ಟಿಎಂಸಿ ಕಚೇರಿಯಲ್ಲಿ ಕಂತೆ ಕಂತೆ ಹೊಸ ಆಧಾರ್ ಕಾರ್ಡ್‌ಗಳು ಪತ್ತೆ!; ನಾವು ವೋಟ್ ಮಾಡದಂತೆ ತಡೆಯಲು ಹೀಗೆ ಮಾಡಿದ್ದಾರೆ ಎಂದು ಸ್ಥಳೀಯರ ಆರೋಪ! | Aadhaar Scam

Aadhaar Scam |   ಟಿಎಂಸಿ ಕಚೇರಿಯಲ್ಲಿ ಕಂತೆ ಕಂತೆ ಹೊಸ ಆಧಾರ್ ಕಾರ್ಡ್‌ಗಳು ಪತ್ತೆ!
Aadhaar Scam | ಟಿಎಂಸಿ ಕಚೇರಿಯಲ್ಲಿ ಕಂತೆ ಕಂತೆ ಹೊಸ ಆಧಾರ್ ಕಾರ್ಡ್‌ಗಳು ಪತ್ತೆ!
Published on
Aadhaar Scam: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಸೋಲು ಕಂಡ ಕೇವಲ ಎರಡೇ ವಾರಗಳಲ್ಲಿ, ಬಿಧಾನ್ ನಗರ ವಾರ್ಡ್ ಸಂಖ್ಯೆ 36 ಕ್ಕೆ ಒಳಪಡುವ ವಾಸಂತಿ ದೇವಿ ಕಾಲೋನಿಯಲ್ಲಿರುವ ಟಿಎಂಸಿ ಕಚೇರಿಯೊಂದರಿಂದ ಸಾರ್ವಜನಿಕರಿಗೆ ಸೇರಿದ ಆಧಾರ್ ಕಾರ್ಡ್‌ಗಳು ಪತ್ತೆಯಾಗಿದ್ದು, ಈ ಪ್ರಕರಣ ದೇಶ್ಯಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದೆ.
ವರದಿಗಳ ಪ್ರಕಾರ, ಮೇ 4 ರಿಂದ ಮುಚ್ಚಲ್ಪಟ್ಟಿದ್ದ ಈ ಪಕ್ಷದ ಕಚೇರಿಯನ್ನು ಭಾನುವಾರ ಬೆಳಿಗ್ಗೆ ತೆರೆದಾಗ, ಅಲ್ಲಿನ ಪೆಟ್ಟಿಗೆಯೊಂದರಲ್ಲಿ ಕಾರ್ಡ್‌ಗಳನ್ನು ಅಚ್ಚುಕಟ್ಟಾಗಿ ಜೋಡಿಸಿಟ್ಟಿರುವುದು ಪತ್ತೆಯಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯ ನಿವಾಸಿಗಳು, ಕಳೆದ ಎರಡು ವರ್ಷಗಳಿಂದ ಅಂಚೆ ಇಲಾಖೆಯ ಮೂಲಕ ಮನೆ ಮನೆಗೆ ವಿತರಣೆಯಾಗಬೇಕಿದ್ದ ಈ ಕಾರ್ಡ್‌ಗಳನ್ನು ಟಿಎಂಸಿ ಕಾರ್ಯಕರ್ತರು ಬಲವಂತವಾಗಿ ಕಸಿದುಕೊಂಡು ತಮ್ಮ ಬಳಿಯೇ ಇಟ್ಟುಕೊಂಡಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.

ಕಳ್ಳ ಮತದಾನಕ್ಕೆ ಬಳಕೆ...

