ಲಡಾಖ್‌ಗಾಗಿ ಮತ್ತೆ ಹೋರಾಟಕ್ಕೆ ಸೋನಮ್ ವಾಂಗ್​ಚುಕ್​​: ಸೆ.19 ರಿಂದ ಬೃಹತ್ ಪಾದಯಾತ್ರೆ ಘೋಷಣೆ! Sonam Wangchuk

ಸೋನಮ್ ವಾಂಗ್‌ಚುಕ್
ಸೋನಮ್ ವಾಂಗ್‌ಚುಕ್
Published on
ಲಡಾಖ್​: ಜಂತರ್​-ಮಂತರ್​ನಲ್ಲಿ ನೀಟ್​ ವಿರೋಧಿ ಪ್ರತಿಭಟನೆಯಲ್ಲಿ ಉಪವಾಸ ಸತ್ಯಾಗ್ರಹದ ಮೂಲಕ ಮುನ್ನಲೆಗೆ ಬಂದಿದ್ದ ಪರಿಸರವಾದಿ ಸೋನಮ್​ ವಾಂಗ್​ಚುಕ್ (Sonam Wangchuk)​ ಈಗ ಮತ್ತೊಮ್ಮೆ ಹೋರಾಟಕ್ಕೆ ಮುಂದಾಗಲಿದ್ದಾರೆಂದು ತಿಳಿದು ಬಂದಿದೆ.
ಲಡಾಖ್‌ನ ಅಸ್ಮಿತೆ ಹಾಗೂ ಸ್ವರೂಪವನ್ನು ಬದಲಾಯಿಸುವುದಿಲ್ಲ ಎಂಬ ಸ್ಪಷ್ಟ ಭರವಸೆ ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಿದ್ದೆವು. ಆದರೆ ಸರ್ಕಾರದಿಂದ ಯಾವುದೇ ಖಚಿತ ಭರವಸೆ ಸಿಕ್ಕಿಲ್ಲ. ಒಂದು ವೇಳೆ ಸರ್ಕಾರ ಮುಂದಿನ ಒಂದು ವಾರದೊಳಗೆ ಸ್ಪಷ್ಟನೆ ನೀಡದಿದ್ದರೆ, ಸೆಪ್ಟೆಂಬರ್ 19 ರಿಂದ 24 ರವರೆಗೆ ಪ್ರತಿಭಟನೆ ಕೈಗೊಳ್ಳುವುದಾಗಿ ಸೋನಮ್​ ಎಚ್ಚರಿಕೆ ನೀಡಿದ್ದಾರೆ.

ಸರ್ಕಾರ ರಚನೆವರೆಗೆ ಯೋಜನೆ ಬೇಡ!

