ದೇಶಕ್ಕೆ ಸಂಕಷ್ಟ ಬಂದ್ರೆ, ವಿಪಕ್ಷಗಳಿಗೆ ಸಂಭ್ರಮ!...ಮೋದಿ ಮೇಲಿನ ದ್ವೇಷಕ್ಕೆ ಜನರಲ್ಲಿ ಆತಂಕ ಸೃಷ್ಟಿಸಬೇಡಿ ಎಂದು ನಮೋ ಆಕ್ರೋಶ | Narendra Modi

ಗಾಂಧಿನಗರ: ಇರಾನ್‌ನಲ್ಲಿ ನಡೆಯುತ್ತಿರುವ ಯುದ್ಧ ಹಾಗೂ ಗಲ್ಫ್ ರಾಷ್ಟ್ರಗಳ ಉದ್ವಿಗ್ನತೆಯ ಈ ಕಷ್ಟದ ಸಮಯದಲ್ಲಿ ವಿಪಕ್ಷಗಳು ದೇಶದಲ್ಲಿ ಸುಳ್ಳು ವದಂತಿಗಳನ್ನು ಹಬ್ಬಿಸುವ ಮೂಲಕ ಜನರಲ್ಲಿ ಅನಗತ್ಯ ಆತಂಕವನ್ನು ಸೃಷ್ಟಿಸುತ್ತಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಮೋದಿ ಮೇಲಿನ ದ್ವೇಷಕ್ಕೆ ಜನರಲ್ಲಿ ಆತಂಕ ಸೃಷ್ಟಿಸಬೇಡಿ ಎಂದು ನಮೋ ಆಕ್ರೋಶ
ಮೋದಿ ಮೇಲಿನ ದ್ವೇಷಕ್ಕೆ ಜನರಲ್ಲಿ ಆತಂಕ ಸೃಷ್ಟಿಸಬೇಡಿ ಎಂದು ನಮೋ ಆಕ್ರೋಶ
Published on: 

ಗಾಂಧಿನಗರ: ಇರಾನ್‌ನಲ್ಲಿ ನಡೆಯುತ್ತಿರುವ ಯುದ್ಧ ಹಾಗೂ ಗಲ್ಫ್ ರಾಷ್ಟ್ರಗಳ ಉದ್ವಿಗ್ನತೆಯ ಈ ಕಷ್ಟದ ಸಮಯದಲ್ಲಿ ವಿಪಕ್ಷಗಳು ದೇಶದಲ್ಲಿ ಸುಳ್ಳು ವದಂತಿಗಳನ್ನು ಹಬ್ಬಿಸುವ ಮೂಲಕ ಜನರಲ್ಲಿ ಅನಗತ್ಯ ಆತಂಕವನ್ನು ಸೃಷ್ಟಿಸುತ್ತಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಗುಜರಾತ್‌ನ ಬಣಸ್ಕಾಂತದಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಷ್ಟದ ಸಂದರ್ಭದಲ್ಲಿ ದೇಶದ ಜನರ ಪರವಾಗಿ ಗಟ್ಟಿಯಾಗಿ ನಿಲ್ಲಬೇಕಾದ ವಿಪಕ್ಷಗಳು, ಈ ಬಿಕ್ಕಟ್ಟಿನ ಪರಿಸ್ಥಿತಿಯ ಲಾಭ ಪಡೆದು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮತ್ತು ಸರ್ಕಾರವನ್ನು ಗುರಿಯಾಗಿಸಲು ಯತ್ನಿಸುತ್ತಿವೆ ಎಂದು ಕಿಡಿಕಾರಿದ್ದಾರೆ.

