ಪ್ರಸ್ತುತ ಜಗತ್ತಿನ 30 ದೇಶಗಳಲ್ಲಿ ಸಮರ ಅಥವಾ ಸಂಘರ್ಷದಂಥ ಸ್ಥಿತಿ ಇದೆ. ರಷ್ಯಾ-ಯೂಕ್ರೇನ್, ಇಸ್ರೇಲ್-ಲೆಬನಾನ್ ಬಳಿಕ ಇಸ್ರೇಲ್-ಇರಾನ್ ನಡುವೆ ಸಂಘರ್ಷ ಸಂಭವಿಸಿದೆ. ಅಲ್ಲದೆ, ಅಮೆರಿಕ ಮತ್ತು ವೆನಿಜುವೆಲಾ ನಡುವೆ ಸಂಘರ್ಷ ಮುಂದುವರಿದಿದ್ದು, ವೆನಿಜುವೆಲಾ ಅಧ್ಯಕ್ಷರನ್ನೇ ಅಮೆರಿಕ ಬಂಧಿಸಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ. ಇರಾನ್ನಲ್ಲಿ ಆಂತರಿಕ ಸಂಘರ್ಷ ಏರ್ಪಟ್ಟಿದ್ದು, ಖಮೇನಿ ಆಡಳಿತದ ವಿರುದ್ಧ ದೇಶದ 100ಕ್ಕೂ ಹೆಚ್ಚು ನಗರಗಳ 250 ಸ್ಥಳಗಳಲ್ಲಿ ಪ್ರತಿಭಟನೆ ನಡೆದಿದೆ. 500ಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಮತ್ತೊಂದೆಡೆ, ಬಾಂಗ್ಲಾದೇಶದಲ್ಲಿ ಫೆಬ್ರವರಿಯಲ್ಲಿ ಸಂಸತ್ ಚುನಾವಣೆ ಘೋಷಣೆಯಾಗಿದ್ದರೂ ಹಿಂಸಾಚಾರ ನಿಂತಿಲ್ಲ. ನೇಪಾಳದಲ್ಲಿ ಜೆನ್-ಝಿ ಪ್ರತಿಭಟನೆಯ ನಂತರ ಅಲ್ಲಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಅಮೆರಿಕ-ರಷ್ಯಾ ನಡುವಿನ ವಾಣಿಜ್ಯ ಸಂಬಂಧಗಳು ಬಿಗಡಾಯಿಸಿವೆ. ರಷ್ಯಾದ ಮೇಲೆ ಮತ್ತಷ್ಟು ನಿರ್ಬಂಧಗಳನ್ನು ಹೇರುವ ನಿಟ್ಟಿನಲ್ಲಿ ಅಮೆರಿಕ ಈಗಾಗಲೇ ಮಸೂದೆ ಸಿದ್ಧಪಡಿಸಿದೆ. ಈ ಮಸೂದೆ ಅಂಗೀಕಾರಗೊಂಡು ಕಾನೂನಾಗಿ ಬದಲಾದರೆ, ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿರುವ ಭಾರತ, ಚೀನಾ, ಬ್ರೆಜಿಲ್ ಮೇಲೆ ಶೇಕಡ 500ರಷ್ಟು ಸುಂಕ ಬೀಳಲಿದೆ. ಒಟ್ಟಾರೆ ಜಾಗತಿಕವಾಗಿ ಯಾವ ದಿಕ್ಕಿನತ್ತ ನೋಡಿದರೂ ಸಂಘರ್ಷ, ಹಿಂಸಾಚಾರ ಮತ್ತು ಅಸ್ಥಿರತೆಯೇ ಕಣ್ಣಿಗೆ ರಾಚುತ್ತಿದೆ. ಈ ಹಿನ್ನೆಲೆಯಲ್ಲಿ ಸುರಕ್ಷಿತ ಹೂಡಿಕೆಯ ಮಾರ್ಗವನ್ನು ಹುಡುಕುತ್ತಿರುವ ಜನರು ಚಿನ್ನ ಮತ್ತು ಬೆಳ್ಳಿಯ ಖರೀದಿಯೇ ಬೆಸ್ಟ್ ಎಂದುಕೊಂಡು, ಖರೀದಿ ಹೆಚ್ಚಿಸಿದ್ದಾರೆ. ರಾಜಕೀಯ ಸಂಘರ್ಷ ಮತ್ತು ಅಸ್ಥಿರತೆಯ ವಾತಾವರಣ ಹಾಗೂ ಆರ್ಥಿಕ ಹಿಂಜರಿತದ ಲಕ್ಷಣ ಕಾಣಿಸಿದಾಗ ಚಿನ್ನ ಮತ್ತು ಬೆಳ್ಳಿಯ ಖರೀದಿ ಹೆಚ್ಚಾಗುವ ಕ್ರಮ ಸಂಪ್ರದಾಯ ಎಂಬಂತೆ ನಡೆದು ಬಂದಿದ್ದು, ಸ್ವಾಭಾವಿಕವಾಗಿ ದರ ಏರಿಕೆಯಾಗುತ್ತದೆ.