ಚುನಾವಣಾ ಆಯೋಗದ ‘SIR’ ಪ್ರಕ್ರಿಯೆ ಸಂಪೂರ್ಣ ಕಾನೂನುಬದ್ಧ: ಸುಪ್ರೀಂ ಐತಿಹಾಸಿಕ ತೀರ್ಪು | Supreme Court on SIR judgment

ಚುನಾವಣಾ ಆಯೋಗದ ‘SIR’ ಪ್ರಕ್ರಿಯೆ ಸಂಪೂರ್ಣ ಕಾನೂನುಬದ್ಧ: ಸುಪ್ರೀಂ ಐತಿಹಾಸಿಕ ತೀರ್ಪು
ಚುನಾವಣಾ ಆಯೋಗದ ‘SIR’ ಪ್ರಕ್ರಿಯೆ ಸಂಪೂರ್ಣ ಕಾನೂನುಬದ್ಧ: ಸುಪ್ರೀಂ ಐತಿಹಾಸಿಕ ತೀರ್ಪು
Published on
ನವದೆಹಲಿ: ದೇಶದಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವ ನಿಟ್ಟಿನಲ್ಲಿ ಅಕ್ರಮ ಮತದಾರರನ್ನು ಪಟ್ಟಿಯಿಂದ ಹೊರಹಾಕಲು ಕೇಂದ್ರ ಚುನಾವಣಾ ಆಯೋಗ (ECI) ಕೈಗೊಂಡಿದ್ದ ಅತ್ಯಂತ ಕಟ್ಟುನಿಟ್ಟಿನ ವಿಶೇಷ ತೀವ್ರ ಪರಿಷ್ಕರಣೆ (Supreme Court on SIR judgment) ಪ್ರಕ್ರಿಯೆಯ ಕಾನೂನುಬದ್ಧತೆಯನ್ನು ಭಾರತದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ ಬುಧವಾರ (ಮೇ,27) ಎತ್ತಿಹಿಡಿದಿದೆ. ಮತದಾರರ ಪಟ್ಟಿಯನ್ನು ಆಳವಾಗಿ ಪರಿಷ್ಕರಿಸುವುದು ಮುಕ್ತ ಮತ್ತು ಪಾರದರ್ಶಕ ಚುನಾವಣೆಯ ಸಾಂವಿಧಾನಿಕ ಆಶಯದ ಭಾಗವಾಗಿದೆ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ನೇತೃತ್ವದ ದ್ವಿಪೀಠವು ಐತಿಹಾಸಿಕ ತೀರ್ಪು ಪ್ರಕಟಿಸಿದೆ.
ಚುನಾವಣಾ ಆಯೋಗವು ತನ್ನ ವ್ಯಾಪ್ತಿಯನ್ನು ಮೀರಿ ಈ ಕಠಿಣ ಕ್ರಮ ಕೈಗೊಂಡಿದೆ ಎಂದು ಸಲ್ಲಿಕೆಯಾಗಿದ್ದ ಎಲ್ಲಾ ಸರಣಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (PIL) ವಜಾಗೊಳಿಸಿರುವ ಸುಪ್ರೀಂ ಕೋರ್ಟ್, SIR ಪ್ರಕ್ರಿಯೆಯು ಸಂವಿಧಾನದ ಪರಿಧಿಯಲ್ಲೇ ನಡೆದಿದೆ ಎಂದು ಸ್ಪಷ್ಟಪಡಿಸಿದೆ.