ನಾಲ್ಕು ತಿಂಗಳ ಸುದೀರ್ಘ ವಿರಾಮದ ಬಳಿಕ ಗೃಹ ಸಚಿವಾಲಯದ ಉಪ-ಸಮಿತಿಯೊಂದಿಗೆ ಈ ಸಭೆ ನಡೆದಿತ್ತು. ಲಡಾಖ್‌ನ ನಿಯೋಗವು ಬಹಳ ನಿರೀಕ್ಷೆಯಿಂದ ಸಭೆಗೆ ತೆರಳಿತ್ತಾದರೂ, ಯಾವುದೇ ಹೊಸ ಪ್ರಗತಿಯಾಗದೆ ಹಳೆಯ ಸಂಗತಿಗಳೇ ಪುನರಾವರ್ತನೆಯಾದವು ಎಂದು ವಾಂಗ್‌ಚುಕ್ ಅಸಮಾಧಾನ ಹೊರಹಾಕಿದ್ದಾರೆ.
ಚುನಾಯಿತ ಆಡಳಿತ ಮಂಡಳಿಯನ್ನು ರಚಿಸುವವರೆಗೆ ಲಡಾಖ್‌ನಲ್ಲಿ ಯಾವುದೇ ದೊಡ್ಡ ಬದಲಾವಣೆಗಳನ್ನು ಮಾಡುವುದಿಲ್ಲ ಎಂದು ಸರ್ಕಾರ ಮುಂದಿನ ಒಂದು ವಾರದೊಳಗೆ ಲಿಖಿತ ಅಥವಾ ಸ್ಪಷ್ಟ ಭರವಸೆ ನೀಡಬೇಕು ಎಂಬುದು ನಿಯೋಗದ ಪ್ರಮುಖ ಬೇಡಿಕೆಯಾಗಿದೆ.
ಪಾದಯಾತ್ರೆ ಕೈಗೊಳ್ಳುತ್ತೇವೆ!
ಲೇಹ್ ಅಪೆಕ್ಸ್ ಬಾಡಿ ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್‌ನ ಸದಸ್ಯರು ಒಟ್ಟಾಗಿ ಸೇರಿ, ಸೆಪ್ಟೆಂಬರ್ 19 ರಿಂದ 24 ರವರೆಗೆ ಬೃಹತ್ ಪಾದಯಾತ್ರೆ ನಡೆಸುವುದಾಗಿ ಗುರುವಾರ ಅಧಿಕೃತವಾಗಿ ಘೋಷಿಸಿದ್ದಾರೆ. ಒಂದು ವಾರದೊಳಗೆ ಸರ್ಕಾರದಿಂದ ಸೂಕ್ತ ಭರವಸೆ ಸಿಗದಿದ್ದರೆ, ಲಡಾಖ್ ಹೋರಾಟಕ್ಕೆ ಬೆಂಬಲ ನೀಡುವಂತೆ ದೇಶದ ಮೂಲೆಮೂಲೆಯ ಜನರನ್ನು ಕೋರಲಾಗುವುದು ಎಂದು ವಾಂಗ್‌ಚುಕ್ ಎಚ್ಚರಿಸಿದ್ದಾರೆ.

ಆರೋಗ್ಯ ಸಮಸ್ಯೆಗಳು ಇನ್ನೂ ಕಾಡುತ್ತಿವೆ

ಶಿಕ್ಷಣ ವ್ಯವಸ್ಥೆ ಮತ್ತು ಪರೀಕ್ಷಾ ಸುಧಾರಣೆಗಾಗಿ ತಾವು ನಡೆಸಿದ ಹೋರಾಟ ಹಾಗೂ ತ್ಯಾಗದ ಬಗ್ಗೆ ತಮಗೆ ಯಾವುದೇ ಪಶ್ಚಾತಾಪವಿಲ್ಲ. ಆದರೆ, ಉಪವಾಸದ ಪರಿಣಾಮವಾಗಿ ತಮ್ಮ ಆರೋಗ್ಯ ಇನ್ನೂ ಸಂಪೂರ್ಣವಾಗಿ ಸುಧಾರಿಸಿಲ್ಲ ಎಂದು ಸೋನಮ್​ ವಾಂಗ್​ಚುಕ್​ ಮಾಹಿತಿ ಹಂಚಿಕೊಂಡಿದ್ದಾರೆ.
ಜೂನ್ 28 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ನೀಟ್ (NEET) ಸೇರಿದಂತೆ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳ ಅಕ್ರಮಗಳ ವಿರುದ್ಧ ಅವರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.
ಸತತ 26 ದಿನಗಳ ಕಾಲ ನಡೆದ ಈ ಶಾಂತಿಯುತ ಉಪವಾಸದಲ್ಲಿ ಅವರು ಸುಮಾರು 11 ಕೆಜಿ ತೂಕ ಕಳೆದುಕೊಂಡಿದ್ದರು. ಸರ್ಕಾರದ ಕಡೆಯಿಂದ ಭರವಸೆ ಸಿಕ್ಕ ಬಳಿಕ ಜುಲೈ 24 ರಂದು ಅವರು ಉಪವಾಸವನ್ನು ಕೈಬಿಟ್ಟಿದ್ದರು, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net