ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಯೋಗೇಂದ್ರ ಯಾದವ್, ಕಳೆದ ವರ್ಷ ಸುಪ್ರೀಂ ಕೋರ್ಟ್ ಈ ಪ್ರಕರಣದ ವಾದ-ಪ್ರತಿವಾದಗಳನ್ನು ಆಲಿಸಲು ಆರಂಭಿಸಿದ ಸಮಯವನ್ನು ಉಲ್ಲೇಖಿಸಿ, ನ್ಯಾಯಾಲಯದ ವಿರುದ್ಧ ಕೆಲವು ಆರೋಪಗಳನ್ನು ಮಾಡಿದ್ದಾರೆ. ನ್ಯಾಯಾಲಯವು ಸತತ ಮೂರು ದಿನಗಳ ಕಾಲ ವಾದಗಳನ್ನು ಆಲಿಸಿದ ನಂತರ, ಈ ಪ್ರಕ್ರಿಯೆಯ (SIR) ಸಾಂವಿಧಾನಿಕ ಸಿಂಧುತ್ವವನ್ನು ಪರಿಶೀಲಿಸುವ ಮುಖ್ಯ ಉದ್ದೇಶದಿಂದ ದೂರ ಸರಿಯಿತು, ಅದರ ಬದಲು ಕೇವಲ ಕುಂದುಕೊರತೆ ನಿವಾರಣೆ ಮತ್ತು ಮಧ್ಯಸ್ಥಿಕೆ ವಹಿಸುವ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡಿತು. ಈ ಮೂಲಕ ಸುಪ್ರೀಂ ಕೋರ್ಟ್ ಒಂದು ಸಾಂವಿಧಾನಿಕ ನ್ಯಾಯಾಲಯದಂತೆ ವರ್ತಿಸುವ ಬದಲಿಗೆ, ಗ್ರಾಹಕ ವೇದಿಕೆಯಂತೆ ಕಾರ್ಯನಿರ್ವಹಿಸಿತು ಎಂದು ಯಾದವ್ ಅಭಿಪ್ರಾಯಪಟ್ಟಿದ್ದಾರೆ.