ವಾರಣಾಸಿಯಲ್ಲಿ ಸಹೋದರಿಯರ ದಾಂಧಲೆ: ತಂದೆ ಮೇಲಿನ ಹಲ್ಲೆಗೆ ರೆಸ್ಟೋರೆಂಟ್‌ಗೆ ನುಗ್ಗಿ ಆಕ್ರೋಶ; ವಿಡಿಯೋ ವೈರಲ್​! Varanasi Girls

CCTV footage captures two sisters entering a snack shop in Varanasi and scattering items around.
ಇಬ್ಬರು ಸಹೋದರಿಯರು ವಾರಣಾಸಿಯ ತಿಂಡಿ ಅಂಗಡಿಗೆ ನುಗ್ಗಿ ಸಾಮಾನುಗಳನ್ನು ಚೆಲ್ಲಾಪಿಲ್ಲಿ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
Published on: 

ವಾರಣಾಸಿ: ತಂದೆಯ ಮೇಲೆ ಅಂಗಡಿ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ ಎಂಬ ಕಾರಣಕ್ಕೆ ಇಬ್ಬರು ಸಹೋದರಿಯರು ರಸ್ತೆ ಬದಿಯ ತಿಂಡಿ ಅಂಗಡಿಯೊಂದರಲ್ಲಿ ದಾಂಧಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ವರೆದಿಯಾಗಿದೆ. ಸದ್ಯ ಈ ಇಡೀ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ.

ಅಷ್ಟಕ್ಕೂ ನಡೆದಿದ್ದೇನು?

ವರದಿಗಳ ಪ್ರಕಾರ, ಕಳೆದ ನವೆಂಬರ್ 4 ರಂದು ಈ ಮಹಿಳೆಯರ ತಂದೆ ಮತ್ತು ರೆಸ್ಟೋರೆಂಟ್ ಸಿಬ್ಬಂದಿ ನಡುವೆ ಯಾವುದೋ ವಿಚಾರಕ್ಕೆ ಜಗಳ ಶುರುವಾಗಿತ್ತು. ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದಾಗ, ಅಂಗಡಿ ಸಿಬ್ಬಂದಿ ವೃದ್ಧ ತಂದೆಯ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ.

ತಮ್ಮ ತಂದೆಯ ಮೇಲಾದ ಹಲ್ಲೆಯಿಂದ ನೊಂದ ಕುಟುಂಬಸ್ಥರು, ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಆದರೆ, ಪೊಲೀಸರಿಗೆ ದೂರು ನೀಡಿದರೂ ಅಂಗಡಿ ಸಿಬ್ಬಂದಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲವಂತೆ. ಪೊಲೀಸರ ಈ ನಿರ್ಲಕ್ಷ್ಯದಿಂದ ರೊಚ್ಚಿಗೆದ್ದ ಇಬ್ಬರು ಸಹೋದರಿಯರು, ಕಾನೂನು ಕೈಗೆತ್ತಿಕೊಂಡು ತಾವೇ ಪಾಠ ಕಲಿಸಲು ಮುಂದಾಗಿದ್ದಾರೆ.

ಸಿಸಿಟಿವಿಯಲ್ಲಿ ಸೆರೆಯಾದ ಹೈಡ್ರಾಮಾ!

ಅಂಗಡಿಯ ಬಳಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಇಬ್ಬರು ಸಹೋದರಿಯರ ಆಕ್ರೋಶದ ದೃಶ್ಯಗಳು ಸೆರೆಯಾಗಿವೆ. ವಿಡಿಯೋದಲ್ಲಿ ಯುವತಿಯೊಬ್ಬಳು ಸ್ಕೂಟರ್‌ನಲ್ಲಿ ಬಂದು, ಮೊದಲು ಅಂಗಡಿ ಹಾಗೂ ಸುತ್ತಮುತ್ತಲಿನ ದೃಶ್ಯಗಳನ್ನು ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಲು ಶುರುಮಾಡುತ್ತಾಳೆ.

