ಮಧ್ಯಪ್ರಾಚ್ಯದಲ್ಲಿ ಸ್ತಬ್ಧವಾದ ಆಕಾಶ: ಯುದ್ಧದ ಭೀತಿಯಲ್ಲಿ ಹಾರಾಟ ನಿಲ್ಲಿಸಿದ ವಿಮಾನಯಾನ ಸಂಸ್ಥೆಗಳ ಪಟ್ಟಿ ಇಲ್ಲಿದೆ | Flight Cancellations

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ದುಬೈ/ನವದೆಹಲಿ: ಇಡೀ ಜಗತ್ತು ಈಗ ಆತಂಕದಿಂದ ಆಕಾಶದತ್ತ ನೋಡುವಂತಾಗಿದೆ. ಶನಿವಾರ(ಫೆ.28) ಬೆಳಿಗ್ಗೆ ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಭೀಕರ ದಾಳಿಯು ಕೇವಲ ನೆಲದ ಮೇಲಷ್ಟೇ ಅಲ್ಲ, ಆಗಸದಲ್ಲೂ ಅಲ್ಲೋಲ-ಕಲ್ಲೋಲ ಸೃಷ್ಟಿಸಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹಾ ಸಮರ ಘೋಷಿಸುತ್ತಿದ್ದಂತೆಯೇ, ಮಧ್ಯಪ್ರಾಚ್ಯದ ಬಹುತೇಕ ದೇಶಗಳು ತಮ್ಮ ವಾಯುಪ್ರದೇಶವನ್ನು (Airspace) ಸಂಪೂರ್ಣವಾಗಿ ಬಂದ್ ಮಾಡಿವೆ.

ಯಾವೆಲ್ಲಾ ದೇಶಗಳ ಆಕಾಶ ಈಗ ನೋ ಫ್ಲೈ ಝೋನ್?

ಯುದ್ಧದ ಕಿಡಿ ಹೊತ್ತಿಕೊಂಡ ಬೆನ್ನಲ್ಲೇ ವಿಮಾನಗಳ ಮತ್ತು ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಯುಎಇ (UAE), ಕುವೈತ್, ಕತಾರ್, ಇರಾನ್, ಇಸ್ರೇಲ್ ಮತ್ತು ಇರಾಕ್ ದೇಶಗಳು ತಮ್ಮ ವಾಯುಪ್ರದೇಶವನ್ನು ಮುಚ್ಚಿವೆ. ಬಹ್ರೇನ್ ಮತ್ತು ದೋಹಾ ಕೂಡ ಇದೇ ಹಾದಿ ತುಳಿದಿವೆ. ಫ್ಲೈಟ್ ರಾಡಾರ್-24 ಪ್ರಕಾರ, ಈ ದೇಶಗಳ ಮೇಲೆ ಈಗ ಯಾವುದೇ ವಿಮಾನಗಳ ಸಂಚಾರವಿಲ್ಲದೆ ಆಕಾಶ ಸ್ತಬ್ಧವಾಗಿದೆ.

ವಿಮಾನಯಾನ ಸಂಸ್ಥೆಗಳ ತುರ್ತು ನಿರ್ಧಾರ: ಯಾವುದು ರದ್ದು? ಯಾವುದು ಲೇಟ್?

ಈ ಯುದ್ಧದ ಬಿಸಿ ಜಗತ್ತಿನ ಪ್ರಮುಖ ಏರ್‌ಲೈನ್ಸ್‌ಗಳಿಗೆ ತಟ್ಟಿದೆ. ನೀವು ಅಥವಾ ನಿಮ್ಮವರು ಈ ದೇಶಗಳಿಗೆ ಪ್ರಯಾಣಿಸುವವರಿದ್ದರೆ ಈ ಮಾಹಿತಿ ಗಮನಿಸಿ:

ಏರ್ ಇಂಡಿಯಾ (Air India): ಭಾರತದ ಪ್ರಮುಖ ಸಂಸ್ಥೆ ಏರ್ ಇಂಡಿಯಾ, ದುಬೈ ಸೇರಿದಂತೆ ಮಧ್ಯಪ್ರಾಚ್ಯದ ಎಲ್ಲಾ ದೇಶಗಳಿಗೆ ತನ್ನ ವಿಮಾನ ಹಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿದೆ.