ಚುನಾವಣೆಯ ವೇಳೆ ಜನರು ಮತದಾನ ಮಾಡದಂತೆ ತಡೆಯಲು ಅಥವಾ ಕಳ್ಳಮತದಾನಕ್ಕೆ ಅನುವು ಮಾಡಿಕೊಡಲು ಈ ಕಾರ್ಡ್‌ಗಳನ್ನು ಬಚ್ಚಿಡಲಾಗಿತ್ತು ಎಂದು ಕೆಲವು ನಿವಾಸಿಗಳು ಆರೋಪಿಸಿದ್ದಾರೆ. ಅಂಚೆ ಇಲಾಖೆಯ ಪೋಸ್ಟ್‌ಮನ್‌ಗಳಿಂದ ಕಾರ್ಡ್‌ಗಳನ್ನು ಬಲವಂತವಾಗಿ ಕಸಿದುಕೊಂಡು ಪಕ್ಷದ ಕಚೇರಿಯಲ್ಲಿ ಇಡಲಾಗುತ್ತಿತ್ತು. ಈ ಹಿಂದೆ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ.
ಜನರಿಗೆ ಬೆದರಿಕೆ ಹಾಕಿ ಮತದಾನ ಮಾಡದಂತೆ ತಡೆಯಲಾಗುತ್ತಿತ್ತು ಎಂದು ಮತ್ತೊಬ್ಬರು ಆರೋಪಿಸಿದ್ದಾರೆ. ಆಧಾರ್ ಕಾರ್ಡ್‌ಗಳ ಜೊತೆಗೆ, ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಮಾರಾಟ ಮಾಡಿದ ಅಥವಾ ಕಬಳಿಸಿದ ಆರೋಪಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳೂ ಸಹ ಈ ಕಚೇರಿಯಲ್ಲಿ ಪತ್ತೆಯಾಗಿವೆ ಎಂದು ವರದಿಯಾಗಿದೆ. ಮೂಲ ಆಧಾರ್ ಕಾರ್ಡ್‌ಗಳು ಸಿಗದ ಕಾರಣ, ಅನೇಕ ಜನರು ಹಣ ನೀಡಿ ನಕಲಿ ಪ್ರತಿಗಳನ್ನು (ಪ್ರಿಂಟ್) ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿತ್ತು ಎಂದು ತಿಳಿದುಬಂದಿದೆ.
ಟಿಎಂಸಿ ಕಚೇರಿಯಿಂದ ಒಟ್ಟು 60 ಕ್ಕೂ ಹೆಚ್ಚು ಆಧಾರ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವೆಲ್ಲವೂ ಹೊಸದಾಗಿವೆ ಎನ್ನಲಾಗಿದೆ. ಈ ಘಟನೆಯ ಕುರಿತು ಬಿಧಾನ್‌ನಗರ ದಕ್ಷಿಣ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಆಧಾರ್ ಕಾರ್ಡ್ ಹಾಗೂ ಇತರ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಂತ್ರಸ್ತ ನಿವಾಸಿಗಳು ಮತ್ತು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಈ ಸಂಬಂಧ ಲಿಖಿತ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಈ ಘಟನೆಯ ಹಿಂದೆ ತೃಣಮೂಲ ಕಾಂಗ್ರೆಸ್ ಆಡಳಿತಾವಧಿಯ ದೊಡ್ಡ ಭ್ರಷ್ಟಾಚಾರದ ಜಾಲವಿದೆ ಎಂದು ಬಿಜೆಪಿ ನಾಯಕ ನಿರಂಜನ್ ಸಿಂಗ್ ಆರೋಪಿಸಿದ್ದಾರೆ. ಮಾಜಿ ಕೌನ್ಸಿಲರ್ ಮನೆ ಮುಂಭಾಗದಲ್ಲಿ ಇಂತಹ ಪ್ರಮುಖ ದಾಖಲೆಗಳು ಪತ್ತೆಯಾಗಿರುವುದು ಸಾಮಾನ್ಯ ವಿಷಯವಲ್ಲ. ಇದರ ಹಿಂದೆ ದೊಡ್ಡ ಪಿತೂರಿ ಇರುವ ಸಾಧ್ಯತೆಯಿದೆ ಎಂದು ಹೇಳಿರುವ ಅವರು, ಪೊಲೀಸ್​​ರಿಂದ ನಿಷ್ಪಕ್ಷಪಾತ ಮತ್ತು ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net