ಇದ್ದಕ್ಕಿದ್ದಂತೆ ಅವರಲ್ಲೊಬ್ಬಳು ರೋಷಾವೇಷದಿಂದ ಅಂಗಡಿಯೊಳಗೆ ನುಗ್ಗಿ, ತಿಂಡಿ ತಯಾರಿಸಲು ಇಟ್ಟಿದ್ದ ಹಿಟ್ಟಿನ ಪಾತ್ರೆಯನ್ನು ಒದ್ದು ಉರುಳಿಸಿದ್ದಾಳೆ. ಅಷ್ಟಕ್ಕೇ ಸುಮ್ಮನಾಗದ ಆಕೆ, ಅಲ್ಲಿದ್ದ ಕೆಲಸಗಾರನ ಮೇಲೆ ನೀರನ್ನು ಎರಚಿ, ಈ ಅಂಗಡಿಯನ್ನು ಈಗಲೇ ಮುಚ್ಚಿಬಿಡಿ ಎಂದು ಜೋರಾಗಿ ಕೂಗಾಡಿದ್ದಾಳೆ.

ಸ್ಥಳೀಯರ ಮೇಲೂ ಗರಂ!

ಅಂಗಡಿಯಲ್ಲಿ ನಡೆಯುತ್ತಿದ್ದ ಈ ಹೈಡ್ರಾಮಾ ಕಂಡು ಅಕ್ಕಪಕ್ಕದ ಜನರು ಶಾಕ್ ಆಗಿದ್ದಾರೆ. ಸ್ಥಳೀಯರೊಬ್ಬರು ಮುಂದೆ ಬಂದು ಯುವತಿಯರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ಅವರು ಕೇಳುವ ಸ್ಥಿತಿಯಲ್ಲಿರಲಿಲ್ಲ.

ಈ ವೇಳೆ ಸ್ಥಳೀಯ ಮಹಿಳೆಯೊಬ್ಬರು, ಇಲ್ಲಿ ಸಣ್ಣ ಮಕ್ಕಳಿದ್ದಾರೆ, ಸ್ವಲ್ಪ ಜವಾಬ್ದಾರಿಯಿಂದ ವರ್ತಿಸಿ. ಯಾಕೆ ಹೀಗೆ ಗಲಾಟೆ ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಮತ್ತಷ್ಟು ಕೆರಳಿದ ಯುವತಿ, "ನೀವು ಸುಮ್ಮನಿರಿ" ಎಂದು ಆ ಮಹಿಳೆಗೂ ಗದರಿಸಿದ್ದಾಳೆ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡ ಇತರ ಸ್ಥಳೀಯರು ಮಧ್ಯಪ್ರವೇಶಿಸಿ ಜಗಳ ಬಿಡಿಸಲು ಮುಂದಾಗಿದ್ದಾರೆ.

Also Read
ಮೆಟ್ರೋ ನಿಲ್ದಾಣಕ್ಕೆ ಶಂಕರ್‌ನಾಗ್‌ ಹೆಸರಿಡಿ: ಸರ್ಕಾರಕ್ಕೆ ಆಟೋ ಯೂನಿಯನ್​ಗಳಿಂದ ಒತ್ತಾಯ! Shankar Nag
CCTV footage captures two sisters entering a snack shop in Varanasi and scattering items around.

ಈ ಗದ್ದಲದ ನಡುವೆ ಸಹೋದರಿಯರಲ್ಲಿ ಒಬ್ಬಳು ಸ್ಥಳೀಯರ ಬಳಿ ಕ್ಷಮೆ ಕೇಳುತ್ತಿರುವುದು ಕಂಡುಬಂದರೆ, ಮತ್ತೊಬ್ಬಳು ಘಟನೆಯನ್ನು ರೆಕಾರ್ಡ್ ಮಾಡುತ್ತಿದ್ದವರ ಕೈಯಿಂದ ಫೋನ್ ಕಸಿದುಕೊಳ್ಳಲು ಯತ್ನಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಪೊಲೀಸ್ ಠಾಣೆ ಮೆಟ್ಟಿಲೇರಿದ ಮಾಲೀಕ!

ಯುವತಿಯರು ತಮ್ಮ ಮಾತು ಕೇಳದೆ ಅಂಗಡಿಗೆ ನಷ್ಟ ಉಂಟುಮಾಡಿದ್ದರಿಂದ, ರೆಸ್ಟೋರೆಂಟ್ ಮಾಲೀಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಾಲೀಕನ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸಿಪಿ ಗೌರವ್ ಕುಮಾರ್, "ಘಟನೆಯ ವಿಡಿಯೋ ವೈರಲ್ ಆಗಿದ್ದು, ದೂರು ದಾಖಲಾಗಿದೆ. ಎರಡೂ ಕಡೆಯವರ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ" ಎಂದು ತಿಳಿಸಿದ್ದಾರೆ, (ಏಜೆನ್ಸೀಸ್​).