಂದಿನ ರಾಜಕಾರಣದಲ್ಲಿ ವಿರೋಧ ಪಕ್ಷದ ನಾಯಕರನ್ನು ಅಕ್ಷರಶಃ ಮಾರಣಾಂತಿಕ ಶತ್ರುಗಳಂತೆ ಕಾಣಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ವಿರುದ್ಧ ಆರ್ಥಿಕ ಮತ್ತು ವಿದೇಶಾಂಗ ನೀತಿ ಟೀಕೆ

ಕೇವಲ ವಿವಾದಾತ್ಮಕ ಹೇಳಿಕೆಗಳಿಗೆ ಸೀಮಿತವಾಗದೆ, ಕೇಂದ್ರ ಸರ್ಕಾರದ ವೈಫಲ್ಯಗಳ ವಿರುದ್ಧವೂ ಚವ್ಹಾಣ್ ವಾಗ್ದಾಳಿ ನಡೆಸಿದರು. ದೇಶದ ಆರ್ಥಿಕ ಹಾಗೂ ವಿದೇಶಾಂಗ ನೀತಿಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂದು ಆರೋಪಿಸಿದ ಅವರು, ಚೀನಾ ನಮ್ಮ ದೇಶದ ಗಡಿಯೊಳಗೆ ನುಗ್ಗುತ್ತಿದ್ದರೂ ಪ್ರಧಾನಿಯವರಿಗೆ ಅದರ ವಿರುದ್ಧ ಧೈರ್ಯವಾಗಿ ಮಾತನಾಡುವ ಧೈರ್ಯ ಇಲ್ಲ ಎಂದು ಟೀಕಿಸಿದರು(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net