ದೇಶದ ಯುವಕರು, ಮಹಿಳೆಯರು ಮತ್ತು ಹೆಣ್ಣುಮಕ್ಕಳು ಒಂದಾಗಿ ಅಭಿವೃದ್ದಿ ಹೊಂದಿದ ಭಾರತ ನಿರ್ಮಾಣದತ್ತ ಹೆಜ್ಜೆಹಾಕುತ್ತಿದ್ದಾರೆ. ಆದರೆ, ದೇಶದ ಈ ಅಖಂಡ ಪ್ರಗತಿಯನ್ನು ಸಹಿಸದ ಕೆಲವು ರಾಜಕೀಯ ಗುಂಪುಗಳು ದೇಶವನ್ನು ನಿರಂತರವಾಗಿ ಸಂಕಷ್ಟದಲ್ಲಿ ನೋಡಲು ಬಯಸುತ್ತಿವೆ. ಗಲ್ಫ್ ರಾಷ್ಟ್ರಗಳ ಬಿಕ್ಕಟ್ಟಿನಿಂದ ಉದ್ಭವಿಸಿರುವ ಅನಿಶ್ಚಿತತೆಯನ್ನು ದುರ್ಬಳಕೆ ಮಾಡಿಕೊಂಡು, ದೇಶದಲ್ಲಿ ಅಡುಗೆ ಗ್ಯಾಸ್ ಮತ್ತು ರಸಗೊಬ್ಬರಗಳ ತೀವ್ರ ಕೊರತೆಯಿದೆ ಎಂದು ವಿಪಕ್ಷಗಳು ಉದ್ದೇಶಪೂರ್ವಕವಾಗಿ ಸುಳ್ಳು ವದಂತಿಗಳನ್ನು ಬಿತ್ತುತ್ತಿವೆ. ಕೇವಲ ಮೋದಿಯನ್ನು ದ್ವೇಷಿಸಲು ಮತ್ತು ರಾಜಕೀಯವಾಗಿ ತೇಜೋವಧೆ ಮಾಡಲು ವಿಪಕ್ಷಗಳು ಇಂತಹ ಕೃತ್ಯಗಳಲ್ಲಿ ನಿರಂತರವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿವೆ ಎಂದು ಪ್ರಧಾನಿ ಆಕ್ರೋಶ ವ್ಯಕ್ತಪಡಿಸಿದರು.

Also Read
ದೆಹಲಿಯ 20 ಲಕ್ಷ ವ್ಯಾಪಾರಿಗಳಿಗೆ ನಷ್ಟವಾಗತ್ತೆ!....ಇಂಡಿಯಾ ಮೈತ್ರಿಕೂಟದ ರ‍್ಯಾಲಿ ಮುಂದೂಡಲು ಸೋನಿಯಾ ಗಾಂಧಿಗೆ ಸಿಟಿಐ ಪತ್ರ! | INDIA Bloc Rally
ಮೋದಿ ಮೇಲಿನ ದ್ವೇಷಕ್ಕೆ ಜನರಲ್ಲಿ ಆತಂಕ ಸೃಷ್ಟಿಸಬೇಡಿ ಎಂದು ನಮೋ ಆಕ್ರೋಶ

ನಾವು ಕೊಟ್ಟ ಮಾತನ್ನು ತಪ್ಪಲ್ಲ!

ಇದೇ ವೇಳೆ ದೇಶದ ಅನ್ನದಾತರಿಗೆ ರಸಗೊಬ್ಬರ ಬೆಲೆ ಏರಿಕೆಯ ಕುರಿತು ಮಹತ್ವದ ಭರವಸೆ ನೀಡಿದ ಪ್ರಧಾನಿ ಮೋದಿ, ಜಾಗತಿಕ ಮಾರುಕಟ್ಟೆಯಲ್ಲಿ ರಸಗೊಬ್ಬರ ಬೆಲೆಗಳು ಗಗನಕ್ಕೇರಿದ್ದರೂ, ಆ ವಿಪರೀತ ಆರ್ಥಿಕ ಹೊರೆಯನ್ನು ತಮ್ಮ ಸರ್ಕಾರ ದೇಶದ ಅನ್ನದಾತನ ಮೇಲೆ ಎಂದಿಗೂ ಬೀಳಲು ಬಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು. ಕಷ್ಟದ ಕಾಲದಲ್ಲಿ ರೈತರ ಬೆನ್ನೆಲುಬಾಗಿ ನಿಲ್ಲುವುದಾಗಿ ತಾವು ಹಿಂದೆ ನೀಡಿದ್ದ ಮಾತಿಗೆ ಈಗಲೂ ಬದ್ಧವಾಗಿದೆ ಎಂದು ಪುನರುಚ್ಚರಿಸುತ್ತಾ, ಕೃಷಿಯು ಭಾರತೀಯ ಸಂಸ್ಕೃತಿಯ ಜೀವನಾಡಿಯಾಗಿದೆ ಎಂದರು.

