ಇನ್ಮುಂದೆ ಹಸುಗಳಿಗೂ ಬೇಕು ಬರ್ತ್ ಸರ್ಟಿಫಿಕೇಟ್!.. ದನಗಳ ಸಾಗಾಟ ತಡೆದು ಶಾಕ್ ಕೊಟ್ಟ ಬೆಂಗಾಲ್ ಬಿಜೆಪಿ ಶಾಸಕಿ; ಟಿಎಂಸಿ ಕಿಡಿ | Rekha Patra

Rekha Patra | ಬಿಜೆಪಿ ಶಾಸಕಿ ರೇಖಾ ಪಾತ್ರಾ
Rekha Patra | ಬಿಜೆಪಿ ಶಾಸಕಿ ರೇಖಾ ಪಾತ್ರಾ
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಹಿಂಗಲ್‌ಗಂಜ್ ವಿಧಾನಸಭಾ ಕ್ಷೇತ್ರದಿಂದ ಹೊಸದಾಗಿ ಆಯ್ಕೆಯಾಗಿರುವ ಬಿಜೆಪಿ ಶಾಸಕಿ ರೇಖಾ ಪಾತ್ರಾ (Rekha Patra) ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವೊಂದನ್ನು ತಡೆದು ನಿಲ್ಲಿಸಿದ್ದಾರೆ. ಕಸಾಯಿಖಾನೆಗೆ ಸಾಗಿಸುವ ದನಗಳ ವಯಸ್ಸನ್ನು ಸಾಬೀತುಪಡಿಸಲು ಅವುಗಳ ಜನನ ಪ್ರಮಾಣಪತ್ರ ತೋರಿಸಬೇಕು ಎಂದಿದ್ದು, ಈ ಹೇಳಿಕೆ ಈಗ ಟಿಎಂಸಿ ಕಡೆಯಿಂದ ಲೇವಡಿಗೆ ಗುರಿಯಾಗಿದೆ.
ಹಿಂಗಲ್‌ಗಂಜ್ ಕ್ಷೇತ್ರದ ಲೆಬುಖಾಲಿ ಪ್ರದೇಶದ ಮೂಲಕ ಜಾನುವಾರುಗಳನ್ನು ಹೊತ್ತೊಯ್ಯುತ್ತಿದ್ದ ವಾಹನವನ್ನು ಶಾಸಕಿ ರೇಖಾ ಪಾತ್ರಾ ತಡೆದಿದ್ದಾರೆ. ಬಳಿಕ ವಾಹನದಲ್ಲಿದ್ದ ದನಗಳನ್ನು ಕೆಳಗಿಳಿಸಿ, ರಸ್ತೆ ಬದಿಯ ಮರಕ್ಕೆ ಕಟ್ಟಿಹಾಕಿದ ಅವರು, ಪ್ರಾಣಿಗಳಿಗೆ ಒಣಹುಲ್ಲು ಮತ್ತು ನೀರನ್ನು ಒದಗಿಸುವ ವ್ಯವಸ್ಥೆ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ರೇಖಾ ಪಾತ್ರಾ, ಅಕ್ರಮ ಜಾನುವಾರು ವ್ಯಾಪಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಸೂಚನೆ ನೀಡಿದ್ದು, 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜಾನುವಾರುಗಳನ್ನು ಕೊಲ್ಲುವಂತಿಲ್ಲ ಎಂದು ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದೆ ಎಂದು ತಿಳಿಸಿದರು. ಯಾರಾದರೂ ಅಕ್ರಮವಾಗಿ ಹಸುಗಳನ್ನು ಸಾಗಿಸುತ್ತಿರುವುದು ಕಂಡುಬಂದರೆ, ನಾವು ಅವರನ್ನು ಹಿಡಿದು ಹಸುಗಳ ಜನನ ಪ್ರಮಾಣಪತ್ರವನ್ನು ಕೇಳಬೇಕಾಗುತ್ತದೆ. ಅದನ್ನು ತೋರಿಸಲು ವಿಫಲವಾದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದರು.
ಟಿಎಂಸಿ ಲೇವಡಿ...
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ತೃಣಮೂಲ ಕಾಂಗ್ರೆಸ್, ಬಿಜೆಪಿ ಆಡಳಿತವಿರುವ ಯಾವುದೇ ರಾಜ್ಯದಲ್ಲಾದರೂ ಹಸುಗಳಿಗೆ ಜನನ ಪ್ರಮಾಣಪತ್ರ ನೀಡಿರುವುದನ್ನು ಶಾಸಕರು ತೋರಿಸಬಲ್ಲರೇ ಎಂದು ಪ್ರಶ್ನಿಸಿದೆ.
ಬಿಜೆಪಿಯ ಯಾವುದೇ ಡಬಲ್ ಇಂಜಿನ್ ಸರ್ಕಾರ ಹಸುವಿಗೆ ನೀಡಿರುವ ಒಂದು ಜನನ ಪ್ರಮಾಣಪತ್ರವನ್ನು ತಂದು ತೋರಿಸಬೇಕಾಗಿ ಮಾನ್ಯ ಶಾಸಕರಲ್ಲಿ ವಿನಂತಿಸುತ್ತೇವೆ. ಅದು ನಮಗೆ ಉಲ್ಲೇಖಕ್ಕೆ ಸಹಾಯಕವಾಗುತ್ತದೆ. ಒಂದು ವೇಳೆ ಬಿಜೆಪಿ ಅಂತಹ ಪ್ರಮಾಣಪತ್ರವನ್ನು ತೋರಿಸಲು ಯಶಸ್ವಿಯಾದರೆ, ಆ ಪ್ರಮಾಣಪತ್ರಗಳಿಗೆ ಯಾರು ಅಧಿಕಾರ ನೀಡಿದ್ದಾರೆ ಎಂಬುದನ್ನು ನಾವು ಪರಿಶೀಲಿಸಬೇಕಾಗಿದೆ ಎಂದು ಟಿಎಂಸಿ ನಾಯಕ ಕುನಾಲ್ ಘೋಷ್ ವ್ಯಂಗ್ಯವಾಡಿದ್ದಾರೆ.