"ಇದು ಆಯೋಗದ ಸಾಂವಿಧಾನಿಕ ಕರ್ತವ್ಯ": ಸಿಜೆಐ ಸೂರ್ಯ ಕಾಂತ್

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರಿದ್ದ ಪೀಠವು ಈ ಮಹತ್ವದ ತೀರ್ಪನ್ನು ಪ್ರಕಟಿಸಿದೆ. ದೇಶದ ಸಂವಿಧಾನದ ವಿಧಿ 324 ಮತ್ತು 1950 ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 21(3) ರ ಅಡಿಯಲ್ಲಿ ಯಾವುದೇ ಸಮಯದಲ್ಲಿ ವಿಶೇಷ ಪರಿಷ್ಕರಣೆ ನಡೆಸಲು ಚುನಾವಣಾ ಆಯೋಗಕ್ಕೆ ಸಂಪೂರ್ಣ ಶಾಸನಬದ್ಧ ಅಧಿಕಾರವಿದೆ. ಅಲ್ಲದೆ, ಸಾಮಾನ್ಯ ಮತದಾರರ ಪಟ್ಟಿ ಪರಿಷ್ಕರಣೆಗಿಂತ ಇದು ಭಿನ್ನವಾಗಿದೆ ಎಂದಮಾತ್ರಕ್ಕೆ ಇದನ್ನು ಅಕ್ರಮ ಅಥವಾ ಕಾನೂನುಬಾಹಿರ ಎಂದು ಕರೆಯಲು ಸಾಧ್ಯವಿಲ್ಲ. ಈ ಪ್ರಕ್ರಿಯೆಯು ಜನಪ್ರತಿನಿಧಿ ಕಾಯ್ದೆಯನ್ನು ಉಲ್ಲಂಘಿಸುವುದಿಲ್ಲ, ಬದಲಿಗೆ ಸಂವಿಧಾನದ ಆಶಯಕ್ಕೆ ಜೀವ ತುಂಬುತ್ತದೆ ಎಂದು ನ್ಯಾಯಪೀಠ ಹೇಳಿದೆ.
ಆಯೋಗವು ತನ್ನ ಶಾಸನಬದ್ಧ ಅಧಿಕಾರವನ್ನು ಮೀರಿ ಕಾರ್ಯನಿರ್ವಹಿಸಿದೆ ಎಂಬ ಅರ್ಜಿದಾರರ ವಾದ ಸಂಪೂರ್ಣ ತಪ್ಪು ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿದೆ.

ದಾಖಲೆಗಳಿಲ್ಲದಿದ್ದರೆ ಹೆಸರು ವಜಾ ಶಿಫಾರಸು ನ್ಯಾಯಸಮ್ಮತ!

ದೇಶದ ಪೌರತ್ವದ ಬಗ್ಗೆ ಗಂಭೀರ ಅನುಮಾನಗಳನ್ನು ಹುಟ್ಟುಹಾಕುವಂತಹ ಅಥವಾ ನಕಲಿ ದಾಖಲೆಗಳನ್ನು ಹೊಂದಿರುವ ವ್ಯಕ್ತಿಗಳ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತಕ್ಷಣವೇ ತೆಗೆದುಹಾಕಲು ಚುನಾವಣಾ ಆಯೋಗಕ್ಕೆ ಸಂಪೂರ್ಣ ಹಕ್ಕಿದೆ ಎಂದು ಸುಪ್ರೀಂ ಅಭಿಪ್ರಾಯಪಟ್ಟಿದೆ. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ನೋಟಿಸ್ ನೀಡುವುದು, ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸುವುದು, ಅನುಮಾನಾಸ್ಪದ ಪ್ರಕರಣಗಳ ವೈಯಕ್ತಿಕ ತನಿಖೆ ನಡೆಸುವುದು ಮತ್ತು ಮೇಲ್ಮನವಿ ಸಲ್ಲಿಸಲು ಮುಕ್ತ ಅವಕಾಶ ನೀಡುವುದು. ಈ ಎಲ್ಲಾ ಕ್ರಮಗಳು ನ್ಯಾಯಸಮ್ಮತತೆಯ ನಿಯಮಗಳನ್ನು ಪೂರೈಸುತ್ತವೆ. ಹೀಗಾಗಿ ಈ ಪ್ರಕ್ರಿಯೆಯಲ್ಲಿ ಯಾವುದೇ ಲೋಪಗಳಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಅಲ್ಲದೆ, ತಪಾಸಣೆಯ ಸಮಯದಲ್ಲಿ ಮತದಾರರಿಂದ ದಾಖಲೆಗಳನ್ನು ಕೇಳಿದ ತಕ್ಷಣವೇ ಅವರನ್ನು ದೇಶದ ನಾಗರಿಕರಲ್ಲ ಎಂದು ಬಿಂಬಿಸಲಾಗುತ್ತಿದೆ ಎಂಬ ಅರ್ಜಿದಾರರ ಆರೋಪವನ್ನು ಕೋರ್ಟ್ ತಳ್ಳಿಹಾಕಿದೆ.