ಕಳೆದ ಹನ್ನೆರಡು ವರ್ಷಗಳಲ್ಲಿ ಕೃಷಿ, ಪಶುಸಂಗೋಪನೆ ಮತ್ತು ಡೈರಿ ಕ್ಷೇತ್ರಗಳಲ್ಲಿ ವಿಜ್ಞಾನ ಹಾಗೂ ಆಧುನಿಕ ತಂತ್ರಜ್ಞಾನವನ್ನು ಯಶಸ್ವಿಯಾಗಿ ಅಳವಡಿಸಿಕೊಳ್ಳಲಾಗಿದೆ. ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆಯು ರೈತರಿಗೆ ತಮ್ಮ ಭೂಮಿಗೆ ಬೇಕಾದ ರಸಗೊಬ್ಬರದ ಸರಿಯಾದ ಪ್ರಮಾಣವನ್ನು ವೈಜ್ಞಾನಿಕವಾಗಿ ನಿರ್ಧರಿಸಲು ಹೇಗೆ ಸಹಕಾರಿಯಾಗಿದೆ ಎಂಬುದನ್ನು ವಿವರಿಸುತ್ತಾ, ಇದುವರೆಗೆ ದೇಶದಾದ್ಯಂತ 26 ಕೋಟಿಗೂ ಅಧಿಕ ಕಾರ್ಡ್‌ಗಳನ್ನು ವಿತರಿಸಲಾಗಿದೆ ಎಂದರು. ಬದಲಾಗುತ್ತಿರುವ ಹವಾಮಾನ ವೈಪರೀತ್ಯಗಳಿಗೆ ತಕ್ಕಂತೆ ರೈತರು ಹೊಂದಿಕೊಳ್ಳಲು ನೆರವಾಗುವ ನಿಟ್ಟಿನಲ್ಲಿ ಸುಮಾರು 3,000 ಹೊಸ ಬಗೆಯ ಹವಾಮಾನ-ಸ್ಥಿತಿಸ್ಥಾಪಕ ಬೀಜಗಳನ್ನು ಲಭ್ಯವಾಗಿಸಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿರುವ ಪಶುಸಂಗೋಪನೆ ಮತ್ತು ಡೈರಿ ಕ್ಷೇತ್ರದ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ತುಂಬಾ ಮಹತ್ತರವಾಗಿದ್ದು, ಸುಧಾರಿತ ಜಾನುವಾರು ತಳಿಗಳ ಬಳಕೆಯು ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಹೇಗೆ ಸಹಕಾರಿಯಾಗಲಿದೆ ಎಂಬುದನ್ನು ವಿವರಿಸಿದರು. ಒಟ್ಟಾರೆಯಾಗಿ, ಗಲ್ಫ್ ಬಿಕ್ಕಟ್ಟಿನ ಸಮಯದಲ್ಲಿ ಆತಂಕ ಸೃಷ್ಟಿಸುತ್ತಿರುವ ವಿಪಕ್ಷಗಳ ನಡವಳಿಕೆಯನ್ನು ಖಂಡಿಸುವ ಜೊತೆಗೆ, ರೈತರ ಹಿತರಕ್ಷಣೆ ಮತ್ತು ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸದಾ ಬದ್ಧವಾಗಿದೆ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದರು(ಏಜೆನ್ಸೀಸ್​).