ಟಿಎಂಸಿ ಕಚೇರಿಯಲ್ಲಿ ಹೊಸ ಆಧಾರ್ ಕಾರ್ಡ್‌ಗಳು ಪತ್ತೆ!

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಸೋಲು ಕಂಡ ಕೇವಲ ಎರಡೇ ವಾರಗಳಲ್ಲಿ, ಬಿಧಾನ್ ನಗರ ವಾರ್ಡ್ ಸಂಖ್ಯೆ 36 ಕ್ಕೆ ಒಳಪಡುವ ವಾಸಂತಿ ದೇವಿ ಕಾಲೋನಿಯಲ್ಲಿರುವ ಟಿಎಂಸಿ ಕಚೇರಿಯೊಂದರಿಂದ ಸಾರ್ವಜನಿಕರಿಗೆ ಸೇರಿದ ಆಧಾರ್ ಕಾರ್ಡ್‌ಗಳು ಪತ್ತೆಯಾಗಿದ್ದು, ಈ ಪ್ರಕರಣ ದೇಶ್ಯಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದೆ.
ವರದಿಗಳ ಪ್ರಕಾರ, ಮೇ 4 ರಿಂದ ಮುಚ್ಚಲ್ಪಟ್ಟಿದ್ದ ಈ ಪಕ್ಷದ ಕಚೇರಿಯನ್ನು ಭಾನುವಾರ ಬೆಳಿಗ್ಗೆ ತೆರೆದಾಗ, ಅಲ್ಲಿನ ಪೆಟ್ಟಿಗೆಯೊಂದರಲ್ಲಿ ಕಾರ್ಡ್‌ಗಳನ್ನು ಅಚ್ಚುಕಟ್ಟಾಗಿ ಜೋಡಿಸಿಟ್ಟಿರುವುದು ಪತ್ತೆಯಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯ ನಿವಾಸಿಗಳು, ಕಳೆದ ಎರಡು ವರ್ಷಗಳಿಂದ ಅಂಚೆ ಇಲಾಖೆಯ ಮೂಲಕ ಮನೆ ಮನೆಗೆ ವಿತರಣೆಯಾಗಬೇಕಿದ್ದ ಈ ಕಾರ್ಡ್‌ಗಳನ್ನು ಟಿಎಂಸಿ ಕಾರ್ಯಕರ್ತರು ಬಲವಂತವಾಗಿ ಕಸಿದುಕೊಂಡು ತಮ್ಮ ಬಳಿಯೇ ಇಟ್ಟುಕೊಂಡಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net