65 ಲಕ್ಷ ನಕಲಿ ಮತದಾರರ ಪಲಾಯನ! ಬಿಹಾರದಲ್ಲಿ ಮೊದಲ ಹಂತದ ಆಕ್ಷನ್

ಕಳೆದ ವರ್ಷ ಆಗಸ್ಟ್ 12 ರಿಂದ ಈ ಪ್ರಕರಣದ ಅಂತಿಮ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಆರಂಭಿಸಿತ್ತು. ಚುನಾವಣಾ ಆಯೋಗವು ಈ SIR ಕಟ್ಟುನಿಟ್ಟಿನ ನಿಯಮಾವಳಿಯ ಅಡಿಯಲ್ಲಿ ದೇಶಾದ್ಯಂತ ನಡೆಸಿದ ಪ್ರಾಥಮಿಕ ತಪಾಸಣೆಯಲ್ಲಿ ಬರೋಬ್ಬರಿ 65 ಲಕ್ಷ ಅಕ್ರಮ ಹಾಗೂ ಖೋಟಾ ಮತದಾರರ ಹೆಸರುಗಳನ್ನು ಕರಡು ಪಟ್ಟಿಯಿಂದ ಯಶಸ್ವಿಯಾಗಿ ತೆಗೆದುಹಾಕಿತ್ತು. ಬಿಹಾರದಲ್ಲಿ ಮೊದಲ ಹಂತವಾಗಿ ಈ ಬೃಹತ್ ಆಪರೇಷನ್ ನಡೆದಿತ್ತು.
ಆಯೋಗದ ಎಸ್‌ಐಆರ್ ಅಧಿಸೂಚನೆಯ ಪ್ರಕಾರ, 2002 ಅಥವಾ 2003 ರ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಮತದಾರರು, ಆ ಪಟ್ಟಿಯಲ್ಲಿದ್ದ ತಮ್ಮ ಪೂರ್ವಜರ ಲಿಂಕೇಜ್ ಅಥವಾ ವಂಶಾವಳಿಯ ಅಧಿಕೃತ ದಾಖಲೆಗಳನ್ನು ಹಾಜರುಪಡಿಸುವುದು ಕಡ್ಡಾಯವಾಗಿತ್ತು. ದಾಖಲೆ ನೀಡದ ಲಕ್ಷಾಂತರ ಅಕ್ರಮ ನುಸುಳುಕೋರರು ಹಾಗೂ ನಕಲಿ ವೋಟರ್ಸ್ ಇದರಿಂದಾಗಿ ಪಟ್ಟಿಯಿಂದ ಹೊರಬಿದ್ದಿದ್ದರು.
ಸುಪ್ರೀಂ ಕೋರ್ಟ್‌ನ ಈ ತೀರ್ಪು ದೇಶದಾದ್ಯಂತ ಅಕ್ರಮ ವಲಸಿಗರು ಮತ್ತು ರೋಹಿಂಗ್ಯಾಗಳನ್ನು ವೋಟರ್ ಲಿಸ್ಟ್‌ನಿಂದ ಹೊರಹಾಕಲು ಹೋರಾಡುತ್ತಿದ್ದ ಭದ್ರತಾ ಸಂಸ್ಥೆಗಳಿಗೆ ಹಾಗೂ ಚುನಾವಣಾ ಆಯೋಗಕ್ಕೆ ಆನೆಬಲ ತಂದಿಟ್ಟಿದ್ದು, ಮುಂಬರುವ ಪ್ರತಿಯೊಂದು ಚುನಾವಣೆಗಳೂ ನೈಜ ಭಾರತೀಯ ನಾಗರಿಕರಿಂದ ಮಾತ್ರ ನಿರ್ಧಾರವಾಗಲಿವೆ ಎಂಬುದನ್ನು ಸುಪ್ರೀಂ ಕೋರ್ಟ್ ಸಾಬೀತುಪಡಿಸಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net