ಮೆಟ್ರೋ ನಿಲ್ದಾಣಕ್ಕೆ ಶಂಕರ್‌ನಾಗ್‌ ಹೆಸರಿಡಿ: ಸರ್ಕಾರಕ್ಕೆ ಆಟೋ ಯೂನಿಯನ್​ಗಳಿಂದ ಒತ್ತಾಯ! Shankar Nag

Auto-rickshaw driver associations have urged the government to name a Bengaluru Metro station after the late actor Shankar Nag.
ಬೆಂಗಳೂರಿನ ಮೆಟ್ರೋ ನಿಲ್ದಾಣವೊಂದಕ್ಕೆ ದಿವಂಗತ ನಟ ಶಂಕರ್‌ನಾಗ್‌ ಅವರ ಹೆಸರನ್ನು ನಾಮಕರಣ ಮಾಡುವಂತೆ ಆಟೋ ಚಾಲಕರ ಸಂಘಟನೆಗಳು ಸರ್ಕಾರಕ್ಕೆ ಒತ್ತಾಯ ಮಾಡಿವೆ
Published on: 

ಬೆಂಗಳೂರು: ಕನ್ನಡ ಚಿತ್ರರಂಗದ ಮೇರುನಟ ದಿ. ಶಂಕರ್‌ನಾಗ್‌ ಅವರ ಹೆಸರನ್ನು ಯಾವುದಾದರು ಒಂದು ಮೆಟ್ರೋ ನಿಲ್ದಾಣಕ್ಕೆ ನಾಮಕರಣ ಮಾಡಬೇಕೆಂದು ಪೀಸ್‌ ಆಟೋ ಹಾಗೂ ಆದರ್ಶ ಆಟೋ ಯೂನಿಯನ್‌ ಸಂಘವು ಒತ್ತಾಯಿಸಿದೆ.

ಮೇರುನಟ ದಿ. ಶಂಕರ್‌ನಾಗ್‌ ಅವರ ಜನ್ಮದಿನದ ಅಂಗವಾಗಿ ರಾಜೀವ್‌ಗಾಂಧಿ ಆಟದ ಮೈದಾನದಲ್ಲಿ ಆಯೋಜಿಸಿದ್ದ ಚಾಲಕರ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಈ ಹಕ್ಕೊತ್ತಾಯ ಮಂಡಿಸಲಾಗಿದೆ.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅರಣ್ಯ, ಪರಿಸರ ಮತ್ತು ಜೀವ ಪರಿಸರ ಸಚಿವ ಶ್ರೀ ರಾಮಲಿಂಗಾರೆಡ್ಡಿ, ಶಂಕರ್‌ನಾಗ್‌ ಅವರು ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದು, ಆಟೋ ಚಾಲಕರ ಮಹತ್ವ ಹಾಗೂ ಅವರ ಅಸ್ತಿತ್ವವನ್ನು ತಮ್ಮ ಚಿತ್ರಗಳ ಮೂಲಕ ಜನರ ಮನಸ್ಸನ್ನು ಗೆದ್ದಿದ್ದಾರೆ. ಪ್ರತಿ ವರ್ಷ ಅವರ ಹೆಸರಿನಲ್ಲಿ ಆಟೋ ಚಾಲಕರೆಲ್ಲಾ ಒಗ್ಗೂಡಿ ಅವರ ಜನ್ಮದಿನಾಚರಣೆ ಆಚರಿಸುತ್ತಿರುವುದು ಹೆಚ್ಚು ಪ್ರಶಂಸನೀಯ ಎಂದು ಶ್ಲಾಘಿಸಿದ್ದಾರೆ.