ಎಮಿರೇಟ್ಸ್(Emirates) ಮತ್ತು ಎತಿಹಾದ್(Etihad Airways): ದುಬೈನಿಂದ ಹೊರಡಬೇಕಿದ್ದ ಎಲ್ಲಾ ವಿಮಾನಗಳನ್ನು ಎಮಿರೇಟ್ಸ್ ನೆಲಕ್ಕಿಳಿಸಿದೆ (Ground). ಪರಿಸ್ಥಿತಿ ತಿಳಿಯಾಗುವವರೆಗೆ ಯಾವುದೇ ಹಾರಾಟ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಕತಾರ್ ಏರ್ವೇಸ್(Qatar Airways): ದೋಹಾ ವಿಮಾನ ನಿಲ್ದಾಣ ಸ್ತಬ್ಧವಾಗಿದ್ದು, ಪ್ರಯಾಣಿಕರಿಗೆ ನೆರವಾಗಲು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಇತರ ಸಂಸ್ಥೆಗಳು: ಲುಫ್ಥಾನ್ಸ, ವರ್ಜಿನ್ ಅಟ್ಲಾಂಟಿಕ್ ಮತ್ತು ನಾರ್ವೇಜಿಯನ್ ಏರ್‌ಲೈನ್ಸ್ ಮಾರ್ಚ್ 4 ಅಥವಾ 7 ರವರೆಗೆ ದುಬೈ ಮತ್ತು ಟೆಲ್ ಅವೀವ್ ಕಡೆಗಿನ ತನ್ನ ಸೇವೆಗಳನ್ನು ಸ್ಥಗಿತಗೊಳಿಸಿವೆ.

ಪ್ರಯಾಣಿಕರ ಪರದಾಟ: 90 ನಿಮಿಷಗಳಷ್ಟು ತಡ!

ಕೆಲವು ವಿಮಾನಗಳು ಸಂಚಾರ ನಡೆಸುತ್ತಿದ್ದರೂ, ಅವು ಇರಾನ್ ಮತ್ತು ಇರಾಕ್ ವಾಯುಪ್ರದೇಶವನ್ನು ತಪ್ಪಿಸಲು ಬೇರೆ ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಇದರಿಂದಾಗಿ ಪ್ರಯಾಣದ ಅವಧಿ 30 ರಿಂದ 90 ನಿಮಿಷಗಳಷ್ಟು ಹೆಚ್ಚಾಗುತ್ತಿದೆ. ಇದು ಕೇವಲ ವಿಳಂಬವಲ್ಲ, ವಿಮಾನಯಾನ ಸಂಸ್ಥೆಗಳ ಇಂಧನ ವೆಚ್ಚವನ್ನೂ ಹೆಚ್ಚಿಸಿದೆ, ಇದು ಮುಂದಿನ ದಿನಗಳಲ್ಲಿ ಟಿಕೆಟ್ ದರ ಏರಿಕೆಗೂ ಕಾರಣವಾಗಬಹುದು.

ಪೋಷಕರು ಮತ್ತು ಪ್ರವಾಸಿಗರಿಗೆ ಸೂಚನೆ

ಯುಎಇ ವಿಮಾನಯಾನ ಪ್ರಾಧಿಕಾರ (GCAA) ಇದೊಂದು ಅಸಾಧಾರಣ ಮುನ್ನೆಚ್ಚರಿಕಾ ಕ್ರಮ ಎಂದು ಕರೆದಿದೆ. ಭಾರತದ ವಿದೇಶಾಂಗ ಇಲಾಖೆಯೂ ಈಗಾಗಲೇ ಇರಾನ್ ಮತ್ತು ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ಮನೆಯಿಂದ ಹೊರಬರಬೇಡಿ ಎಂದು ಸೂಚಿಸಿದೆ.
ನೀವು ಒಂದು ವೇಳೆ ಈ ದೇಶಗಳಿಗೆ ಹೋಗಲು ಟಿಕೆಟ್ ಬುಕ್ ಮಾಡಿದ್ದರೆ, ವಿಮಾನ ನಿಲ್ದಾಣಕ್ಕೆ ಹೋಗುವ ಮುನ್ನ ನಿಮ್ಮ ಏರ್‌ಲೈನ್ಸ್ ವೆಬ್‌ಸೈಟ್ ಅಥವಾ ಟ್ರಾವೆಲ್ ಏಜೆಂಟ್​ರನ್ನು ಸಂಪರ್ಕಿಸಿ. ಪರಿಸ್ಥಿತಿ ಕ್ಷಣಕ್ಷಣಕ್ಕೂ ಬದಲಾಗುತ್ತಿದ್ದು, ಯಾವುದೇ ಮುನ್ಸೂಚನೆಯಿಲ್ಲದೆ ವಿಮಾನಗಳು ರದ್ದಾಗುವ ಸಾಧ್ಯತೆಯಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net