ಆದಿ ಚುಂಚನಗಿರಿ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ ಮಾತನಾಡಿ, ಆಟೋ ಚಾಲಕರ ಮಕ್ಕಳು ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುವ ಮೂಲಕ ಚಾಲಕರ ಮಕ್ಕಳು ಯಾವುದರಲ್ಲೂ ಕಡಿಮೆ ಇಲ್ಲ ಎಂಬುದನ್ನು ತೋರಿಸಬೇಕು, ನಮ್ಮ ಮಠವು ಈಗಾಗಲೇ ಸಾಕಷ್ಟು ಆಟೋಚಾಲಕ ಮಕ್ಕಳಿಗೆ ವಿದ್ಯಾಭ್ಯಾಸದ ಸಹಕಾರ ಒದಗಿಸುತ್ತಿದ್ದು, ಇನ್ನಷ್ಟು ಈ ಸೇವೆಗೆ ನಾವು ಸಿದ್ಧ ಎಂದು ಹೇಳಿದರು. ಮಕ್ಕಳು ಶಿಕ್ಷಣದ ಮೂಲಕವಷ್ಟೇ ಎತ್ತರಕ್ಕೆ ಬೆಳೆಯಲು ಸಾಧ್ಯ, ಹೀಗಾಗಿ ಮೊದಲು ಓದಿನತ್ತ ಲಕ್ಷ್ಯ ಇರಲಿ ಎಂದು ಕಿವಿ ಮಾತು ನೀಡಿದ್ದಾರೆ.

Also Read
ಭಾರತೀಯ ಸೇನೆಯಲ್ಲಿ 'ಹನಿಟ್ರ್ಯಾಪ್' ಭೂತ: ಸೈಬರ್ ಬೇಹುಗಾರಿಕೆ ಬಗ್ಗೆ ಏರ್ ಚೀಫ್ ಮಾರ್ಷಲ್ ಆಶುತೋಷ್ ದೀಕ್ಷಿತ್ ಹೇಳಿದ್ದೇನು? Ashutosh Dixit
Auto-rickshaw driver associations have urged the government to name a Bengaluru Metro station after the late actor Shankar Nag.

ಶಂಕರ್‌ನಾಗ್‌ ಪ್ರಶಸ್ತಿ ವಿತರಣೆ

ಈ ಸಂದರ್ಭದಲ್ಲಿ ಗ್ರಾಹಕರ ವಸ್ತುಗಳನ್ನು ಮರಳಿ ತಲುಪಿಸಿ, ಮಾನವೀಯ ಮೌಲ್ಯ ಮೆರೆದಂತಹ 20 ಆಟೋ ಚಾಲಕರಿಗೆ ಶಂಕರ್‌ನಾಗ್‌ ಪ್ರಶಸ್ತಿ ನೀಡಿ, ಗೌರವಿಸಲಾಯಿತು. ಅಷ್ಟೆ ಅಲ್ಲದೆ, ಶಂಕರ್‌ನಾಗ್‌ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶಂಕರ್‌ನಾಗ್‌ ಅವರ ಭಾವಚಿತ್ರದೊಂದಿಗೆ ಹೂವಿನಲಂಕಾರದಲ್ಲಿ ಸಿಂಗಾರಗೊಂಡ ಆಟೋರಥ ಇಡೀ ಬೆಂಗಳೂರಿನಾದ್ಯಂತ ಸಂಚರಿಸಿತು. ಈ ಕಾರ್ಯಕ್ರಮಕ್ಕೆ ಬೆಂಗಳೂರಿನಾದ್ಯಂತ ಸುಮಾರು 700 ಚಾಲಕರು ಆಟೋ ರ್ಯಾಲಿ ಮೂಲಕ ಆಗಮಿಸಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ನಟ ಚಿಕ್ಕಣ್ಣ, ಪೀಸ್‌ ಆಟೋ ರಾಜ್ಯಾಧ್ಯಕ್ಷ ರಘು ನಾರಾಯಣ ಗೌಡ, ಆದರ್ಶ ಆಟೋ ಯೂನಿಯನ್‌ ರಾಜ್ಯಾಧ್ಯಕ್ಷ ಟಿ. ಮಂಜುನಾಥ್‌, ಕಾರ್ಯಕ್ರಮದ ರೂವಾರಿ ರಾಘವೇಂದ್ರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.